ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
ಬೆಂಗಳೂರು, ಏಪ್ರಿಲ್, 20: ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ಬೆಂಗಳೂರಿನ ಜೀವನಾಡಿ ಸಾರಿಗೆಯಾಗಿವೆ. ಇನ್ನು ಇದೀಗ ಬೇಸಿಗೆ ಆಗಿರುವುದರಿಂದ ಬೈಕ್‌ಗಳನ್ನು ಬಿಟ್ಟು ಇವುಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಒಂದೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರಯಾಣ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇವೆರಡರಲ್ಲಿ ಯಾವ್ಯಾವ ಸಾರಿಗೆಯಲ್ಲಿ ಎಷ್ಟು ಜನ ಪ್ರಯಾಣ ಮಾಡಿದ್ದಾರೆ ಎಂದು ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.
ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ಬೆಂಗಳೂರು ಜನರ ಜೀವನಾಡಿ ಸಾರಿಗೆಗಳಾಗಿವೆ. ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಳ ಆಗಿದ್ದು, ಇದರಿಂದ ಜನರು ತಂಪಾದ ವಾತಾವರಣವನ್ನು ಬಯಸುತ್ತಿದ್ದಾರೆ. ಮತ್ತೊಂದೆಡೆ ಟ್ರಾಫಿಕ್‌ನಿಂದ ಬೇಸತ್ತ ಬಹುತೇಕ ಕಾರು ಹಾಗೂ ಬೈಕ್ ಸವಾರರು ನಮ್ಮ ಮೆಟ್ರೋ ಮತ್ತು ಬಿಎಂಟಿಸಿಯಲ್ಲಿ ಸಂಚಾರ ಮಾಡಲು ಆರಂಭಿಸಿದ್ದಾರೆ.

ಇದೀಗ ಮೆಟ್ರೋ ಪ್ರಯಾಣಿಕರ ಸಂಖ್ಯೆ ದೀಢೀರ್ ಏರಿಕೆ ಆಗಿದ್ದು, ಒಂದೇ ದಿನ ನಮ್ಮ ಮೆಟ್ರೋದಲ್ಲಿ ದಾಖಲೆ ಮಟ್ಟದಲ್ಲಿ 7.9 ಲಕ್ಷ ಜನ ಪ್ರಯಾಣ ಮಾಡಿದ್ದಾರೆ. ಮೆಟ್ರೋದಲ್ಲಿ ಎಸಿ ಇರುತ್ತದೆ. ಜೊತೆಗೆ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಕಚೇರಿಗೆ ಹೋಗುವವರು, ಸಾಮಾನ್ಯ ಜನರು ಹಾಗೂ ಕಾರ್ಮಿಕರು ಕೂಡ ಮೆಟ್ರೋದತ್ತ ಮುಖ ಮಾಡುತ್ತಿರುವುದು ಕಂಡುಬರುತ್ತಿದೆ.
ಹೀಗೆಯೇ ಬಿಸಿಲು ಮುಂದುವರೆದರೆ, ಕೆಲವೇ ದಿನಗಳಲ್ಲಿಯೇ ಮೆಟ್ರೋ ಪ್ರಯಾಣಿಕರ ಸಂಖ್ಯೆ 8 ಲಕ್ಷ ದಾಟುವ ಸಾಧ್ಯತೆಯೂ ಅಂತಾ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಹೇಳುತ್ತಿದ್ದಾರೆ. ಅಷ್ಟೇ ಬಿಎಂಟಿಸಿಯಲ್ಲೂ ಇದೀಗ ಒಂದೇ ದಿನಕ್ಕೆ 10 ಲಕ್ಷ ಜನ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ನಮ್ಮ ಮೆಟ್ರೋದಲ್ಲಿ 5 ರಿಂದ 6 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರೆ, ಬಿಎಂಟಿಸಿಯಲ್ಲಿ 30 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಇದೀಗ ಬೇಸಿಗೆ ಹಿನ್ನೆಲೆ ಬಿಎಂಟಿಸಿಯಲ್ಲಿ 40 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications