ಮೆಟ್ರೋ ಸಿಬ್ಬಂದಿ ಮುಷ್ಕರ: ನಮ್ಮ ಮೆಟ್ರೋ ಬಂದ್
ಬೆಂಗಳೂರು, ಮಾರ್ಚ್ 08: ವೇತನ ಪರಿಷ್ಕರಣೆ, ಬಡ್ತಿ, ಕನ್ನಡಿಗ ನೌಕರರು ಹಾಗೂ ಹಿಂದಿ ನೌಕರರ ನಡುವೆ ತಾರತಮ್ಯ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಮ್ಮ ಮೆಟ್ರೋ ನೌಕರರು ಮಾ.22ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ಮುಂಜಾನೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಕೆಲಸ ಸ್ಥಗಿತಗೊಳಿಸುವ ಮೂಲಕ ಮುಷ್ಕರ ಹೂಡಲು ಬಿಎಂಆರ್ ಸಿಎಲ್ ನೌಕರರ ಸಂಘ ನಿರ್ಧರಿಸಿದೆ. ನಿಯಮದ ಪ್ರಕಾರ 14 ದಿನ ಮುಂಚಿತವಾಗಿ ಬಿಎಂಆರ್ ಸಿಎಲ್ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ಬೇಡಿಕೆಗಳನ್ನು ಈಡೇರಿಸಲಿದ್ದರೆ ಮುಷ್ಕರ ನಡೆಸಲಾಗುವುದು ಎಂದು ಸಂಘ ತಿಳಿಸಿದೆ.
ಕನ್ನಡಿಗ ನೌಕರರಿಗೆ ನೀಡದ ಬಡ್ತಿಯನ್ನು ಹಿಂದಿ ಭಾಷಿಕ ನೌಕರರಿಗೆ ನೀಡಲಾಗಿದೆ. ಇಬ್ಬರ ನಡುವೆ ಅಧಿಕಾರಿಗಳೇ ಒಡಕು ಮೂಡಿಸುತ್ತಿದ್ದಾರೆ ಎಂದು ಸಂಘ ತಿಳಿಸಿದೆ.

ಎಸ್ಮಾ ಜಾರಿ?
ಕಳೆದ ಬಾರಿ ಮೆಟ್ರೋ ನೌಕರರು ಮುಷ್ಕರ ನಡೆಸಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಮಾ ಜಾರಿ ಮಾಡಲಾಗಿತ್ತು. ಈ ಬಾರಿ ನೌಕರರು ಮುಷ್ಕರ ನಡೆಸುವ ಮುನ್ನವೇ ಎಸ್ಮಾ ಜಾರಿಗೊಳಿಸಲು ಸಾಧ್ಯತೆ ಇದೆ. ಆದರೆ ಇದಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಎಸ್ಮಾ ಜಾರಿ ಸಾಧ್ಯವಿಲ್ಲ ಎಂದು ಸಂಘ ತಿಳಿಸಿದೆ.

ಮುಷ್ಕರಕ್ಕೆ ಕಾರಣವಾದ ಪ್ರಮುಖ ಬೇಡಿಕೆಗಳು
-ಸಂಘವನ್ನು ಮಾನ್ಯತೆ ಮಾಡುವುದು
-ಸೇವಾ ನಿಯಮಗಳ ಬದಲಿಗೆ ಸ್ಥಾಯಿ ಸಮಿತಿ ಆದೇಶ ಪಾಲನೆ ಮಾಡುವುದು
-ಬೇಡಿಕೆಗಳ ಪಟ್ಟಿಯನ್ನು ಒಪ್ಪಿಕೊಳ್ಳುವುದು
-ಸಂಘದ ಸದಸ್ಯರಿಗೆ ನೀಡುತ್ತಿರುವ ಕಿರುಕುಗಳವನ್ನು ನಿಲ್ಲಿಸುವುದು
-ಸಂಘದ ಸದಸ್ಯರ ನಿಜವಾದ ಕುಂದುಕೊರತೆಗಳನ್ನು ನಿವಾರಿಸುವುದು
-ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದು ಮಾಡುವುದು
-ನಿಯೋಗಿಗಳನ್ನು ಮರಳಿ ಕಳುಹಿಸುವುದು

ಮುಷ್ಕರದ ನೋಟಿಸ್ ಅವಧಿಯಲ್ಲಿ ಸಿಬ್ಬಂದಿಗಳು ಏನು ಮಾಡುತ್ತಾರೆ
-ಸದಸ್ಯರು ಪ್ರತಿಭಟನಾ ಬ್ಯಾಡ್ಜ್ ಗಳನ್ನು ಧರಿಸಿರುತ್ತಾರೆ
-ಸದಸ್ಯರು ಎಲ್ಲಾ ಕೇಂದ್ರಗಳ ಮುಂದೆ ಗುಂಪುಗೂಡಿ ಘೋಷಣೆಗಳನ್ನು ಕೂಗುತ್ತಾರೆ
-ಸದಸ್ಯರು ಬಿಎಂಟಿಸಿ ಕಾಂಪ್ಲೆಕ್ಸ್, ಶಾಂತಿನಗರದಲ್ಲಿರುವ ಬಿಎಂಆರ್ ಸಿಎಲ್ ಕಾರ್ಪೊರೇಟ್ ಕಚೇರಿ ಮುಂದೆ ಪ್ರದರ್ಶನಗಳನ್ನು ನಡೆಸುತ್ತಾರೆ
-ಬೈಯಪ್ಪನಹಳ್ಳಿ ಬಿಎಂಆರ್ ಸಿಎಲ್ ಕಚೇರಿ ಎದುರು ಪ್ರತಿಭಟನೆ

ಬೆಂಗಳೂರು ಮೆಟ್ರೋ ಸಿಬ್ಬಂದಿಗೆ ದೆಹಲಿ ಸಿಬ್ಬಂದಿಗೆ ನೀಡುವ ಸವಲತ್ತು ಬೇಕು
ದೆಹಲಿ ಮತ್ತು ಜೈಪುರದಲ್ಲಿ ಮೆಟ್ರೋ ರೈಲು ನಿಗಮದ ನೌಕರರು ಪಡೆಯುತ್ತಿರುವ ಹಲವು ಪ್ರಮುಖ ಪ್ರಯೋಜನಗಳನ್ನು ನಮ್ಮ ನೌಕರರಿಗೆ ವಿಸ್ತರಿಸಲಾಗಿಲ್ಲ. ಸೇವಾ ಪರಿಸ್ಥಿತಿಯೂ ಸಹ ಅನೇಕ ರೀತಿಯಲ್ಲಿ ಭಿನ್ನವಾಗಿದೆ, ಬಿಎಂಆರ್ ಸಿಎಲ್ ಕೈಗಾರಿಕಾ ಸಂಸ್ಥೆಯಾಗಿದ್ದು ಅದರ ಕಾರ್ಮಿಕರ ಉದ್ಯೋಗಳ ಷರತ್ತುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಥಾಯಿ ಸಮಿತಿ ಆದೇಶಗಳನ್ನು ರೂಪಿಸಬೇಕಾಗಿದೆ.












Click it and Unblock the Notifications