ಬೆಂಗಳೂರಲ್ಲಿ ಮೋದಿ ರೋಡ್ ಶೋ, ರಾಜಕೀಯ ಲೆಕ್ಕಚಾರ!
ಬೆಂಗಳೂರು, ಮೇ 6; ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ 10ರಂದು ನಡೆಯಲಿದೆ. ಮೇ 8ರಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದ್ದಾರೆ. 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರಿಲ್ಲಿ ಪ್ರಚಾರ ನಡೆಸುವ ಹಿಂದೆ ರಾಜಕೀಯ ಲೆಕ್ಕಾಚಾರ ಅಡಗಿದೆ.
2018ರ ಚುನಾವಣೆ ಬಳಿಕ ಬಿಜೆಪಿಗೆ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಪಕ್ಷದ ನಾಯಕರ ಮಾಹಿತಿ ಪ್ರಕಾರ ಆಗ ಬೆಂಗಳೂರು ನಗರದಲ್ಲಿ ನಿರೀಕ್ಷಿತ ಫಲಿತಾಂಶ ಬರದೇ ಇದ್ದದ್ದು ಇದಕ್ಕೆ ಕಾರಣ. 2008ರಲ್ಲಿ ಬೆಂಗಳೂರಲ್ಲಿ ಬಿಜೆಪಿ 28ರಲ್ಲಿ 17 ಸೀಟು ಗೆದ್ದಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಗೆದ್ದಿದ್ದು 11 ಸೀಟು ಮಾತ್ರ.

2013ರಲ್ಲಿ ಬಿಜೆಪಿ ಬೆಂಗಳೂರಲ್ಲಿ 12 ಸ್ಥಾನದಲ್ಲಿ ಜಯಗಳಿಸಿತ್ತು. ಆದರೆ ಬಿ. ಎಸ್. ಯಡಿಯೂರಪ್ಪರ ಕೆಜೆಪಿ ಮತ್ತು ಬಿಜೆಪಿ ಗೊಂದಲದ ನಡುವೆ ರಾಜ್ಯದಲ್ಲಿಯೇ ಉತ್ತಮ ಸಾಧನೆ ಮಾಡಲು ವಿಫಲವಾಯಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು.
ಬೆಂಗಳೂರು ಗೆಲ್ಲುವುದು ಮುಖ್ಯ; ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಲು ಬೆಂಗಳೂರು ನಗರದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಮುಖ್ಯ ಎಂಬುದು ಬಿಜೆಪಿಗೆ ತಿಳಿದಿದೆ. ಇದೇ ಕಾರಣಕ್ಕೆ ಚುನಾವಣಾ ಪ್ರಚಾರದ ಅಂತಿಮ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ವಲಸಿಗರು, ಯುವ ಮತದಾರರ ಸಂಖ್ಯೆ ಹೆಚ್ಚು. ನಗರದ ಮೇಲೆ ಮೋದಿ ವಿಶೇಷ ಪ್ರೀತಿ ಹೊಂದಿದ್ದಾರೆ. ಆದ್ದರಿಂದ ನಗರದಲ್ಲಿ ಚುನಾವಣಾ ಪ್ರಚಾರ ಮಾಡಲು ಸಹ ಅವರು ಒಪ್ಪಿಗೆ ನೀಡಿದ್ದರು. ಶನಿವಾರ ಸುಮಾರು 26 ಕಿ. ಮೀ. ಬೃಹತ್ ರೋಡ್ ಶೋ ಮುಕ್ತಾಯಗೊಂಡಿದೆ. ಭಾನುವಾರ ನಗರದಲ್ಲಿ ಮತ್ತೊಂದು ರೋಡ್ ಶೋ ನಡೆಯಲಿದೆ.
ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆದಿದೆ. 2018ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ವಿಫಲವಾಯಿತು. ಆದರೆ ಪಕ್ಷ ಬೆಂಗಳೂರು ನಗರದಲ್ಲಿ 28ರಲ್ಲಿ 15 ಸೀಟು ಗೆದ್ದಿತು. 2013ರಲ್ಲಿ 13 ಮತ್ತು 2008ರಲ್ಲಿ 10 ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ 25 ಸೀಟುಗಳಲ್ಲಿ ಗೆದ್ದಿದೆ. ಇದೇ ರೀತಿಯ ಸಾಧನೆಯನ್ನು ಈ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿ ಮಾಡಲು ಮುಂದಾಗಿದೆ. ಅದಕ್ಕಾಗಿಯೇ ನರೇಂದ್ರ ಮೋದಿ ಬಳಿ ನಗರದಲ್ಲಿ ಅಬ್ಬರದ ಪ್ರಚಾರ ಮಾಡಿಸುತ್ತಿದೆ.
2018ರಲ್ಲಿ ಬಿಜೆಪಿ ಬೆಂಗಳೂರಿನಲ್ಲಿ ಹೆಚ್ಚು ಸ್ಥಾನಗಳಿಸಲಿಲ್ಲ. ಆದರೆ ಸುಮಾರು 13 ಸೀಟುಗಳಲ್ಲಿ ಶೇ 13ರಷ್ಟು ಮತಗಳಿಂದ 2ನೇ ಸ್ಥಾನ ಪಡೆಯಿತು. ನಗರದಲ್ಲಿ ನಿರ್ಧರಿತವಾಗದ ಹಲವು ಮತಗಳಿವೆ. ಅವು ಕೊನೆಯ ಕ್ಷಣದ ತನಕ ಯಾರ ಜೇಬು ಸೇರಲಿವೆ? ಎಂಬುದು ಕುತೂಹಲ. ಆದ್ದರಿಂದ ಮೋದಿ ಪ್ರಚಾರ ಬಿಜೆಪಿಗೆ ಸಹಾಯಕವಾಗಬಹುದು ಎಂದು ರೋಡ್ ಶೋ ನಡೆಸಲಾಗುತ್ತಿದೆ.
2013ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೊಂಡಾಗ ಹಲವು ಸಚಿವರು ಬೆಂಗಳೂರು ನಗರದವರೇ ಆಗಿದ್ದರು. ಈ ಬಾರಿಯೂ ಸಹ ಬಿಜೆಪಿ ನಗರದ ಸಚಿವರಿಗೆ ನಿಮ್ಮ ಕ್ಷೇತ್ರದ ಜೊತೆ ಅಕ್ಕಪಕ್ಕದ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಟಾಸ್ಕ್ ನೀಡಿದೆ.
'ಈ ಬಾರಿಯ ನಿರ್ಧಾರ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರ' ಎಂದು ನರೇಂದ್ರ ಮೋದಿ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಆ ಮೂಲಕ ಬಿಜೆಪಿಗೆ ಬಹುಮತ ನೀಡಿ ಎಂದು ಜನರಲ್ಲಿ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕಾದರೆ 28 ಕ್ಷೇತ್ರವಿರುವ ಬೆಂಗಳೂರು ಮತ್ತು 18 ಕ್ಷೇತ್ರವಿರುವ ಬೆಳಗಾವಿಯಲ್ಲಿ ಹೆಚ್ಚು ಸ್ಥಾನಗಳನ್ನುಗಳಿಸುವುದು ಯಾವುದೇ ಪಕ್ಷಕ್ಕೆ ಸಹ ಅನಿವಾರ್ಯವಾಗಿದೆ.











Click it and Unblock the Notifications