ಬೆಂಗಳೂರಿನ ಅಂಗಡಿಗಳಲ್ಲಿ ಫೋನ್ ಪೇ, ಗೂಗಲ್ ಪೇ ಸೇವೆ ಬಂದ್ ಆಗುತ್ತಿರುವುದೇಕೆ ?
Google Pay and Phoen Pay: ಈಗ ಪರ್ಸ್‌ನಲ್ಲಿ ನಾವೆಲ್ಲಾ ದುಡ್ಡು ಇರಿಸಿಕೊಳ್ಳುವುದು ತುಂಬಾನೇ ಕಡಿಮೆ. 10 ರೂಪಾಯಿಗೆ ಟೀ ತೆಗೆದುಕೊಳ್ಳುವುದರಿಂದ ಹಿಡಿದು 100 ಅಥವಾ ಸಾವಿರ ರೂಪಾಯಿಯ ವರೆಗಿನ ವಹಿವಾಟಿಗೂ ಗೂಗಲ್ ಅಥವಾ ಪೋನ್ ಪೇ ಬಳಸುವುದೇ ಹೆಚ್ಚು. ಆದರೆ, ಬೆಂಗಳೂರಿನಲ್ಲಿ ಅಂಗಡಿಗಳ ಮಾಲೀಕರು ಈ ಸೇವೆಗಳನ್ನು ರದ್ದು ಮಾಡುವುದಕ್ಕೆ ಮುಂದಾಗಿದ್ದಾರೆ. ಇಷ್ಟು ದಿನಗಳ ಕಾಲ ಬೆಂಗಳೂರಿನಲ್ಲಿ ಬಹುತೇಕ ಚಿಲ್ಲರೆ ಸಮಸ್ಯೆ ಸಹ ಕಡಿಮೆ ಆಗಿತ್ತು. ಬಹುತೇಕ ಅಂಗಡಿಗಳಲ್ಲಿ ಈ ಸೇವೆಯನ್ನೇ ಬಳಸಲಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹ ವಿಚಾರದಲ್ಲಿ ಎದುರಾಗಿರುವ ಗೊಂದಲದಿಂದ ಬೆಂಗಳೂರಿನ ಸಣ್ಣ ಅಂಗಡಿಗಳು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಯುಪಿಎ, ಗೂಗಲ್ ಹಾಗೂ ಪೋನ್ ಸೇವೆಯನ್ನು ತೆಗೆಯಲಾಗುತ್ತಿದೆ.
ಬೆಂಗಳೂರಿನಲ್ಲಿ ತೆರಿಗೆ ತಪ್ಪಿಸುವ ಉದ್ದೇಶದಿಂದ ಬೆಂಗಳೂರಿನ ಅಂಗಡಿಗಳ ಮಾಲೀಕರು ಯುಪಿಐ ಮಿಷನ್ ಹಾಗೂ ಕ್ಯೂ ಆರ್‌ಕೋಡ್ (ಸ್ಕ್ಯಾನರ್) ಗಳನ್ನು ರಿಮೂವ್ ಮಾಡಲು ಮುಂದಾಗಿದ್ದಾರೆ. ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಮಹತ್ವದ ಕ್ರಮದಲ್ಲಿ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (GST) ನೋಂದಣಿಯನ್ನು ತಪ್ಪಿಸಿಕೊಂಡಿರುವ ವ್ಯಾಪಾರಿಗಳನ್ನು, ವಿಶೇಷವಾಗಿ QR ಕೋಡ್‌ಗಳ ಮೂಲಕ ಪಾವತಿಗಳನ್ನು ಸ್ವೀಕರಿಸುವವರನ್ನು ಗುರುತಿಸಲು ಸರ್ಕಾರವು ಏಕೀಕೃತ ಪಾವತಿ ಇಂಟರ್ಫೇಸ್ (UPI) ಡೇಟಾವನ್ನು ಬಳಸಲು ಮುಂದಾಗಿದೆ.

ಅಲ್ಲದೇ ಈ ವಿಚಾರದಲ್ಲಿ ಗೊಂದಲವೂ ಸೃಷ್ಟಿಯಾಗಿರುವುದರಿಂದ ಫೋನ್ ಪೇ ಹಾಗೂ ಗೂಗಲ್ ಪೇ ಸೇವೆಯನ್ನು ಅಂಗಡಿಗಳಿಂದ ತೆಗೆಯುವುದಕ್ಕೆ ಅಂಗಡಿಗಳ ಮಾಲೀಕರು ಮುಂದಾಗಿದ್ದಾರೆ. ಈಗಾಗಲೇ ಬೆಂಗಳೂರಿನ ಹಲವು ಭಾಗದಲ್ಲಿ ಅಂಗಡಿಗಳ ಮಾಲೀಕರು ಅವರೇ ಆನ್‌ಲೈನ್ ಪೇಮೆಂಟ್‌ಗಳನ್ನು ತೆಗೆಯುತ್ತಿದ್ದಾರೆ.
