ಸೆಲೆಬ್ರಿಟಿಗಳೆಲ್ಲಿ ಬುದ್ಧಿಜೀವಿಗಳೆಲ್ಲಿ ಪಿಂಕ್ ಚೆಡ್ಡಿಗಳೆಲ್ಲಿ?
ಬೆಂಗಳೂರು, ಜು. 31 : ಅತ್ಯಾಚಾರಿಗಳನ್ನು ಕಂಡಲ್ಲಿ ಶೂಟ್ ಮಾಡಬೇಕು, ಅತ್ಯಾಚಾರ ಮಾಡಿದ ಅಂಗವನ್ನೇ ಕತ್ತರಿಸಿ ಬಿಸಾಕಬೇಕು, ಬಲಾತ್ಕಾರ ಮಾಡಿದವರನ್ನು ಗಲ್ಲಿಗೇರಿಸಬೇಕು ಎಂಬಿತ್ಯಾದಿ ಕೂಗುಗಳು, ಧಿಕ್ಕಾರಗಳು, ಘೋಷಣೆಗಳು ಬೆಂಗಳೂರನ್ನು ಆವರಿಸಿಕೊಂಡಿರುವ, ಮಳೆಸುರಿಸದ ಮೋಡಗಳನ್ನು ಸೀಳಿಕೊಂಡು ಹೋಗುತ್ತಿದ್ದವು.
ಅಲ್ಲಿ ಪ್ರತಿಭಟನಾಕಾರ ಆವೇಶವಿತ್ತು, ಆಕ್ರೋಶವಿತ್ತು, ಸಿಟ್ಟಿತ್ತು ಸೆಡವಿತ್ತು, ಕಂಬನಿಯೂ ಸೇರಿಕೊಂಡಿತ್ತು. ಅಲ್ಲಿ ಕನ್ನಡಪರ ಹೋರಾಟಗಾರರಿದ್ದರು, ಕನ್ನಡ ಧ್ವಜಗಳು ಅಸಹನೆಯಿಂದ ಪಟಪಟಿಸುತ್ತಿದ್ದವು, ಪೋಷಕರಿದ್ದರು, ಅವರ ಮಕ್ಕಳಿದ್ದರು, ಸುದ್ದಿಯನ್ನು ಕವರ್ ಮಾಡಲು ಮಾಧ್ಯಮದವರಿದ್ದರು, ಭದ್ರತೆಗೆ ಪೊಲೀಸರಿದ್ದರು, ಬಾಗಿಲೆಳೆದುಕೊಂಡ ಅಂಗಡಿಗಳು ಕೂಡ ನಿಮ್ಮೊಂದಿಗಿದ್ದೇವೆ ಎನ್ನುತ್ತಿದ್ದವು.
ಆದರೆ, ಅವರೆಲ್ಲಿ? ಚಾನ್ಸ್ ಸಿಕ್ಕಿದರೆ ಅತ್ಯಾಚಾರದ ಮೇಲೆ ಸಿನೆಮಾ ಮಾಡುವ ತಾರೆಗಳೆಲ್ಲಿ? ಜಾತಿ ವಿಷಯ ಬಂದಾಗ ಜುಬ್ಬಾದ ಜೇಬಲ್ಲಿ ಕೈಹಾಕಿ ಹೇಳಿಕೆ ನೀಡಲು ಬರುವ ಸೋಕಾಲ್ಡ್ ಬುದ್ಧಿಜೀವಿಗಳೆಲ್ಲಿ? ನಕ್ಸಲೀಯರ ಪರವಾಗಿ ದನಿಯೆತ್ತುವ ಪ್ರಗತಿಪರರೆಲ್ಲಿ? ಐಟಿ ಕಂಪನಿಗಳನ್ನು ನಡೆಸುತ್ತಿರುವ ಸಿಇಓಗಳೆಲ್ಲಿ? ವಿಬ್‌ಗಯಾರ್ ಶಾಲೆ ಮುಂದೆ ಕಪ್ಪು ಬಟ್ಟೆ ಧರಿಸಿ ಇಂಗ್ಲಿಷಲ್ಲಿ ಹಾಹೂ ಅಂದಿದ್ದ ಹೈಸೊಸೈಟಿ ಪೋಷಕರೆಲ್ಲಿ? [ಪೋಷಕರ ಪ್ರತಿಭಟನೆ]

ಬೆಂಗಳೂರಿನ ಉದ್ಧಾರಕ್ಕಾಗಿ ಟೊಂಕ ಕಟ್ಟಿರುವ ಕಟ್ಟಾಳುಗಳೆಲ್ಲಿ? ಟೋಲ್ ಕೇಳಿದ್ದಕ್ಕಾಗಿ ಕಪಾಳಕ್ಕೆ ಬಿಗಿದು ದಾದಾಗಿರಿ ನಡೆಸಿದ್ದ ಕರವೇ ಅಧ್ಯಕ್ಷ ನಾರಾಯಣ ಗೌಡರೆಲ್ಲಿ? ಕನ್ನಡದ ಗಾಳಿ, ನೀರು ಸೇವಿಸುತ್ತ ಇಲ್ಲೇ ಬೀಡುಬಿಟ್ಟಿರುವ ಪರಭಾಷಿಕರೆಲ್ಲಿ? ಪ್ರೇಮಿಗಳ ಪರವಾಗಿ ಸಮರ ಸಾರಿದ್ದ ಪಿಂಕ್ ಚಡ್ಡಿಗಳೆಲ್ಲಿ? ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಪಕ್ಷಗಳೆಲ್ಲಿ? [ಬೆಂಗಳೂರು ಬಂದ್ ಗೆ ಶುಭಮಂಗಳ]
