ಅಂಬ್ಯುಲೆನ್ಸ್ ಇಲ್ಲ; ಬೈಕ್‌ನಲ್ಲಿ ಆಸ್ಪತ್ರೆಗೆ ಹೊರಟವರು ಸಾವು
ಇಂಧೋರ್, ಏಪ್ರಿಲ್ 15 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ವಾಹನಗಳು ಸಿಗುವುದು ಕಷ್ಟವಾಗಿದೆ. ಆದರೆ, ಅಂಬ್ಯುಲೆನ್ಸ್‌ಗಳನ್ನು ಆಸ್ಪತ್ರೆ ಸಿಬ್ಬಂದಿ ನೀಡಿದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಇಂಧೋರ್‌ನಲ್ಲಿ ಇಂತಹ ಘಟನೆಯೊಂದು ನಡೆದಿದೆ. ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಸ್ಪತ್ರೆ ಸಿಬ್ಬಂದಿ ಅಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದಾರೆ. ಬೈಕ್‌ನಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
60 ವರ್ಷದ ವ್ಯಕ್ತಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಇಂಧೋರ್‌ನ ಬಿದ್ವಾಲಿ ಚೌಕ್‌ನಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಸಿಬ್ಬಂದಿ ಕೆಲವು ಮಾತ್ರೆಗಳನ್ನು ನೀಡಿ ಅವರನ್ನು ವಾಪಸ್ ಮನೆಗೆ ಕಳಿಸಿದರು.

ಅದೇ ದಿನ ವ್ಯಕ್ತಿಯ ಸ್ಥಿತಿ ಗಂಭೀರವಾಯಿತು. ಕುಟುಂಬದವರು ಆಸ್ಪತ್ರೆಗೆ ಕರೆ ಮಾಡಿ ಅಂಬ್ಯುಲೆನ್ಸ್‌ಗಾಗಿ ಬೇಡಿಕೆ ಇಟ್ಟರು. ಆದರೆ, ಅಂಬ್ಯುಲೆನ್ಸ್ ಕಳಿಸಲು ನಿರಾಕರಿಸಲಾಯಿತು. ಬೇರೆ ದಾರಿ ಕಾಣದೇ ರಾಜ್ಯ ಸರ್ಕಾರ ನಡೆಸುವ ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದುಕೊಂಡು ಹೋಗಲಾಯಿತು.
ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಂತೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಯಿತು. ಈಗ ಕುಟುಂಬ ಸದಸ್ಯರ ರಕ್ತ, ಗಂಟಲು ದ್ರವದ ಮಾದರಿಯನ್ನು ಕೋವಿಡ್ -19 ಪರೀಕ್ಷೆಗಾಗಿ ಪಡೆಯಲಾಗಿದೆ.
ಇಂಧೋರ್‌ನ ಮುಖ್ಯ ಆರೋಗ್ಯಾಧಿಕಾರಿ ಡಾ. ಪ್ರವೀಣ್ ಜೈಡಾ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. "ಸೋಮವಾರ ವ್ಯಕ್ತಿ ಆಸ್ಪತ್ರೆಗೆ ಬಂದು ಹೋಗಿದ್ದರು. ಬಳಿಕ ಅವರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಬಳಿಕ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆವಾಗ ಅವರು ಮೃತಪಟ್ಟಾಗಿತ್ತು" ಎಂದು ಹೇಳಿದ್ದಾರೆ.
ಇದೇ ತರಹದ ಮತ್ತೊಂದು ಪ್ರಕರಣ ಖಂದ್ವಾ ಜಿಲ್ಲೆಯಲ್ಲಿ ದಾಖಲಾಗಿದೆ. ಶೇಖ್ ಹಮೀದ್ ಎಂಬ 65 ವರ್ಷದ ವೃದ್ಧ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದ. ಅಂಬ್ಯುಲೆನ್ಸ್ ಸಿಗದ ಕಾರಣ ಬೈಕ್‌ನಲ್ಲಿ ಕರೆದುಕೊಂಡು ಹೋಗಲಾಯಿತು. ಆದರೆ, ಆಸ್ಪತ್ರೆ ಸೇರುವಾಗ ಆತ ಮೃತಪಟ್ಟಿದ್ದ.
ಮಧ್ಯಪ್ರದೇಶದಲ್ಲಿ ಇದುವರೆಗೂ 730 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. 50 ಜನರು ಮೃತಪಟ್ಟಿದ್ದಾರೆ. ಇಂಧೋರ್ ಮತ್ತು ಭೋಪಾಲ್‌ನಲ್ಲಿಯೇ ಹೆಚ್ಚು ಸೋಂಕಿತರು ಇದ್ದಾರೆ.












Click it and Unblock the Notifications