ಫೇಸ್‌ಬುಕ್‌ನಲ್ಲಿ ಕಂಡಿದ್ದೆಲ್ಲಾ ಸತ್ಯವಲ್ಲ, ಆರ್‌ಟಿಓ ಮಂಜುನಾಥ್‌ಗೆ ಏನಾಗಿತ್ತು?
ಬೆಂಗಳೂರು, ಸೆಪ್ಟೆಂಬರ್ 16: ಸಾಮಾಜಿಕ ಜಾಲತಾಣ ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಬಂದಿದ್ದೆಲ್ಲಾ ಸತ್ಯವೆಂದು ನಂಬಬೇಡಿ.
ಯಾವುದಾದರೂ ವಿಚಾರಗಳನ್ನು ನಂಬಬೇಕಿದ್ದರೆ ಅಥವಾ ಆ ಪೋಸ್ಟ್‌ಗಳನ್ನು ಶೇರ್‌ಮಾಡಬೇಕಿದ್ದರೆ ನೂರು ಬಾರಿ ಯೋಚಿಸಿ. ಯಾಕೆಂದರೆ ನೀವು ಮಾಡುವ ಪೋಸ್ಟ್ ಅಥವಾ ಕಾಮೆಂಟ್‌ಗಳು ಇನ್ನೊಬ್ಬರ ಜೀವವನ್ನೇ ಕಸಿಯಬಹುದು ಅಥವಾ ಅವರ ಮನಸ್ಸಿಗೆ ನೋವುಂಟು ಮಾಡಬಹುದು.
ಈ ಪೀಠಿಕೆ ಹಿಂದೆ ಒಂದು ಘಟನೆ ಇದೆ.. ಮೊನ್ನತಾನೆ ಸಾಮಾಜಿಕ ಆರ್‌ಟಿಓ ಅಧಿಕಾರಿಯೊಬ್ಬರು ಕುಡಿದು ವಾಹನ ಚಲಾಯಿಸುತ್ತಿದ್ದರು ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಜನರೆಲ್ಲಾ ಛೀ, ಥೂ ಎಂದು ಉಗಿದಿದ್ದೇ ಉಗಿದಿದ್ದು ಆದರೆ ಅವರಿಗೆ ನಿಜಕ್ಕೂ ಏನಾಗಿತ್ತು, ಅವರು ಕುಡಿದಿದ್ದು ಹೌದಾ, ಘಟನೆ ಎಲ್ಲಿ ನಡೆದಿದ್ದು ಈ ಎಲ್ಲಾ ವಿಚಾರವನ್ನು ಬಿಟ್ಟು ಕೇವಲ ಆ ಒಂದು ಫೇಸ್‌ಬುಕ್ ವಿಡಿಯೋವನ್ನು ನೋಡಿ ಜನರು ಮಾನವೀಯತೆ ಮರೆತಿದ್ದರು. ಆದರೆ ನಿಜಕ್ಕೂ ಘಟನೆ ಏನು ಎಂಬುದನ್ನು ನಾವು ತಿಳಿಸಲು ಪ್ರಯತ್ನಿಸುತ್ತೇವೆ...

ದುಬಾರಿ ದಂಡದಿಂದ ಬೇಸತ್ತಿದ್ದ ಜನರು ವಿಡಿಯೋ ಶೇರ್ ಮಾಡಿದ್ದರು
ಜನರು ಅಷ್ಟರಲ್ಲಾಗಲೇ ದುಬಾರಿ ದಂಡದಿಂದ ಬೇಸತ್ತಿದ್ದರು, ಆಟೋ ಡ್ರೈವರ್ ಒಬ್ಬರು ಫೇಸ್‌ಬುಕ್‌ನಲ್ಲಿ ಹಾಕಿದ್ದ ವಿಡಿಯೋವನ್ನು ನೋಡಿ ಜನರು ಶೇರ್ ಮಾಡಲು ಆರಂಭಿಸಿದ್ದರು.ಬಾಯಿಗೆ ಬಂದಂತೆ ಬೈದರು, ಅಧಿಕಾರಿಯೇ ರೂಲ್ಸ್ ಫಾಲೋ ಮಾಡದಿದ್ದರೆ ಹೇಗೆ ಎನ್ನುವ ಟೀಕೆ, ಟಿಪ್ಪಣಿಗಳು ಹರಿದಾಡಿದವು.

