ಜನರಿಗೆ ಐಎಂಎ ಠೇವಣಿ ಯಾವಾಗ ವಾಪಸ್ ಕೊಡ್ತೀರಿ?: ಹೈಕೋರ್ಟ್
ಬೆಂಗಳೂರು,ಜನವರಿ 19: ಐಎಂಎ ಹಗರಣ ಹಿನ್ನೆಲೆಯಲ್ಲಿ ಠೇವಣಿ ಹಿಂದಿರುಗಿಸಲು ಕೋರಿ ಸುಮಾರು 65 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿಯನ್ನು ನೀಡಿದೆ.
ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಪಾಷಾ ಸೇರಿದಂತೆ ಹಲವರು ಸಲ್ಲಿಸಿದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಸರ್ಕಾರಿ ವಕೀಲರು ಪ್ರಮಾಣಪತ್ರ ಸಲ್ಲಿಸಿ, 2021ರ ಜನವರಿ 3ರವರೆಗೂ ಠೇವಣಿ ಹಿಂದಿರುಗಿಸಲು ಕೋರಿ 65 ಸಾವಿರ ಅರ್ಜಿಗಳು ಠೇವಣಿದಾರರಿಂದ ಸಲ್ಲಿಕೆಯಾಗಿದೆ.

ಅಷ್ಟೂ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲು ಹೆಚ್ಚಿನ ಕಾಲಾವಕಾಶ ಬೇಕಿದೆ ಎಂದು ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಸಾಧ್ಯವಾದಷ್ಟು ಬೇಗ ಠೇವಣಿದಾರರಿಗೆ ಹಣ ಹಿಂದಿರುಗಿಸಬೇಕು.
ಹೀಗಾಗಿ, ಎಷ್ಟು ಸಮಯದೊಳಗೆ ಅರ್ಜಿಗಳ ಪರಿಶೀಲನಾ ಕಾರ್ಯ ಪೂರ್ಣಗೊಳಿಸಲಾಗುತ್ತದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಲಾಗಿದೆ.
ಹಾಗೆಯೇ ಪ್ರಕರಣ ಕುರಿತು ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸಿ ವಿಚಾರಣೆಯನ್ನು ಫೆ.10ಕ್ಕೆ ಮುಂದೂಡಲಾಯಿತು.












Click it and Unblock the Notifications