ಪೌರಕಾರ್ಮಿಕರಿಗೆ ಈ ಷರತ್ತು ವಿಧಿಸಲು ಆಗ್ರಹ, ಏನದು ?
ಪೌರಕಾರ್ಮಿಕರನ್ನು ಕಾಯಂ ಸೇವೆಗೆ ನೇಮಿಸಿಕೊಳ್ಳಲು ಸರ್ಕಾರ ಹಾಗೂ ಬಿಬಿಎಂಪಿ ಹಂತದಲ್ಲಿ ನಿರ್ಧರಿಸಲಾಗಿದೆ. ಪೌರಕಾರ್ಮಿಕರನ್ನು ಕಾಯಂ ಸೇವೆಗೆ ನೇಮಿಸುವ ಹಂತದಲ್ಲಿ ಈ ವಿಷಯವನ್ನು ಕಡ್ಡಾಯವಾಗಿ ಪರಿಗಣಿಸಬೇಕು. ಈ ನಿರ್ದಿಷ್ಟ ಅರ್ಹತೆ ಇದ್ದರೆ ಮಾತ್ರ ನೇಮಿಸಿಕೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಅದೇನು ಎನ್ನುವ ವಿವರ ಇಲ್ಲಿದೆ.
11,500 ಪೌರಕಾರ್ಮಿಕರನ್ನು ವಿಶೇಷ ನೇಮಕಾತಿಯಲ್ಲಿ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಈ ರೀತಿ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅಭ್ಯರ್ಥಿಗಳು ಕನ್ನಡ ಮಾತನಾಡುವ ಸಾಮರ್ಥ್ಯವನ್ನು ಅಳೆಯಲು ಸೂಕ್ತ ಮಾಪನ (ಪರೀಕ್ಷಾ ಮಾದರಿ) ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎನ್ನುವ ಬೇಡಿಕೆ ಕೇಳಿಬಂದಿದೆ. ಈ ಸಂಬಂಧ ಕರುನಾಡ ಸೇವಕರು ಸಂಘದಿಂದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆಯಲಾಗಿದೆ. ಕರುನಾಡ ಸೇವಕರು ಸಂಘದ ರಾಜ್ಯಾಧ್ಯಕ್ಷರಾದ ಲೊಕೇಶ್‌ಗೌಡ ಅವರು ಪತ್ರ ಬರೆದಿದ್ದಾರೆ. ಇದಕ್ಕೆ ಕನ್ನಡಪರ ಸಂಘಟನೆಗಳ ಒಕ್ಕೂಟವು ಸಹ ಸಮ್ಮತಿ ನೀಡಿದೆ.

ಕನ್ನಡಪರ ಸಂಘಟನೆಗಳು ಬರೆದಿರುವ ಪತ್ರದಲ್ಲೇನಿದೆ ?
ಬೃಹತ್ ಬೆಂಗಳೂರು ಮಹಾನಗರ (ಬಿಬಿಎಂಪಿಯು) ಪಾಲಿಕೆಯು ವಿಶೇಷ ನೇರನೇಮಕಾತಿಯಡಿ 11,500 ಪೌರಕಾರ್ಮಿಕರ ನೇಮಕಾತಿ ನಡೆಸುತ್ತಿದೆ. ಆದರೆ, ನೇಮಕಾತಿ ನಿಯಮಗಳಲ್ಲಿ ಶೈಕ್ಷಣಿಕ ಅರ್ಹತೆ ಸೇರಿದಂತೆ ಹಲವು ನಿಯಮಗಳನ್ನು ಸಡಿಲಿಸಲಾಗಿದೆ. ಅದೇ ರೀತಿ ಅರ್ಹ ಅಭ್ಯರ್ಥಿಗೆ ಕನ್ನಡ ಮಾತನಾಡಲು ಬರುವಂತೆ ಸೂಕ್ತ ಕನ್ನಡ ನುಡಿ ತಿಳುವಳಿಕೆ ಇರಬೇಕೆಂಬುದು ನೇಮಕಾತಿ ನಿಯಮಗಳ ಪ್ರಮುಖ ನಿಬಂಧನೆಯಾಗಿದೆ. ಈ ನಿಟ್ಟಿನಲ್ಲಿ ಅರ್ಹ ಅಭ್ಯರ್ಥಿಗಳಿಗೆ ಕನ್ನಡವನ್ನು ಚೆನ್ನಾಗಿ ಮಾತನಾಡಲು ಬರುವ ಸಾಮರ್ಥ್ಯವನ್ನು ಪರೀಕ್ಷಿಸಲು ಅರ್ಹ ಕನ್ನಡ ಅಧ್ಯಾಪಕರಿಂದ ಕನಿಷ್ಠ ಐದು ನಿಮಿಷಗಳ ಕಾಲ ಸಂದರ್ಶನ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಅಲ್ಲದೇ ಈ ರೀತಿ ಸಂದರ್ಶನವನ್ನು ನಡೆಸುವ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ ಮಾಡಬೇಕು. ಈ ಸಂದರ್ಶನದಲ್ಲಿ ಅಭ್ಯರ್ಥಿಯು ಶೇ 80ರಷ್ಟು ಸ್ಪಷ್ಟ ಉಚ್ಛಾರಣೆಯ ಕನ್ನಡವನ್ನು ಬಳಸಿದರೆ ಮಾತ್ರ ಅಭ್ಯರ್ಥಿಯನ್ನು ನೇಮಕಾತಿಗೆ ಪರಿಣಗಣಿಸಬೇಕು ಎಂದು ಮನವಿ ಮಾಡಲಾಗಿದೆ. ಈ ರೀತಿ ಮಾಡುವುದರಿಂದ ಪಾಲಿಕೆಯ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಅವಕಾಶ ಸಿಗದಿದ್ದರೂ, ಕನ್ನಡ ಬರುವವರಿಗಾದರೂ ಅವಕಾಶ ಕೊಟ್ಟಂತಾಗುತ್ತದೆ. ಪಾಲಿಕೆಯು ಪೌರಕಾರ್ಮಿಕರ ನೇಮಕಾತಿಯಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಮನವಿ ಮಾಡುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಹಲವು ಕನ್ನಡಪರ ಹೋರಾಟಗಾರರು ಸಮ್ಮತಿ ಸೂಚಿಸಿ, ಸಹಿ ಮಾಡಿದ್ದಾರೆ.

ಬಜೆಟ್‌ನಲ್ಲಿ ಘೋಷಿಸಿದ್ದ ಬಿಬಿಎಂಪಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) 2024ನೇ ಸಾಲಿನ ಬಜೆಟ್‌ನಲ್ಲೇ ಬಿಬಿಎಂಪಿ ಈ ಘೋಷಣೆ ಮಾಡಿತ್ತು. 16,000 ಸಾವಿರ ಪೌರಕಾರ್ಮಿಕರ ನೇರ ನೇಮಕಾತಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿತ್ತು. ಈ ಬಾರಿಯೂ ಸಹ ಬಿಬಿಎಂಪಿಯ ಬಜೆಟ್ ಆಡಳಿತಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಮಂಡನೆಯಾಗಿತ್ತು. ಕಳೆದ ನಾಲ್ಕು ವರ್ಷದಿಂದಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಚುನಾವಣೆ ನಡೆಯದೆ ಇರುವುದರಿಂದ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಬಜೆಟ್ ಮಂಡನೆಯಾಗುತ್ತಿದೆ.












Click it and Unblock the Notifications