Liquor Sales Banned ಬೆಂಗಳೂರಿನಲ್ಲಿ ಮದ್ಯ ಮಾರಾಟ ಬಂದ್: ಯಾವಾಗ, ಯಾಕೆ ?
ಬೆಂಗಳೂರಿನಲ್ಲಿ ಮಹತ್ವದ ಉತ್ಸವಗಳಲ್ಲಿ ಸೇಂಟ್ ಮೇರಿ ಉತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಭಾಗದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಉತ್ಸವ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆದುಕೊಂಡು ಬಂದಿದೆ. ಇದೇ ತಿಂಗಳು ಶಿವಾಜಿನಗರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ, ಬೆಂಗಳೂರಿನ ಪ್ರಮುಖ ಭಾಗದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
ಬೆಂಗಳೂರಿನ ಶಿವಾಜಿನಗರದಲ್ಲಿ ಸೇಂಟ್ ಮೇರಿ ಚರ್ಚ್‌ನ ಆರೋಗ್ಯ ಮಾತೆಯ ವಾರ್ಷಿಕ ಮಹೋತ್ಸವ ನಡೆಯಲಿದೆ. ಇದೇ ತಿಂಗಳು 8ರಂದು (08/09/2024)ಕ್ಕೆ ಉತ್ಸವ ನಡೆಯಲಿದೆ. ಹೀಗಾಗಿ, ಈ ದಿನ ಬೆಂಗಳೂರಿನ ಶಿವಾಜಿನಗರ ಸೇರಿದಂತೆ ಪ್ರಮುಖ ಭಾಗದಲ್ಲಿ ಮದ್ಯ ಮಾರಾಟ ನಿಷೇಧಿಸಲು ನಿರ್ಧರಿಸಲಾಗಿದೆ.

ಶಿವಾಜಿನಗರದ ಸೇಂಟ್ ಮೇರಿ ಚರ್ಚ್‌ನಲ್ಲಿ ಶ್ರೀ ಆರೋಗ್ಯ ಮಾತೆಯ ವಾರ್ಷಿಕ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಭಾಷೆಗಳಲ್ಲಿ ಪ್ರಾರ್ಥನೆ ನಡೆಯಲಿದೆ. ಅಂತಿವಾಗಿ ಬೃಹತ್ ತೇರಿನಲ್ಲಿ ಆರೋಗ್ಯ ಮಾತೆಯ ಮೆರವಣಿಗೆಯು ನಡೆಯಲಿದೆ. ಸೇಂಟ್ ಮೇರಿ ಚರ್ಚ್‌ನಿಂದ ಪ್ರಾರಂಭವಾಗಿ ಎಂ.ಕೆ ಸ್ಟ್ರೀಟ್, ಶಿವಾಜಿರಸ್ತೆ, ಬ್ರಾಡ್ ವೇ ರಸ್ತೆ, ರಸೆಲ್ ಮಾರುಕಟ್ಟೆ ಹಾಗೂ ನರೋನ್ಹಾ ರಸ್ತೆ ಮಾರ್ಗವಾಗಿ ಹಿಂದಿರುಗಿ ಚರ್ಚೆಗೆ ಬರಲಿದೆ.
ಲಕ್ಷಾಂತರ ಜನ ಸೇರುವ ಸಾಧ್ಯತೆ
ಈ ಉತ್ಸವವು ಕ್ರೈಸ್ತರ ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ ಹೀಗಾಗಿ, ಈ ಭಾಗದಲ್ಲಿ ಈ ಉತ್ಸವವು ಪ್ರಸಿದ್ಧಿ ಪಡೆದುಕೊಂಡಿದೆ. ಉತ್ಸವದಲ್ಲಿ ಲಕ್ಷಾಂತರ ಜನ ಸೇರುವ ಸಾಧ್ಯತೆ ಇದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಈ ನಿರ್ಧಾರವನ್ನು ಪೊಲೀಸ್ ಇಲಾಖೆ ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಮದ್ಯಪಾನದ ಅಮಲಿನಲ್ಲಿ ಸಮಸ್ಯೆ ಮಾಡುವ ಸಾಧ್ಯತೆ ಇದೆ ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಎಲ್ಲೆಲ್ಲಿ ಮದ್ಯ ಮಾರಾಟ ನಿಷೇಧ ?
ಶಿವಾಜಿನಗರದ ಸೇಂಟ್ ಮೇರಿ ಚರ್ಚ್‌ನಲ್ಲಿ ಶ್ರೀ ಆರೋಗ್ಯ ಮಾತೆಯ ವಾರ್ಷಿಕ ರಥೋತ್ಸವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ನಿಷೇಧಿಸಲಾಗಿದೆ. ಸೆಪ್ಟೆಂಬರ್ 8ರಂದು ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಹಾಗೂ ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಸೆಪ್ಟೆಂಬರ್ 8ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 11ರ ವರೆಗೆ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಹಾಗೂ ಭಾರತೀನಗರ ಭಾಗದಲ್ಲಿ ಮದ್ಯ ಮಾರಾಟ ಇರಲ್ಲ. ಈ ಭಾಗದ ಎಲ್ಲಾ ರೀತಿಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ವೈನ್ಸ್ ಶಾಪ್‌ಗಳು, ಪಬ್‌ಗಳು, ಎಂಎಸ್‌ಐಎಲ್ ಮಳಿಗೆಗಳು ಸೇರಿದಂತೆ ಎಲ್ಲಾ ಮಾದರಿಯ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದನ್ನು ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರೇ ಖಚಿತಪಡಿಸಿದ್ದಾರೆ.











Click it and Unblock the Notifications