kadalekai Parishe: ಬೆಂಗಳೂರು ಕಡಲೆ ಪರಿಷೆ ಇನ್ನೆಷ್ಟು ದಿನ ನಡೆಯಲಿದೆ, ಬಸವನಗುಡಿ ಕಡಲೆ ಪರಿಷೆ ಹಿನ್ನೆಲೆ ಏನು ?
ಬೆಂಗಳೂರಿನ ಬಸವನಗುಡಿ ಕಡಲೆ ಪರಿಷೆಗೆ ಸೋಮವಾರ (ನವೆಂಬರ್ 25)ರಂದು ಅಧಿಕೃತ ಚಾಲನೆ ಸಿಕ್ಕಿದೆ. ಈ ಪರಿಷೆಯು ಅಧಿಕೃತವಾಗಿ ಸೋಮವಾರ ಹಾಗೂ ಮಂಗಳವಾರ ನಡೆದಿದೆ. ಆದರೆ, ಇನ್ನೂ ಎರಡೂ ಅಥವಾ ಮೂರು ದಿನಗಳ ವರೆಗೆ ಇದರ ಸಂಭ್ರಮ ಹಾಗೂ ಕಡಲೆಕಾಯಿ ಮಾರಾಟ ಸೇರಿದಂತೆ ಹಲವು ಆಕರ್ಷಕ ವಸ್ತುಗಳ ಮಾರಾಟ ಇರಲಿದೆ. ಪ್ರತಿ ವರ್ಷವೂ ಬಸವನಗುಡಿ ಕಡಲೆ ಪರಿಷೆ ನಡೆಯುತ್ತದೆ. ಇದರ ಮೂಲ ಹಾಗೂ ಕೇಂದ್ರ ಬಿಂದುವೇ ಕಡಲೆಕಾಯಿ. ಬಸವನಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಡಲೆ ಪರಿಷೆ ಸಂಭ್ರಮ ಕಳೆಗಟ್ಟಿದೆ. ಈ ಸಂಭ್ರಮ ಈ ವಾರಾಂತ್ಯದ ವರೆಗೂ ಮುಂದುವರಿಯಲಿದೆ.
ಈ ಬಾರಿ ಹಲವು ಕಾರಣಗಳಿಗೆ ಬೆಂಗಳೂರಿನ ಬಸವನಗುಡಿಯ ಕಡಲೆ ಪರಿಷೆ ವಿಶೇಷವಾಗಿದೆ. ಕಡಲೆ ಪರಿಷೆಗೆ ಚಿಣ್ಣರಿಂದ ಹಿರಿಯ ವರೆಗೆ ಸಾವಿರಾರು ಜನ ಆಗಮಿಸುತ್ತಿದ್ದು, ಕಡಲೆಕಾಯಿ ಖರೀದಿ ಹಾಗೂ ವಿವಿಧ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪೋಟೋ ಹಾಗೂ ವಿಡಿಯೋ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಕಡಲೆಕಾಯಿ ಪರಿಷೆಗೆ ಐತಿಹಾಸಿಕ ಹಿನ್ನೆಲೆ ಇದ್ದು, ಹಲವು ದಶಕಗಳಿಂದ ಈ ಪರಿಷೆ ಐತಿಹಾಸಿಕವಾಗಿ ನಡೆದುಕೊಂಡು ಬಂದಿದೆ.

ಇನ್ನೆಷ್ಟು ದಿನ ಇರಲಿದೆ ಕಡಲೆ ಪರಿಷೆ: ಬೆಂಗಳೂರು ಕಡಲೆ ಪರಿಷೆ ಪ್ರಾರಂಭವಾಗಿ ಈಗಾಗಲೇ ಮೂರು ದಿನಗಳಾಗಿವೆ. ಸೋಮವಾರದಿಂದ ಅಧಿಕೃತವಾಗಿ ಕಡಲೆ ಪರಿಷೆ ಪ್ರಾರಂಭವಾಗಿದೆ. ಪ್ರತಿ ವರ್ಷವೂ ಕಾರ್ತಿಕ ಮಾಸದ ಸೋಮವಾರದಂದು ಬೆಂಗಳೂರಿನ ಬಸವನಗುಡಿಯ ಕಡಲೆ ಪರಿಷೆ ನಡೆಯುತ್ತದೆ.
ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆ ಹಿನ್ನೆಲೆ ಏನು
ಬೆಂಗಳೂರು ಕಡಲೆ ಪರಿಷೆಯ ಬಗ್ಗೆ ಇರುವ ಪ್ರಮುಖ ಪ್ರತಿತಿ ಹಾಗೂ ಹಿನ್ನೆಲೆ ಬಸವಣ್ಣನಿಗೆ ಸಂಬಂಧಿಸಿದ್ದಾಗಿದೆ. ಶತಮಾನಗಳ ಹಿಂದೆ ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿತ್ತು. ಈ ರೀತಿ ಸಮೃದ್ಧವಾಗಿ ಬೆಳೆಯುತ್ತಿದ್ದ ಕಡಲೆ ಕಟಾವಿಗೆ ಬಂದಾಗ ಸಂಕಷ್ಟ ಎದುರಾಗುತ್ತಿತ್ತು. ತೋಟಗಳಿಗೆ ಬರ್ತಿದ್ದ ಬಸವ (ನಂದಿ)ನಿಂದ ಇಲ್ಲಿ ಬೆಳೆ ಹಾಳಾಗುತ್ತಿತ್ತು. ವರ್ಷವೆಲ್ಲ ಕಷ್ಟ ಪಟ್ಟು ಬೆಳೆದ ಹಾನಿಯಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ರೈತರು ನಂದಿ ಮೊರೆ ಹೋದರು ಎನ್ನುವುದು ಇತಿಹಾಸ.

ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವಣ್ಣನಿಗೆ ಕಡಲೆಕಾಯಿ ಅರ್ಪಿಸುವುದು ವಾಡಿಕೆ. ನಾವೇ ಬಂದು ನಿನಗೆ ಕಡಲೆ ಅರ್ಪಿಸುತ್ತೇವೆ ನಮ್ಮ ಬೆಳೆಗಳನ್ನು ಹಾಳು ಮಾಡಬೇಡ ನಂದಿ (ಬಸವ) ಎಂದು ಅಂದಿನ ರೈತರು ಬೇಡಿಕೊಂಡಿದ್ದು. ಇದಾದ ಮೇಲೆ ಕಡಲೆ ಹಾನಿ ತಪ್ಪಿತ್ತು. ಅದೇ ಸಂಪ್ರದಾಯವನ್ನು ಶತಮಾನಗಳಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಇದಾದ ನಂತರ ಬಸವನಗುಡಿಯಲ್ಲಿ ನಂದಿ ವಿಗ್ರಹವೂ ಸಿಕ್ಕಿತ್ತು ಎನ್ನಲಾಗುತ್ತದೆ. ನಾಡಪ್ರಭು ಕೆಂಪೇಗೌಡ ಅವರು 16ನೇ ಶತಮಾನದಲ್ಲಿ ನಂದಿಯ ವಿಗ್ರಹದ ಸುತ್ತ ದೇವಾಲಯ ನಿರ್ಮಿಸಿದ್ದರು.
ಕಾಲಾಂತರದಲ್ಲಿ ಬಸವನಗುಡಿ ಎನ್ನುವ ಉಚ್ಛಾರಣೆ ಮಾಡದೆ ಅಥವಾ ಅವರಿಗೆ ಹೇಗೆ ಉಚ್ಛಾರಣೆ ಮಾಡಲು ಸಾಧ್ಯವೋ ಆ ರೀತಿ ಬ್ರಿಟಿಷರು ಬಸವನಗುಡಿ ಎನ್ನುವ ಹೆಸರನ್ನು ಬಿಗ್ ಬುಲ್ ಟೆಂಪಲ್ ಎಂದು ಕರೆಯಲು ಪ್ರಾರಂಭಿಸಿದರು ಎನ್ನಲಾಗುತ್ತದೆ. ಪ್ರತಿ ವರ್ಷವೂ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ಸಮರ್ಪಿಸುವುದು ಇಂದಿಗೂ ಮುಂದುವರಿದಿದೆ.
ಕಡಲೆ ಪರಿಷೆಗೆ ಆಧುನಿಕ ಟಚ್
ಇನ್ನು ಬಸವನಗುಡಿ ಕಡಲೆ ಪರಿಷೆಗೆ ಆಧುನಿಕ ಟಚ್ ಸಿಕ್ಕಿದೆ. ಮೊದಲೆಲ್ಲ ಇಲ್ಲಿ ಕೇವಲ ಕಡಲೆಕಾಯಿ ಮಾರಾಟ ಮಾತ್ರ ಆಗುತ್ತಿತ್ತು. ಇದೀಗ ಕಡಲೆ ಪರಿಷೆಯಲ್ಲಿ ಮಾರುಕಟ್ಟೆಗೆ ಬರುವ ಹೊಸ ವಸ್ತುಗಳು ಹಾಗೂ ದಿನ ಬಳಕೆಯ ವಸ್ತುಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ದೀಪಗಳ ಅಲಂಕಾರದಿಂದ ಬಸವನಗುಡಿ ಈಗ ಕಂಗೊಳಿಸುತ್ತಿದೆ.
ಸಂಚಾರ ದಟ್ಟಣೆ: ಬಸವನಗುಡಿ ಕಡಲೆ ಪರಿಷೆ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳ ಮೂಲಕ ಸಂಚಾರ ದಟ್ಟಣೆ ತಪ್ಪಿಸುತ್ತಿದ್ದಾರೆ. ವಾಹನಗಳನ್ನು ನಿಲ್ಲಿಸುವುದಕ್ಕೂ ತುಸು ಸಮಸ್ಯೆ ಎದುರಾಗಿದೆ.












Click it and Unblock the Notifications