ಹಲವು ದಿನಸಿ ಅಂಗಡಿಗಳು, ಬೇಕರಿಗಳು ಮತ್ತು ಸಣ್ಣ ಚಿಲ್ಲರೆ ಮಾರಾಟ ಮಳಿಗೆಗಳನ್ನು ನಡೆಸುವವರು ಇತ್ತೀಚಿನ ವಾರಗಳಲ್ಲಿ ಸದ್ದಿಲ್ಲದೆ ಆನ್‌ಲೈನ್ ಪೇಮೆಂಟ್ ಇಲ್ಲ ದುಡ್ಡು ಕೊಡಿ ಅಂತ ಹೇಳುತ್ತಿದ್ದಾರೆ.
ಬೆಂಗಳೂರಿನ ಹಲವು ಅಂಗಡಿ ಈಗಾಗಲೇ ಡಿಜಿಟಲ್ ಪಾವತಿಗೆ ಬ್ರೇಕ್ ಹಾಕಿವೆ. ಇದು ಆರ್ಥಿಕ ವಹಿವಾಟನ್ನು ಕಡಿಮೆ ತೋರಿಸಲು ಮತ್ತು GST ಮಿತಿಗಳಿಗಿಂತ ಕಡಿಮೆ ವ್ಯಾಪ್ತಿಯಲ್ಲಿ ಉಳಿಯ ಉದ್ದೇಶವನ್ನು ಹೊಂದಿದೆ. ಅಲ್ಲದೇ ಸುರಕ್ಷಿತ ಮಾರ್ಗವನ್ನು ಅನುಸರಿಸಲಾಗುತ್ತಿದೆ ಎಂದೂ ಹೇಳಲಾಗಿದೆ.
ಕಾರಣವೇನು, ಕೇಂದ್ರ ಸರ್ಕಾರದ ನಿರ್ಧಾರವೇನು ?
ಸಣ್ಣ ಅಂಗಡಿಗಳಿಗೂ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗುತ್ತಿದೆ. ಇದು ಕೇಂದ್ರ ಸರ್ಕಾರವು ಜಿಎಸ್‌ಟಿಯಲ್ಲಿ ತಂದಿರುವ ಪ್ರಮುಖ ಬದಲಾವಣೆಯ ಪರಿಣಾಮ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಕ್ಯೂಆರ್ ಕೋಡ್‌ನ ಮೂಲಕ ಆನ್ಲೈನ್ ಪಾವತಿ (Online Payment) ಬಳಕೆ ಮಾಡಲಾಗುತ್ತಿದೆ. ಆದರೆ, ಕಳೆದ ಒಂದು ವಾರದಿಂದ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ಈ ರೀತಿಯ ಕೆಲವು ಅಂಗಡಿಗಳಿಗೆ ನೋಟಿಸ್ ನೀಡಲಾಗುತ್ತಿದೆ. ನೀವು ಲಕ್ಷಾಂತರ ರುಪಾಯಿ ವ್ಯಾಪಾರ ವಹಿವಾಟು ಮಾಡಿದ್ದೀರಿ. ಹೀಗಾಗಿ, ನೀವು ಕಮರ್ಷಿಯಲ್ ಟ್ಯಾಕ್ಸ್ ಪಾವತಿಸಬೇಕು ಎಂದು ಶೋಕಾಸ್ ನೋಟಿಸ್ ನೀಡಿರುವುದು ವರದಿಯಾಗಿದೆ.
ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಹಲವು ಅಂಗಡಿಗಳಲ್ಲಿ ಜನ ಆನ್‌ಲೈನ್ ಪೇ ತೆಗೆದು ಹಾಕುವುದಕ್ಕೆ ಮುಂದಾಗಿದ್ದಾರೆ. ಮೊದಲಿನಂತೆ ದುಡ್ಡು ಕೊಟ್ಟು ವಸ್ತುಗಳನ್ನು ಖರೀದಿ ಮಾಡುವಂತೆ ಗ್ರಾಹಕರಿಗೆ ಸೂಚನೆ ನೀಡಲಾಗುತ್ತಿದೆ.
ಟ್ಯಾಕ್ಸ್ ಕಟ್ಟಬೇಕಾಗುವ ಭೀತಿ: ಇನ್ನು ವಾಣಿಜ್ಯ ಇಲಾಖೆಯು ಕೆಲವು ಅಂಗಡಿಗಳ ಮಾಲೀಕರಿಗೆ ಹಾಗೂ ಅಂಗಡಿ ನಡೆಸುವವರಿಗೆ ಶೋಕಾಸ್ ನೋಟಿಸ್ ನೀಡುತ್ತಿರುವುದು ಆತಂಕ ಮೂಡಿಸಿದೆ. ಎಲ್ಲಿ ಗೂಗಲ್ ಪೇ ಮತ್ತು ಫೋನ್‌ಪೇಗೂ ಟ್ಯಾಕ್ಸ್ ಪಾವತಿ ಮಾಡಬೇಕೋ ಎನ್ನುವ ಆತಂಕ ಹಾಗೂ ಗೊಂದಲದ ಎದುರಾಗಿದ್ದು ಜನ ಸದ್ದಿಲ್ಲದೆ ಗೂಗಲ್ ಪೇ ಹಾಗೂ ಪೋನ್ ಪೇ ಬಳಕೆ ಮಾಡುವುದನ್ನು ಕಡಿಮೆ ಮಾಡಿದ್ದು. ಮತ್ತೆ ನಗದು ವಹಿವಾಟಿಗೆ ಮುಂದಾಗಿದ್ದಾರೆ.












Click it and Unblock the Notifications