JDS: ಬಂಡೆಕಲ್ಲಿನಂತ ಹೃದಯ ಇರೋ ನಿಮಗೆ ಬೆಂಗಳೂರಿಗರ ಕಷ್ಟ ಹೇಗೆ ಅರ್ಥವಾಗುತ್ತೆ?
ಡಿಸಿಎಂ ಡಿಕೆ ಶಿವಕುಮಾರ್ ಅವರು ಹಳೆ ಬೆಂಗಳೂರು ಭಾಗದ ಸ್ಥಳಗಳಲ್ಲಿ ನಾಗರಿಕರೊಂದಿಗೆ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಜೆಡಿಎಸ್ ವ್ಯಂಗ್ಯ ಮಾಡಿದೆ. ನೀವು ಪಾರ್ಕ್‌ಗಳಲ್ಲಿ ನಡಿಗೆ ಮಾಡಿದರೆ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತದೆಯೇ? ಎಂದು ಜೆಡಿಎಸ್ ಕೇಳಿದೆ. ಬಂಡೆ ಕಲ್ಲಿನಂತ ಹೃದಯ ಇರುವ ನಿಮಗೆ ಜನರ ಸಂಕಷ್ಟ ಹೇಗೆ ತಾನೆ ಅರ್ಥವಾಗುತ್ತದೆ? ಎಂದು ವಾಗ್ದಾಳಿ ನಡೆಸಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರೇ ನಿಮಗೆ ಪ್ರಚಾರದ ಹುಚ್ಚು ವಿಪರೀತ ತಲೆಗೇರಿದೆ. ಬೆಳಗ್ಗೆ ಎದ್ದೊಡನೆ ದಿನಪತ್ರಿಕೆಗಳನ್ನು ಒಮ್ಮೆ ನೋಡಿ, ಜನರ ಸಂಕಷ್ಟ ನಿಮಗೆ ಅರ್ಥ ಆಗಬಹುದೇನೋ ಎಂದಿದೆ. ಮಳೆಯಿಂದ ಬೆಂಗಳೂರು ಮುಳುಗಿದೆ. ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು ರಸ್ತೆಗಳು ಹಾಳಾಗಿ, ಜನರು ನರಕ ಅನುಭವಿಸುತ್ತಿದ್ದಾರೆ. ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ನೀವು ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಬೇಕಿತ್ತು. ಅವರಿಗೆ ಸಾಂತ್ವನ ಹೇಳಿ, ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಬೇಕಿತ್ತು ಎಂದು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.

ಅದನ್ನು ಬಿಟ್ಟು ನೀವು ಹಳೆ ಬೆಂಗಳೂರು ಪ್ರದೇಶಗಳಲ್ಲಿ ನಡಿಗೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಲಾಲ್ ಬಾಗ್, ಜೆಪಿ ಪಾರ್ಕ್, ಕಬ್ಬನ್ ಪಾರ್ಕ್, ಕೋರಮಂಗಲ, ನಾಗರಬಾವಿ, ಕೆ.ಆರ್.ಪುರ ಪಾರ್ಕ್‌ಗಳಲ್ಲಿ ನಡಿಗೆ ಮಾಡಿದರೆ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತದೆಯೇ? ಬೆಂಗಳೂರಿನಲ್ಲಿ ಜನಸಾಮಾನ್ಯರು ಪಡಬಾರದ ಕಷ್ಟಪಡುತ್ತಿದ್ದಾರೆ. ರಸ್ತೆಗಳು ಯಮಗುಂಡಿಗಳಿಂದ ಕೂಡಿದ್ದು ಜನರನ್ನು ಬಲಿ ಪಡಿಯುತ್ತಿದೆ. ಒಂದೇ ವಾರದಲ್ಲಿ ಬಿಎಂಟಿಸಿಗೆ ನಾಲ್ವರು ಬಲಿಯಾಗಿದ್ದಾರೆ. ಇವೆಲ್ಲವೂ ನಿಮ್ಮ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ಆರೋಪ ಮಾಡಿದೆ.
ಇದೇನಾ ನೀವು ಬೆಂಗಳೂರಿನ ನಾಗರಿಕರಿಗೆ ಸ್ಪಂದಿಸುವ ರೀತಿ? ಜನಸ್ನೇಹಿ, ಮಾತೃ ಹೃದಯಿಗಳಿಗಷ್ಟೇ, ಜನಪರ ಆಡಳಿತ ನೀಡಲು ಸಾಧ್ಯ. ಬಂಡೆ ಕಲ್ಲಿನಂತ ಹೃದಯ ಇರುವ ನಿಮಗೆ ಜನರ ಸಂಕಷ್ಟ ಹೇಗೆ ತಾನೆ ಅರ್ಥವಾಗುತ್ತದೆ? ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಕೇಳಿದೆ.
ಲಾಲ್‌ಬಾಗ್‌ನಲ್ಲಿ ನಾಗರಿಕರೊಂದಿಗೆ ನಡಿಗೆ
ನಿನ್ನೆ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್, ಲಾಲ್‌ಬಾಗ್‌ನ ಅಭಿವೃದ್ಧಿಗೆ ₹10 ಕೋಟಿ ಅನುದಾನವನ್ನು ಜಿಬಿಎ ವತಿಯಿಂದ ಘೋಷಿಸಲಾಗಿದೆ. ಸಾರ್ವಜನಿಕರ ಮನವಿ ಮೇರೆಗೆ ಇಲ್ಲಿ ಇನ್ನು ಮುಂದೆ ಉಚಿತ ಶೌಚಾಲಯ, ಜಿಮ್ ವ್ಯವಸ್ಥೆ ಹಾಗೂ ಬೆಳಗ್ಗೆಯಿಂದ ಸಂಜೆಯವರೆಗೂ ವೈದ್ಯರು ಮತ್ತು ಆಂಬುಲೆನ್ಸ್ ಸೇವೆ ನಿಯೋಜಿಸಲಾಗುವುದು ಎಂದಿದ್ದರು.
ಬೆಂಗಳೂರಿನ ಬೇರೆ ಕಡೆಗಳಲ್ಲಿಯೂ ಲಾಲ್‌ಬಾಗ್ ಮಾದರಿ ಟ್ರೀ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಸಾರ್ವಜನಿಕರ ಆಸ್ತಿಯಾದ ಲಾಲ್‌ಬಾಗ್ ಉದ್ಯಾನಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆ. ಟನಲ್ ರಸ್ತೆಯ ಪ್ರವೇಶ-ನಿರ್ಗಮನಕ್ಕೆ ಕೇವಲ ಅರ್ಧ ಎಕರೆ ಪ್ರದೇಶ ಮಾತ್ರ ಬಳಸಲಾಗುವುದು. ಪಾರ್ಕಿಂಗ್ ಜಾಗವನ್ನು ತಾತ್ಕಾಲಿಕವಾಗಿ ಉಪಯೋಗಿಸಿ, ನಂತರ ಅದನ್ನು ಉದ್ಯಾನಕ್ಕೆ ಹಿಂದಿರುಗಿಸಲಾಗುವುದು ಎಂದಿದ್ದರು.












Click it and Unblock the Notifications