ಡಿಸೆಂಬರ್ 31ರ ರಾತ್ರಿ ಮೆಟ್ರೋ ಪ್ರಯಾಣ ದುಬಾರಿ
ಬೆಂಗಳೂರು, ಡಿಸೆಂಬರ್ 28 : ಹೊಸ ವರ್ಷದ ಆಚರಣೆಗಾಗಿ ಮಹಾತ್ಮಾ ಗಾಂಧಿ ರಸ್ತೆ, ಟ್ರಿನಿಟಿ ವೃತ್ತದೆಡೆಗೆ ಹೋಗುವವರಿಗೆ ಅನುಕೂಲವಾಗುವಂತೆ ಡಿ.31ರ ರಾತ್ರಿ 11 ರಿಂದ ಮಧ್ಯರಾತ್ರಿ 2 ರವರೆಗೆ ನಾಯಂಡಹಳ್ಳಿ-ಬೈಯ್ಯಪ್ಪನಹಳ್ಳಿ ಮತ್ತು ನಾಗಸಂದ್ರ-ಯಲಚೇನಹಳ್ಳಿ ನಡುವೆ ಪ್ರತಿ 15 ನಿಮಿಷದ ಅಂತರದಲ್ಲಿ ರೈಲು ಸೇವೆ ಇರಲಿದೆ.
ಈ ೪ ಗಂಟೆ ವಿಸ್ತರಣಾ ಅವಧಿಯಲ್ಲಿ ಎಂಜಿ ರಸ್ತೆ, ಟ್ರಿನಿಟಿ ವೃತ್ತ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ಹೋಗಬೇಕಿದ್ದರೂ 50 ರೂ. ಟಿಕೆಟ್ ದರವಿರಲಿದೆ. ಟ್ರಿನಿಟಿ-ನಾಗಸಂದ್ರ ನಡುವೆ ಹೊರತುಪಡಿಸಿ ಈ ಮೂರು ನಿಲ್ದಾಣದಿಂದ ನಾಲ್ಕೂ ದಿಕ್ಕಿನ ಕೊನೆಯ ನಿಲ್ದಾಣಕ್ಕೆ ಪ್ರಯಾಣಿಸಿದರೂ 50 ರೂ. ಆಗುವುದಿಲ್ಲ. ಆದರೆ ಡಿ.31ರ ರಾತ್ರಿ ಒಂದು ನಿಲ್ದಾಣಕ್ಕೆ ಹೋಗಬೇಕೆಂದರೆ ಅಷ್ಟು ಹಣ ನೀಡಲೇಬೇಕು. ಚಿಲ್ಲರೆ ಸಮಸ್ಯೆಯ ಕಾರಣ ನೀಡಿ ನಿಗಮ ಈ ನಿರ್ಧಾರ ಕೈಗೊಂಡಿದೆ.

ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೆ ವರ್ಷಕ್ಕೆ ಪ್ರತಿ ವರ್ಷ ಮೆಟ್ರೋ ಸೇವೆಯನ್ನು ತಡರಾತ್ರಿ 2 ಗಂಟೆಯವರೆಗೂ ವಿಸ್ತರಿಸುತ್ತಿದೆ. ಕಳೆದ ವರ್ಷ ಡಿ.31ರ ರಾತ್ರಿ 11 ರಿಂದ 2 ಗಂಟೆಯವರೆಗೆ 35 ಸಾವಿರ ಮಂದಿ ಮೆಟ್ರೋ ಬಳಸಿದ್ದರು.
ಅಂದು ಒಟ್ಟಾರೆ ನಮ್ಮ ಮೆಟ್ರೋ ಟಿಕೇಟ್ ಆದಾಯ 39.60 ಲಕ್ಷ ರೂ ಆಗಿದ್ದರೆ, ವಿಸ್ತರಣೆಯಾದ 4 ಗಂಟೆ ಅವಧಿಯಲ್ಲೇ 5.59 ಲಕ್ಷ ರೂ. ಸಂಗ್ರಹವಾಗಿತ್ತು. ಈ ವರ್ಷ ನಾಲ್ಕು ದಿಕ್ಕಿಗೂ ಮೆಟ್ರೋ ವಿಸ್ತರಣೆಯಾಗಿರುವುದರಿಂದ ಎಂಜಿ ರಸ್ತೆ ಆಗಮಿಸಲು ಹೆಚ್ಚಿನ ಜನ ಮೆಟ್ರೋ ಬಳಸಲಿದ್ದಾರೆ. ಹಾಗಾಗಿ ನಿಗಮ ಹೆಚ್ಚಿನ ದರ ನಿಗದಿ ಮಾಡಿದೆ.












Click it and Unblock the Notifications