ನವೆಂಬರ್ ನಲ್ಲಿ ಯಶವಂತಪುರ-ಪೀಣ್ಯ ಮೆಟ್ರೋ ರೈಲು
ಬೆಂಗಳೂರು, ಅ.16 : ಪೀಣ್ಯ ಮತ್ತು ಯಶವಂತಪುರದ ನಡುವೆ ಸಂಚರಿಸುವ ಜನರಿಗೆ ಸಿಹಿ ಸುದ್ದಿ ಕಾದಿದೆ. ನವೆಂವರ್ ಅಂತ್ಯಕ್ಕೆ ಈ ಮಾರ್ಗದ ನಮ್ಮ ಮೆಟ್ರೋ ಸಂಚಾರ ಪ್ರಾರಂಭಿಸಲು ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದೆ.
9.9 ಕಿ.ಮೀ. ವ್ಯಾಪ್ತಿಯ ಪೀಣ್ಯ-ಯಶವಂತಪುರ ನಡುವಿನ ನಮ್ಮ ಮೆಟ್ರೋ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರೈಲ್ವೆ ಇಲಾಖೆಯ ಸುರಕ್ಷತೆಯ ಪ್ರಮಾಣ ಪತ್ರ ದೊರೆಕಿದರೆ, ಮಾರ್ಗದಲ್ಲಿ ಮೆಟ್ರೋ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ.

ಬಿಎಂಆರ್ ಸಿಎಲ್ ಅಧಿಕಾರಿಗಳು ನವೆಂವರ್ ಅಂತ್ಯದ ವೇಳೆಗೆ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಸಜ್ಜಾಗಿದ್ದಾರೆ. ಈ ಕುರಿತು ಬಿಎಂಆರ್ ಸಿಎಲ್ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಸಹ ಹೇಳಿಕೆ ನೀಡಿದ್ದು, ನವೆಂಬರ್ 30ರೊಳಗೆ ಎಲ್ಲಾ ಕೆಲಸಗಳನ್ನು ಮುಗಿಸಿ, ರೈಲು ಸಂಚಾರ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಬಿಎಂಆರ್ ಸಿಎಲ್ ಶೀಘ್ರದಲ್ಲೇ ಪ್ರಾಯೋಗಿಕ ಸಂಚಾರ ವೀಕ್ಷಿಸಲು ಆಗಮಿಸುವಂತೆ ರೈಲ್ವೆ ಸುರಕ್ಷತಾ ಸಮಿತಿಗೆ ಆಹ್ವಾನ ನೀಡಲಿದೆ. ಆಹ್ವಾನ ತಲುಪಿದ ನಂತರ ಒಂದು ತಿಂಗಳ ಅವಧಿಯಲ್ಲಿ ಸಮಿತಿ ಆಗಮಿಸಿ ಪ್ರಾಯೋಗಿಕ ಸಂಚಾರದ ವೀಕ್ಷಣೆ ನಡೆಸಲಿದೆ.
ಆದರೆ, ರೀಚ್ 3ಬಿಯ ಪೀಣ್ಯ-ನಾಗಸಂದ್ರ ಮಾರ್ಗದ ಸಾರ್ವಜನಿಕರು ರೈಲು ಸಂಚಾರಕ್ಕಾಗಿ ಮಾರ್ಚ್ 2014ರವರೆಗೆ ಕಾಯುವುದು ಅನಿವಾರ್ಯವಾಗಿದೆ ಎಂದು ಪ್ರದೀಪ್ ಸಿಂಗ್ ಕರೋಲಾ ಹೇಳಿದ್ದಾರೆ.
ಸಚಿವರಿಂದ ಮೆಟ್ರೋ ಕಾಮಗಾರಿ ವೀಕ್ಷಣೆ : ನಮ್ಮ ಮೆಟ್ರೊ ನಿಲ್ದಾಣಗಳ ಬಳಿ ಇರುವ ಬಿಬಿಎಂಪಿ ಜಾಗದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದ ಕೆ.ಆರ್.ರಸ್ತೆ ಮತ್ತು ಮೈಸೂರು ರಸ್ತೆಯ 'ನಮ್ಮ ಮೆಟ್ರೊ' ನಿಲ್ದಾಣಗಳ ಕಾಮಗಾರಿಯನ್ನು ಮಂಗಳವಾರ ಸಚಿವರು ಪರಿಶೀಲನೆ ನಡೆಸಿದರು. ಕೆಲವು ಮೆಟ್ರೊ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲದಂತೆ ಈ ಹಿಂದೆ ಯೋಜನೆ ರೂಪಿಸಲಾಗಿದೆ.
ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ನಿಲ್ದಾಣಗಳ ಸಮೀಪದಲ್ಲೇ ಇರುವ ಬಿಬಿಎಂಪಿ ಜಾಗವನ್ನು ಗುರುತಿಸಿ ವಾಹನ ನಿಲುಗಡೆ ಪ್ರದೇಶವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.












Click it and Unblock the Notifications