'ಮಹಿಳಾ ಟೆಕ್ಕಿ ರೇಪ್ ಆರೋಪಿ ಇನ್ನೂ ಸುಳಿವಿಲ್ಲ'
ಬೆಂಗಳೂರು, ಜೂ.8: ಎಲೆಕ್ಟ್ರಾನಿಕ್ ಸಿಟಿ ಸಮೀಪವಿರುವ ದೊಡ್ಡ ತೋಗೂರಿನಲ್ಲಿ ವಾಸವಾಗಿದ್ದ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಸುಳಿವು ಇನ್ನೂ ಸಿಕ್ಕಿಲ್ಲ. ಜಾರ್ಖಂಡ್ ಮೂಲದ ಯುವತಿ ಮೇಲೆ ಇತ್ತೀಚೆಗೆ ಅತ್ಯಾಚಾರ ಎಸಗಲಾಗಿತ್ತು.
ದೊಡ್ಡ ತೋಗೂರು ಬಳಿ ಇರುವ ಪೇಯಿಂಗ್ ಗೆಸ್ಟ್ ಮನೆಯೊಂದರಲ್ಲಿ ವಾಸವಾಗಿದ್ದ ವರ್ಷದ ವಯಸ್ಸಿನ ಯುವತಿಯ ಮೇಲೆ ಶುಕ್ರವಾರ ಮುಂಜಾನೆ 3.50 ರ ಸುಮಾರಿಗೆ ಆಗುಂತಕನೊಬ್ಬ ಅತ್ಯಾಚಾರ ನಡೆಸಿ, ಯುವತಿಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದ. ಯುವತಿ ಈಗ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಸಿಸಿಟಿವಿಯಲ್ಲಿ ಸುಳಿವು?: ಆರೋಪಿಯ ಸುಳಿವು ಇನ್ನೂ ಸಿಕ್ಕಿಲ್ಲವಾದರೂ, ಆರೋಪಿಗೆ ಅತ್ಯಾಚಾರ ಮಾಡುವ ಉದ್ದೇಶವಿರಲಿಲ್ಲ, ಚಿನ್ನಾಭರಣ ದೋಚಲು ಬಂದವನು ಆಕೆಯನ್ನು ಘಾಸಿಗೊಳಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಗುರುವಾರ(ಜೂ.5) ರಾತ್ರಿ ಕೋನಪ್ಪನ ಅಗ್ರಹಾರ ಸಮೀಪದ ಪಿ.ಜಿ ಕೇಂದ್ರದಲ್ಲೂ ಇಂಥದ್ದೇ ಘಟನೆ ವರದಿಯಾಗಿದೆ. ದುಷ್ಕರ್ಮಿಯೊಬ್ಬ ಪಿ.ಜಿಗೆ ನುಗ್ಗಿ ಯುವತಿಯೊಬ್ಬಳ ಬಳಿ ಇದ್ದ ಚಿನ್ನಾಭರಣ ದೋಚಿದ ದೃಶ್ಯ ಕಟ್ಟಡದ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಎರಡು ಪ್ರಕರಣವನ್ನು ಪರಿಶೀಲಿಸಲಾಗುತ್ತಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಕಾನೂನು ಮತ್ತು ಸುವವ್ಯಸ್ಥೆ ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.
ಘಟನೆ ವಿವರ: ಪೇಯಿಂಗ್ ಗೆಸ್ಟ್ ನಲ್ಲಿ ನಾಲ್ವರು ಯುವತಿಯರು ವಾಸಿಸುತ್ತಿದ್ದಾರೆ. ಘಟನೆ ನಡೆದ ದಿನ ಅತ್ಯಾಚಾರಕ್ಕೊಳಗಾದ ಯುವತಿ ಹಾಗೂ ಆಕೆ ಗೆಳತಿ ಇದ್ದರು. ಯುವತಿಯ ಗೆಳತಿ ಬೆಳಗ್ಗಿನ ಜಾವ 3.30ರ ಆಫೀಸ್ ಕ್ಯಾಬ್ ಹತ್ತಿ ಕೆಲಸಕ್ಕೆ ಹೋಗಿದ್ದಾಳೆ. ಹೋಗುವ ಮುನ್ನ ಮುಖ್ಯ ಬಾಗಿಲನ್ನು ಹೊರಗಿನಿಂದ ಬೀಗ ಹಾಕಿ, ಕೀ ಕಿಟಕಿ ಬಳಿ ಇಟ್ಟು ಹೋಗಿದ್ದಾಳೆ.
ಮೇನ್ ಡೋರ್ ಕೀ ಎಲ್ಲಿಟ್ಟುತ್ತಾರೆ ಎಂಬುದರ ಸುಳಿವು ಪಡೆದುಕೊಂಡ ದುಷ್ಕರ್ಮಿ ರೂಮಿನೊಳಗೆಗೆ ಪ್ರವೇಶಿಸಿದ್ದಾನೆ. ಯುವತಿಯ ಬಳಿ ತೆರಳಿ ಚಿನ್ನದ ಸರ ಕದಿಯಲು ಯತ್ನಿಸಿದ್ದಾನೆ. ಗಾಬರಿಗೊಂಡ ಯುವತಿ ಚೀರಿದ್ದಾಳೆ. ಆಕೆ ಬಾಯಿಗೆ ಬಟ್ಟೆ ತುರುಕಿ, ಆಕೆ ಕೈಗೆ ಚಾಕುವಿನಿಂದ ಇರಿದಿದ್ದಾನೆ. ಆಕೆ ಪ್ರತಿರೋಧದಿಂದ ಸಿಟ್ಟಿಗೆದ್ದು ನಂತರ ಆಕೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಗುರುವಾರ ನಡೆದ ಪ್ರಕರಣದಲ್ಲಿ ದುಷ್ಕರ್ಮಿ ಇದೇ ರೀತಿ ಪಿಜಿ ಕೇಂದ್ರಕ್ಕೆ ನುಗ್ಗಿ ಯುವತಿಯನ್ನು ಬೆದರಿಸಿ ಚಿನ್ನಾಭರಣ ದೋಚಿದ್ದಾನೆ, ಆದರೆ, ಈ ಪ್ರಕರಣದಲ್ಲಿ ಮಾತ್ರ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಜಾರ್ಖಂಡ್ ಮೂಲದ ಯುವತಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರ ಅತ್ಯಾಚಾರ ನಡೆದಿರುವ ಬಗ್ಗೆ ಖಚಿತ ಮಾಹಿತಿ ಸಿಗಲಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಟಿ.ಡಿ ಪವಾರ್ ಹೇಳಿದ್ದಾರೆ.












Click it and Unblock the Notifications