ಇವರಾರಿಗೂ ಮಕ್ಕಳಿಲ್ಲವೆ? ಆ ಮಕ್ಕಳು ಶಾಲೆಯಲ್ಲಿ, ಕಾಲೇಜಿನಲ್ಲಿ ಓದುತ್ತಿಲ್ಲವೆ? ಇವರ ಮನೆಯಲ್ಲಿ ಹೆಣ್ಣುಮಕ್ಕಳಿಲ್ಲವೆ? ಅವರ ಸುತ್ತಲೂ ಇವರೇನು ಭದ್ರಕೋಟೆ ಕಟ್ಟಿದ್ದಾರೆಯೆ? ಅತ್ಯಾಚಾರದಂಥ ಭೀಕರ ವಿದ್ಯಮಾನದ ವಿರುದ್ಧ ಪ್ರತಿಭಟನೆ ನಡೆಸಬೇಕು ಅಂತ ಇವರಾರಿಗೂ ಅನ್ನಿಸಲಿಲ್ಲವೆ? ಇದನ್ನು ಕರೆದಿದ್ದು ಕನ್ನಡಪರ ಸಂಘಟನೆಗಳು, ನಾವ್ಯಾಕೆ ಅವರಿಗೆ ಬೆಂಬಲ ಕೊಡಬೇಕು ಎಂದು ಸುಮ್ಮನಿದ್ದುಬಿಟ್ಟರೆ?
ಬಂದ್ ಬೆಂಬಲ ಸೂಚಿಸುವುದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಅವರವರಿಗೆ ಬಿಟ್ಟ ವಿಚಾರ. ಆದರೆ, ಬಂದ್ ಆಯೋಜಿಸಿದ್ದು ಪೆಟ್ರೋಲ್ ದರ ಏರಿಸಿದ್ದಕ್ಕಲ್ಲ, ಕಾವೇರಿ ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕಲ್ಲ, ಯಾವುದೇ ರಾಜಕೀಯ ಪಕ್ಷದ ವಿರುದ್ಧವೂ ಅಲ್ಲ. ಪ್ರತಿಭಟನೆಯಲ್ಲಿ ಪಾಲ್ಗೊಂಡು ಗಂಟಲು ಹರಿಯುವಂತೆ ಧಿಕ್ಕಾರ ಕೂಗುವ ಅಗತ್ಯವೂ ಇಲ್ಲ. ಆದರೆ, ಕನಿಷ್ಠಪಕ್ಷ ನಾವು ನಿಮ್ಮೊಂದಿಗಿದ್ದೇವೆ ಎಂದು ಬೆಂಬಲವಾದರೂ ಸೂಚಿಸಬಹುದಲ್ಲ?
ಮಹಿಳೆಯರ ಮೇಲೆ, ಶಾಲೆಗೆ ಹೋಗುತ್ತಿರುವ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದಿಂದ ಕರ್ನಾಟಕ ತತ್ತರಿಸಿಹೋಗಿದೆ. ಕಾಮಿಗಳು ಹುಲ್ಲೆಯ ಮೇಲೆರಗಿದ ಹುಲಿಯಂತೆ ಎಲ್ಲೆಂದರಲ್ಲಿ ಎರಗುತ್ತಿದ್ದಾರೆ. ಏನೂ ಅರಿಯದ ಕಂದಮ್ಮಗಳು ಶಿಕ್ಷಕರ ಕಾಮತೃಷೆಗೆ ಬಲಿಯಾಗುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕಳಿಸಬೇಕೋ ಬೇಡವೋ ಎಂಬ ಇಬ್ಬಂದಿಗೆ ಪೋಷಕರು ಸಿಲುಕಿದ್ದಾರೆ. ಹೀಗಿರುವಾಗ, ಎಲ್ಲ ವಲಯದಿಂದ ಬೆಂಬಲ ಬಂದಿದ್ದರೆ ಹೋರಾಟಗಾರರಿಗೂ ಹುಮ್ಮಸ್ಸು ಬರುತ್ತಿತ್ತು, ಸರಕಾರದ ಮೇಲೂ ಒತ್ತಡ ಹೇರಬಹುದಿತ್ತು.












Click it and Unblock the Notifications