ಡಿಕೆಶಿ ಬಂಧನ: ಬಿಜೆಪಿ ಶಾಸಕರಿಗೆ ಯಡಿಯೂರಪ್ಪ ಕೊಟ್ಟರು ಎಚ್ಚರಿಕೆ
ಬೆಂಗಳೂರು, ಸೆಪ್ಟೆಂಬರ್ 04: ಅತ್ತ ಡಿ.ಕೆ.ಶಿವಕುಮಾರ್ ಬಂಧನ ಆಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಅವರು ಬಿಜೆಪಿ ಶಾಸಕರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
'ಯಾವುದೇ ಕಾರಣಕ್ಕೂ ಬಿಜೆಪಿ ಶಾಸಕರು, ಸಚಿವರು ಯಾರೂ ಡಿ.ಕೆ.ಶಿವಕುಮಾರ್ ಬಂಧನದ ಬಗ್ಗೆ ಪರವಾಗಿ ಆಗಲಿ ವಿರೋಧವಾಗಿ ಆಗಲಿ ಪ್ರತಿಕ್ರಿಯೆ ನೀಡಬಾರದು' ಎಂದು ಯಡಿಯೂರಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.
ಡಿಕೆಶಿ ಬಂಧನ: ಸಿಎಂ ಯಡಿಯೂರಪ್ಪ ಹೇಳಿದ್ದು ಹೀಗೆ
ಯಡಿಯೂರಪ್ಪ ಅವರು ಡಿಕೆಶಿ ಅವರಿಗೆ ಆತ್ಮೀಯರು, ಅಷ್ಟೆ ಅಲ್ಲದೆ, ಡಿಕೆಶಿಗೆ ರಾಜ್ಯದಾದ್ಯಂತ ಭಾರಿ ಬೆಂಬಲಿಗರು ಇದ್ದು, ಅವರು ಒಕ್ಕಲಿಗ ಸಮುದಾಯದ ಮುಖಂಡರೂ ಆಗಿದ್ದಾರೆ, ಹಾಗಾಗಿ ಅವರ ವಿರುದ್ಧ ನೀಡುವ ಹೇಳಿಕೆ ಪಕ್ಷಕ್ಕೆ ಮುಳುವಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಯಡಿಯೂರಪ್ಪ ಈ ರೀತಿಯ ಸೂಚನೆಯನ್ನು ನೀಡಿದ್ದಾರೆ.

ಸಚಿವ ಎಚ್.ನಾಗೇಶ್ ಮಾಹಿತಿ ನೀಡಿದ್ದಾರೆ
ಈ ಬಗ್ಗೆ ಸ್ವತಃ ಸಚಿವ ಎಚ್.ನಾಗೇಶ್ ಅವರು ಮಾಹಿತಿ ನೀಡಿದ್ದು, ಡಿ.ಕೆ.ಶಿವಕುಮಾರ್ ಅವರ ಬಗ್ಗೆ ತುಟಿ ಬಿಚ್ಚದಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಮಾಧ್ಯಮಗಳ ಮುಂದೆಯೇ ಗುಟ್ಟು ಹೊರಹಾಕಿದ್ದಾರೆ.

ತಮಾಷೆಯಾಗಿಯೇ ಗುಟ್ಟು ರಟ್ಟು ಮಾಡಿದ ಸಚಿವ
'ಮೂರ್ನಾಲ್ಕು ಸಚಿವರಿಗೆ ಬಾಯಿ ಮುಚ್ಚಿಕೊಂಡು ಇರಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇನ್ನು ನಾನು ಮಾತನಾಡಿ ನನಗೂ ಹಾಗೆಯೇ ಹೇಳಿದರೆ ಏನು ಮಾಡೋದು' ಎಂದು ತಮಾಷೆಯಾಗಿಯೇ ಗುಟ್ಟು ರಟ್ಟು ಮಾಡಿದ್ದಾರೆ ಎಚ್.ನಾಗೇಶ್.
'ಬಿಜೆಪಿಯ ಮಿತ್ರರೇ' ಎಂದ ಡಿಕೆಶಿ ಹೇಳಿಕೆಯ ಹಿಂದಿನ ಮರ್ಮವೇನು?

ಅಶ್ವತ್ಥನಾರಾಯಣ್ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿತ್ತು
ಸಚಿವರಾದ ಶ್ರೀರಾಮುಲು, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್, ಮತ್ತೊಬ್ಬ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಿದ್ದರು. ಇವರ ಹೇಳಿಕೆಗಳು ಅದರಲ್ಲಿಯೂ ಅಶ್ವತ್ಥನಾರಾಯಣ್ ಅವರ ಹೇಳಿಕೆ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಹಾಗಾಗಿ ಯಡಿಯೂರಪ್ಪ ಈ ಸೂಚನೆಯನ್ನು ರವಾನಿಸಿದ್ದಾರೆ.

ಕ್ಷಮಾಪಣೆ ಕೇಳಿದ ಶ್ರೀರಾಮುಲು
ಶ್ರೀರಾಮುಲು ಅವರು ಮಾತ್ರ ಮೊದಲಿಗೆ ಡಿ.ಕೆ.ಶಿವಕುಮಾರ್ ಅವರನ್ನು ನಿಂದಿನಿ ಆ ನಂತರ ಬಹಿರಂಗವಾಗಿಯೇ ಕ್ಷಮಾಪಣೆ ಕೇಳಿದರು. ಆದರೆ ಅಶ್ವತ್ಥನಾರಾಯಣ್ ಮತ್ತು ಗೋವಿಂದ ಕಾರಜೋಳ ಅವರು ಕ್ಷಮಾಪಣೆ ಕೇಳಲು ನಿರಾಕರಿಸಿದರು. ಸಿಎಂ ಯಡಿಯೂರಪ್ಪ ಸ್ವತಃ, 'ಡಿಕೆಶಿ ಹೊರಗೆ ಬಂದರೆ ನಾನೇ ಹೆಚ್ಚು ಸಂತೋಶ ಪಡುತ್ತೇನೆ' ಎಂದಿದ್ದರು.