ಆರ್. ಅಶೋಕ್‌ಗೆ ಬೆಂಗಳೂರಿನ 'ಸಾಮ್ರಾಟ್' ಪಟ್ಟ ತಾತ್ಕಾಲಿಕ?
ಕೊರೊನಾ ವೈರಸ್ ಹಾವಳಿ ಭಯಾನಕ ರೂಪವನ್ನು ತಾಳುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಎರಡೇ ದಿನಗಳಲ್ಲಿ 1,314 ಜನರಿಗೆ ಸೋಂಕು ದೃಢಪಟ್ಟಿದೆ. ಇದು ಬೆಂಗಳೂರಿಗರಿಗೆ ದೊಡ್ಡ ಪ್ರಮಾಣದಲ್ಲಿ ಭಯವಾಗಿ ಪರಿವರ್ತನೆಯಾಗುತ್ತಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರ ತಂದೆ, ಪತ್ನಿ ಮತ್ತು ಮಗಳಿಗೆ ಕೊರೊನಾ ಸೋಂಕು ತಗಲಿರುವುದರಿಂದ ಅವರನ್ನು ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಸುಧಾಕರ್ ಅನುಪಸ್ಥಿತಿಯಲ್ಲಿ ಕೊರೊನಾ ನಿರ್ವಹಣೆಯ ಜವಾಬ್ದಾರಿಯನ್ನು ಕಂದಾಯ ಸಚಿವ ಆರ್.ಅಶೋಕ್ ಗೆ, ಮುಖ್ಯಮಂತ್ರಿ ಯಡಿಯೂರಪ್ಪ ವಹಿಸಿದ್ದಾರೆ. ಇದು ಬೆಂಗಳೂರಿನ ಬಿಜೆಪಿ ನಾಯಕರಿಗೆ ದೊಡ್ಡ ಸಂದೇಶವನ್ನು ರವಾನಿಸಿತ್ತು.
ಕೊಟ್ಟ ಹೊಸ ಜವಾಬ್ದಾರಿಯನ್ನು ಶಿರಸಾ ಪಾಲಿಸುತ್ತಿರುವ ಆರ್.ಅಶೋಕ್, ಕಾಲಿಗೆ ಚಕ್ರಕಟ್ಟಿಕೊಂಡಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಸಿಎಂ ಬಿಎಸ್ವೈ ನೀಡಿರುವ ಹೇಳಿಕೆಯೊಂದು, ಈ ಹೆಚ್ಚುವರಿ ಹುದ್ದೆ ಅಶೋಕ್ ಗೆ ತಾತ್ಕಾಲಿಕವೇ ಎನ್ನುವ ಅರ್ಥ ಬರುವಂತಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದ ನಂತರ, ಲಾಕ್ ಡೌನ್ ನಿಯಮ ಇನ್ನೂ ಕಠಿಣ
ಕಳೆದ ಎರಡು ದಿನಗಳಲ್ಲಿ ಕೊರೊನಾ ಮಾಡಿರುವ ಆವಾಂತರದಿಂದ ಬೆಂಗಳೂರಿಗರು ಮತ್ತೆ ತಮ್ಮ ಊರಿಗೆ ತೆರಳಲು ಆರಂಭಿಸಿದರು ಎನ್ನುವಂತೆ, ಹೆದ್ದಾರಿ ಟೋಲ್ ಗಳಲ್ಲಿ ಭಾನುವಾರ (ಜೂ 28) ಭಾರಿ ಜನಸಂದಣಿಯಿತ್ತು. ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದ ನಂತರ, ಲಾಕ್ ಡೌನ್ ನಿಯಮ ಇನ್ನೂ ಕಠಿಣಗೊಳ್ಳಲಿದೆ ಎನ್ನುವ ಮಾತು ಇವರಿಂದ ಕೇಳಿಬರುತ್ತಿತ್ತು.

ಸೋಂಕಿತರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ
ಇತ್ತ, ಕೊರೊನಾ ಸೋಂಕಿತರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಉಸ್ತುವಾರಿ ಅಶೋಕ್ ಮಾಡುತ್ತಿದ್ದಾರೆ. ಭಾನುವಾರ ವಿಕ್ಟೋರಿಯಾ ಆಸ್ಪತ್ರೆ, ಸಿ.ವಿ.ರಾಮನ್ ನಗರ ಜನರಲ್ ಆಸ್ಪತ್ರೆ, ಹಜ್ ಭವನ್ ಮುಂತಾದ ಕಡೆ ತೆರಳಿ, ಸೋಂಕಿತರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಊಟದ ವ್ಯವಸ್ಥೆಯನ್ನೂ ಸರಿಯಾಗಿ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೋವಿಡ್ ನಿಯಂತ್ರಣ ಕೆಲಸದಲ್ಲಿ ಹಿಂದಿನಂತೆಯೇ ತೊಡಗಿಸಿಕೊಳ್ಳಿ
ಇನ್ನೊಂದೆಡೆ, "ಹೋಮ್ ಕ್ವಾರಂಟೈನ್ ಮುಗಿದ ಕೂಡಲೇ ಕೋವಿಡ್ ನಿಯಂತ್ರಣ ಕೆಲಸದಲ್ಲಿ ಹಿಂದಿನಂತೆಯೇ ನಿಮ್ಮನ್ನು ತೊಡಗಿಸಿಕೊಳ್ಳಿ" ಎಂದು ಮುಖ್ಯಮಂತ್ರಿಗಳು ಡಾ.ಸುಧಾಕರ್ ಅವರಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಈ ಆದೇಶ ಪಕ್ಷದಲ್ಲಿ ಹೊಸ ಸಂದೇಶವನ್ನು ರವಾನಿಸಿದೆ.

ಅಶೋಕ್‌ಗೆ ಬೆಂಗಳೂರಿನ ಸಾಮ್ರಾಟ ಪಟ್ಟ ತಾತ್ಕಾಲಿಕ?
ಕೋವಿಡ್ ನಿರ್ವಹಣೆ ವಿಚಾರದಲ್ಲಿ ಮೊದಮೊದಲು ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ನಡುವೆ ಸಂವಹನದ ಕೊರತೆ ಕಾಡುತ್ತಿತ್ತು. ಇದಾದ ನಂತರ, ಬಿಎಸ್ವೈ, ಸುಧಾಕರ್ ಅವರಿಗೆ ಇದರ ನಿರ್ವಹಣೆಯನ್ನು ನೀಡಿದ್ದರು. ಸದ್ಯದ ಮಟ್ಟಿಗೆ ಅತ್ಯಂತ ಜವಾಬ್ದಾರಿಯುತವಾದ ಈ ಕೆಲಸವನ್ನು ಸಿಎಂ ಈಗ ಅಶೋಕ್ ಅವರಿಗೆ ವಹಿಸಿದ್ದಾರೆ. ಆದರೆ, ಸುಧಾಕರ್ ಅವರು ಹೋಂ ಕ್ವಾರಂಟೈನ್ ಮುಗಿಸಿಬಂದ ನಂತರ ಈ ಹುದ್ದೆ ಅಶೋಕ್ ಬಳಿಯೇ ಉಳಿಯಲಿದೆ ಎನ್ನುವುದು ಮಾತ್ರ ಅನುಮಾನ.












Click it and Unblock the Notifications