ಕುಮಾರಸ್ವಾಮಿ ರಾಜ್ಯದ ಜನತೆಗೆ ಏನು ಅನ್ಯಾಯ ಮಾಡಿದ್ದಾರೆ: ನಿಖಿಲ್ ಕಣ್ಣೀರು
Recommended Video
ಬೆಂಗಳೂರು, ಡಿಸೆಂಬರ್ 10: ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲದ ಜೆಡಿಎಸ್ ಪಕ್ಷದ ಸ್ಥಿತಿ ಈಗ ಹೇಳತೀರದಾಗಿದೆ. ಅದರಲ್ಲೂ ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯದ ಕೆ.ಆರ್.ಪೇಟೆಯ ಸೋಲಿಗೆ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಈ ಫಲಿತಾಂಶವನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ರೈತರ ಸಾಲ ಮನ್ನಾ ಮಾಡಿದರೂ ಜನ ನಮ್ಮ ಕೈ ಹಿಡಿಯಲಿಲ್ಲ, ನಮ್ಮ ತಂದೆ ಮಾಡಿದ ಅನ್ಯಾಯವಾದರೂ ಏನು ಎಂದು ಪ್ರಶ್ನಿಸಿ ಕಣ್ಣೀರು ಹಾಕಿದರು.
ಉಪ ಚುನಾವಣೆ ಫಲಿತಾಂಶ ನೋಡಿ ಮನಸ್ಸಿಗೆ ತುಂಬಾ ದುಃಖ ಆಗಿದೆ, ಕುಮಾರಣ್ಣ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ರು, 38 ಸ್ಥಾನ ಪಡೆದು ನಮ್ಮ ತಂದೆ ಸಿಎಂ ಆಗಿದ್ದರು, ಹೇಳಿದ ಹಾಗೆ ಸಾಲ ಮಾಡಿದರೂ ರಾಜ್ಯದ ಜನತೆ ಕುಮಾರಣ್ಣನ ಕೈಹಿಡಿಯಲಿಲ್ಲ ಎಂದರು.

ಈ ಉಪ ಚನಾವಣೆಯ ಫಲಿತಾಂಶದ ಸೋಲು ಕಂಡು ನಮ್ಮ ತಂದೆ ತುಂಬಾ ನೊಂದುಕೊಂಡಿದ್ದಾರೆ. ನಮ್ಮ ಕೆ.ಆರ್.ಪೇಟೆ ಜನ ಸಹ ನಮ್ಮ ಕೈ ಬಿಟ್ಟಿದ್ದು ಯಾಕೆ ಎಂದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅವರು ಅನುಭವಿಸುತ್ತಿರುವ ನೋವು ನನ್ನನ್ನು ಕಾಡುತ್ತಿದೆ ಎಂದು ಹೇಳಿದರು.
ಇಂದು ಕುಮಾರಣ್ಣನ ಆರೋಗ್ಯದ ಸ್ಥಿತಿಯ ಬಗ್ಗೆ ನಾನು ಮಾತನಾಡಲ್ಲ, ಕನಿಕರ ಪಡೆದು ಮತ ಹಾಕಿಸಿಕೊಳ್ಳುವ ನೀಚರು ನಾವಲ್ಲ ಎಂದರು. ಕುಮಾರಸ್ವಾಮಿಯವರು ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ನಾನು ನನ್ನ ಆರೋಗ್ಯ ಲೆಕ್ಕಿಸದೇ ಅವರನ್ನು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಉಪ ಚುನಾವಣೆಯ ಪ್ರಚಾರದಲ್ಲಿ ನಿರಂತರ 14 ದಿನಗಳ ಕಾಲ ತಿರುಗಾಡಿದ್ದಾರೆ, ಒಂದು ಕ್ಷಣವೂ ಮಲಗಿಲ್ಲ. ರಾಜ್ಯದ ಜನ ಅನರ್ಹರಿಗೆ ಪಾಠ ಕಲಿಸುತ್ತಾರೆ ಎಂದು ನನ್ನ ಬಳಿ ಹೇಳಿಕೊಳ್ಳುತ್ತಿದ್ದರು. ಆದರೆ ಇಂದು ಅನರ್ಹರಿಗೆ ಗೆಲುವಾಗಿದೆ, ಮತದಾರರಿಗೆ ಸೋಲಾಗಿದೆ ಎಮದು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications