ಜಿಬಿಎ: ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ಸಸ್ಪೆಂಡ್: ರಾಜೇಂದ್ರ ಚೋಳನ್ ಎಚ್ಚರಿಕೆ!
ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಲೆ ಒತ್ತಡ ಹೆಚ್ಚಾಗುತ್ತಿರುವುದರಿಂದ ಗ್ರೇಟರ್ ಬೆಂಗಳೂರು ಆಡಳಿತ ರಚನೆ ಮಾಡಲಾಗಿದೆ. ಹೊಸ ಜಿಬಿಎ ಮೇಲೆ ಜನರಿಗೆ ವಿಪರೀತವಾದ ನಿರೀಕ್ಷೆ ಇದೆ. ಈ ರೀತಿ ಇರುವಾಗಲೇ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಬೆಂಗಳೂರು ನಗರ ಕೇಂದ್ರ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ನಗರ ಪಾಲಿಕೆ ಸಿ.ವಿ ರಾಮನ್ ನಗರ ವಿಭಾಗದ ವ್ಯಾಪ್ತಿಯಲ್ಲಿ ಬುಧವಾರ (ಸೆಪ್ಟೆಂಬರ್ 17)ರಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಹಾಳಾದ ಪಾದಚಾರಿಗಳು, ರಸ್ತೆ ಗುಂಡಿಗಳು, ಕಸಗುಡಿಸದಿರುವುದು, ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗದಿರುವುನ್ನು ಗಮನಿಸಿದ ಅವರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದ ಇಂಜಿನೀಯರ್ ಗಳನ್ನು ಹಾಗೂ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜೀವನ್ ಭೀಮಾ ನಗರ ಮುಖ್ಯ ರಸ್ತೆ ಬದಿ ಖಾಲಿ ನಿವೇಶನವಿದೆ. ಈ ಸ್ಥಳದಲ್ಲಿ ತ್ಯಾಜ್ಯ ತುಂಬಿದ್ದು, ಖಾಲಿ ನಿವೇಶನದಾರರಿಗೆ ನೋಟಿಸ್ ನೀಡಿ, ಸ್ವಚ್ಛವಾಗಿಟ್ಟುಕೊಳ್ಳಲು ಸೂಚಿಸುವಂತೆ ಹಾಗೂ ಈ ನಿವೇಶನದವರು ಪಾದಚಾರಿ ಮಾರ್ಗ ಹಾಗೂ ರಸ್ತೆಯನ್ನು ಒತ್ತು ಮಾಡಿಕೊಂಡು ಶೆಡ್ ನಿರ್ಮಾಣ ಮಾಡಿಕೊಂಡಿದ್ದು, ಈ ಪೈಕಿ ಕೂಡಲೆ ಶೆಡ್ ಅನ್ನು ತೆರವುಗೊಳಿಸಿ ಸಂಬಂಧಪಟ್ಟವರಿಗೆ ದಂಡ ವಿಧಿಸಲು ಸೂಚನೆ ನೀಡಿದರು. ಇದೇ ರೀತಿಯಲ್ಲಿ ಪಾದಚಾರಿ ಎಲ್ಲಾ ಒತ್ತುವರಿಯನ್ನು ಗುರುತಿಸಿ ತೆರವುಗೊಳಿಸಲು ಹೇಳಲಾಗಿದೆ.
ಹೆಚ್.ಎ.ಎಲ್ 3ನೇ ಹಂತ, 5ನೇ ಕ್ರಾಸ್ ಬೀದಿ ಸ್ವಚ್ಛಗೊಳಿಸದೇ ಇರುವುದನ್ನು ಗಮನಿಸಿ, ಸಂಜೆಯೊಳಗಾಗಿ ಸ್ವಚ್ಛಗೊಳಿಸಿ ವರದಿ ಸಲ್ಲಿಸಲು ಸೂಚನೆ ನೀಡಿದರು. 9ನೇ ಮುಖ್ಯ ರಸ್ತೆ ಎಲ್.ಐ.ಸಿ ಕಾಲೋನಿ ಸೆಕ್ಟರ್ 11ರಲ್ಲಿ ಇಡೀ ಬೀದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಸೂಚನೆ ನೀಡಿದರು.
ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಭೇಟಿ: ಜೀವನ್ ಭೀಮಾನಗರ ಮುಖ್ಯ ರಸ್ತೆಯಲ್ಲಿರುವ ಬರುವ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಬರುವ ತ್ಯಾಜ್ಯವನ್ನು ರಸ್ತೆ ಮೇಲೆ ಸುರಿದು ನಂತರ ವಿಂಗಣೆ ಮಾಡಿ ಘಟಕದೊಳಗೆ ತೆಗೆಕೊಂಡು ಹೋಗುತ್ತಿದ್ದು, ಇದರಿಂದ ರಸ್ತೆಯಲ್ಲಿ ವಾಸನೆ ಬರುವುದರ ಜೊತೆಗೆ ಪಾದಚಾರಿಗಳ, ವಾಹನಗಳ ಸಂಚಾರಕ್ಕೆ ಕೂಡಾ ಸಮಸ್ಯೆ ಆಗುತ್ತಿರುವುದನ್ನು ಗಮನಿಸಿ, ಕೂಡಲೇ ಘಟಕದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಒಣ ತ್ಯಾಜ್ಯ ಸಂಗ್ರಹಿಸಿ ವಿಂಗಣೆ ಕಾರ್ಯ ನಡೆಸಲು ಅಗತ್ಯ ಕ್ರಮ ಮಾಡಿಕೊಳ್ಳಲು ಸೂಚನೆ ನೀಡಿದರು. ಇದಕ್ಕೆ ಸಂಬಂಧಿಸಿದಂತೆ ಘನತ್ಯಾಜ್ಯ ನಿರ್ವಹಣೆ ನಿಗಮ ನಿಯಮಿತದಿಂದ ಸಹಕಾರ ಪಡೆಯುವಂತೆ ತಿಳಿಸಲಾಗಿದೆ.
ಜೀವನ್ ಭೀಮಾನಗರ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಪಕ್ಕದಲ್ಲಿ ಪಾದಚಾರಿ ಹಾಗೂ ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ನರ್ಸರಿ ಪಾಟ್‌ಗಳನ್ನು ಮಾರಾಟ ಮಾಡುತ್ತಿದೆ. ಇದರಿಂದ ಸಂಚಾರಕ್ಕೆ ಅಡಚಣೆಯಾಗುವುದರಿಂದ, ಅದನ್ನು ಕೂಡಲೇ ತೆರವುಗೊಳಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಆ ಬಳಿಕ ದೊಮ್ಮಲೂರು ಮೇಲ್ಸೇತುವೆ ಬಳಿ ಇರುವ ನಗರಪಾಲಿಕೆಯ ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಭೇಟಿ ನೀಡಿ, ಮಿನಿ ಟ್ರಾನ್ಸ್ ಫರ್ ಸ್ಟೇಷನ್ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಲು ಸೂಚನೆ ನೀಡಿದರು.
ಬ್ಲಾಕ್ ಸ್ಪಾಟ್ ಗಳ ಪಟ್ಟಿ ಕೊಡಿ: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಬದಿ ಕಸ ಸುರಿಯುವ ಸ್ಥಳ(ಬ್ಲಾಕ್ ಸ್ಪಾಟ್)ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಈ ಸಂಬಂಧ ವಾರ್ಡ್ ವಾರು ಬ್ಲಾಕ್ ಸ್ಪಾಟ್ ಸ್ಥಳಗಳನ್ನು ಪಟ್ಟಿ ಮಾಡಿ, ಸ್ವಚ್ಛತಾ ಅಭಿಯಾನ ಕೈಕೊಂಡು, ಆ ಸ್ಥಳಗಳನ್ನು ಆಕರ್ಷಣೀಯ ಸ್ಥಳಗಳನ್ನಾಗಿ ಮಾಡಬೇಕು. ಮತ್ತೆ ಆ ಸ್ಥಳಗಳಲ್ಲಿ ಕಸ ಹಾಕದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಬಿಡಿಎ ಕಾಂಪ್ಲೇಕ್ಸ್ ಮುಂಭಾಗದ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ: ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಇಂದಿರಾ ನಗರದ ಬಿಡಿಎ ಕಾಂಫ್ಲೆಕ್ಸ್ ಬಳಿಯ ರಸ್ತೆಯುದ್ದಕ್ಕೂ ತ್ಯಾಜ್ಯ, ಕಟ್ಟಡ ಭಗ್ನಾವಶೇಷಗಳು, ಅನುಪಯುಕ್ತ ವಸ್ತುಗಳನ್ನು ಹಾಕಿರುವುದನ್ನು ಗಮನಿಸಿ ಈ ಜಾಗದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಹಾಗೂ ವಾರ್ಡ್ ಎ.ಎಂ.ಸಿ ತಂಡಗಳನ್ನು ನಿಯೋಜಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಸೂಚನೆ ನೀಡಿದರು. ಜೊತೆಗೆ ತ್ಯಾಜ್ಯ ಹಾಕಿರುವವರ ಮೇಲೆ ಹಾಕಿರುವವರ ಮೇಲೆ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಲು ಸಹ ಸೂಚಿಸಲಾಗಿದೆ.
ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಬಿಡಿಎ ಕಾಂಪ್ಲೆಕ್ಸ್ ಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಪಾದಚಾರಿ ಮಾರ್ಗ, ಸೈಕಲ್ ಟ್ರ್ಯಾಕ್ ಸೇರಿದಂತೆ ಅಗತ್ಯ ಕಾಮಗಾರಿ ನಡೆಸಿ ಸಂಪೂರ್ಣ ರಸ್ತೆ ಸಮಗ್ರವಾಗಿ ಅಭಿವೃದ್ಧಿಪಡಿಸಿ ಮಾದರಿ ರಸ್ತೆಯನ್ನಾಗಿ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಜಲಮಂಡಳಿ ವತಿಯಿಂದ ರಸ್ತೆ ಅಗೆದಿರುವ ಪಟ್ಟಿ ಕೊಡಿ: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಲಮಂಡಳಿ ವತಿಯಿಂದ ರಸ್ತೆ ಅಗೆದಿರುವ ಹಾಗೂ ಒಳಚರಂಡಿಗಳ ಮ್ಯಾನ್ ಹೋಲ್ ದುರಸ್ತಿಯಾಗಿರುವ ಬಗ್ಗೆ ಪಟ್ಟಿ ಸಿದ್ಧಪಡಿಸಿ ವರದಿ ನೀಡಿ, ಆ ಬಳಿಕ ಜಲಮಂಡಳಿ ಅಧಿಕಾರಿಗಳೊಂದಿಗೆ ಜೊತೆ ಮಾತನಾಡಿ ದುರಸ್ತಿ ಕಾರ್ಯ ಕೈಗೊಳ್ಳಲು ಕ್ರಮವಹಿಸಲಾಗುವುದೆಂದು ಸೂಚಿಸಿದರು.












Click it and Unblock the Notifications