ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕರು
ಭೋಪಾಲ್, ಜುಲೈ 24: ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ವಿಶ್ವಾಸಮತ ಗೆಲ್ಲಲಾಗದೆ ನೆಲಕಚ್ಚುತ್ತಿದ್ದಂತೆಯೇ ಮಧ್ಯಪ್ರದೇಶದಲ್ಲೂ ಸರ್ಕಾರ ಬೀಳುತ್ತಿದೆ ಎಂದುಕೊಂಡಿದ್ದ ಬಿಜೆಪಿಗೆ ಮುಖಭಂಗವಾಗುವಂಥ ಘಟನೆ ನಡೆದಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ಬುಧವಾರ ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸುವ ವೇಳೆ ಇಬ್ಬರು ಬಿಜೆಪಿ ಶಾಸಕರು ಅಡ್ಡಮತದಾನ ಮಾಡಿ ಕಾಯ್ದೆಗೆ ಬೆಂಬಲ ಸೂಚಿಸಿದ್ದಾರೆ. ವಕೀಲ ರಕ್ಷಣಾ ಕಾಯ್ದೆಯನ್ನು ಕಳೆದ 15 ವರ್ಷಗಳಿಂದ ಜಾರಿಗೆ ತರಬೇಕೆಂದು ಯೋಚಿಸಲಾಗಿತ್ತಾದರೂ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅದನ್ನು ಜಾರಿಗೆ ತಂದಿರಲಿಲ್ಲ.
2018 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಚುನಾವಣೆಗೂ ಮುನ್ನವೇ ಈ ಮಸೂದೆಯನ್ನು ಮಂಡನೆ ಮಾಡುವ ಭರವಸೆಯನ್ನು ನೀಡಿತ್ತು. ಅಂತೆಯೇ ಇದೀಗ ಮಸೂದೆ ಮಂಡನೆ ಮಾಡಿದ್ದು ಬಿಜೆಪಿ ಇದಕ್ಕೆ ಸಹಮತ ಸೂಚಿಸಿರಲಿಲ್ಲ. ಆದರೂ ಬಿಜೆಪಿಯ ಶರದ್ ಕೋಲ್ ಮತ್ತು ನಾರಾಯಣ್ ತ್ರಿಪಾಠಿ ಎಂಬ ಶಾಸಕರು ಮಸೂದೆಯ ಪರ ಅಡ್ಡಮತದಾನ ಮಾಡಿ ಬಿಜೆಪಿಗರ ಕೆಂಗಣ್ಣಿಗೆ ತುತ್ತಾದರು.

"ಬಿಜೆಪಿಯ ಕೇಂದ್ರ ನಾಯಕರು ಆದೇಶಿಸಿದರೆ 24 ಗಂಟೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುತ್ತೇವೆ" ಎಂದು ಕಮಲ್ ನಾಥ್ ಅವರಿಗೆ ಎಚ್ಚರಿಕೆ ನೀಡಿದ್ದ ಬಿಜೆಪಿಗೆ ತನ್ನದೇ ಶಾಸಕರ ಈ ನಡೆ ತೀವ್ರ ಮುಜುಗರವನ್ನುಂಟು ಮಾಡಿದೆ.












Click it and Unblock the Notifications