ನಿಜವಾಗಲೂ ನಡೆದಿದ್ದೇನು?
ಸಾಜಾಮಿಕ ಜಾಲತಾಣದಲ್ಲಿ ಅಪ್ಲೋಡ್ ಆದ ವಿಡಿಯೋ ಅರ್ಧ ಸತ್ಯ, ಅರ್ಧ ಸುಳ್ಳು, ಆರ್‌ಟಿಓ ಅಧಿಕಾರಿಯ ಕಾರು ಅಪಘಾತವಾಗಿದ್ದು ಸತ್ಯ, ಆದರೆ ಕುಡಿದು ವಾಹನ ಚಾಲನೆ ಮಾಡಿದ್ದಕ್ಕಲ್ಲ.
ಬದಲಾಗಿ ಲೋ ಬಿಪಿಯಿಂದ.. ಹೌದು ಮಂಜುನಾಥ್ ಅವರು ಸೀನಿಯರ್ ಆಫೀಸರ್.. ಅವರಿಗೆ ಲೋ ಬಿಪಿ ಕಾಣಿಸಿಕೊಂಡು ವಾಹನ ಅಪಘಾತಕ್ಕೀಡಾಯಿತು. ಆದರೆ ಆ ಮಹಾನುಭಾವ ಮಾಡಿದ ಸುಳ್ಳಿನ ವಿಡಿಯೋದಿಂದ ಕುಗ್ಗಿ ಹೋದ ಮಂಜುನಾಥ್ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಆರ್‌ಟಿಓ ಅಧಿಕಾರಿ ಮಂಜುನಾಥ್ ಸಾವು
ಆದರೆ ಸುಳ್ಳಿನ ಕಥೆಯಲ್ಲಿ ಒಂದು ಜೀವ ಹೋಗಿದೆ. ಇದಕ್ಕೆ ಹೊಣೆಯಾರು? ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂದು ಹಿರಿಯರು ಹೇಳಿರುವ ಮಾತು ಬರಿ ಮಾತಲ್ಲ ಅದು ಸತ್ಯ..

ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮುನ್ನ ಎಚ್ಚರವಿರಲಿ
ಸಾಮಾಜಿಕ ಜಾಲತಾಣದಲ್ಲಿ ಹಿಂದೆ ಮುಂದೆ ಯೋಚಿಸದೆ ವಿಡಿಯೋಗಳನ್ನು ಶೇರ್ ಮಾಡುವ ಮುನ್ನ ಎಚ್ಚರವಿರಲಿ. ಈ ಘಟನೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಕುಟುಂಬವು ಧಿಕ್ಕಾರ ಹಾಕುತ್ತಿದೆ.

ಅನಾರೋಗ್ಯದಲ್ಲೂ ಕರ್ತವ್ಯ ನಿಷ್ಠೆ ತೋರಿದ ಮಂಜುನಾಥ್
ಅನಾರೋಗ್ಯದ ಕಾರಣ ಒಂದು ತಿಂಗಳು ರಜೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದರು. ಸಂಚಾರ ದಂಡ ಪರಿಷ್ಕರಣೆ ಬಳಿಕ ಚಾಲನಾ ಪರವಾನಗಿ ಮಾಡಿಸಿಕೊಳ್ಳಲು ಆರ್‌ಟಿಓಗೆ ಬರುವವರ ಸಂಖ್ಯೆ ಹೆಚ್ಚಾಗಿತ್ತು.
ಕಚೇರಿಗೆ ಬರುವಂತೆ ಮೇಲಧಿಕಾರಿಗಳು ಮಂಜುನಾಥ್‌ಗೆ ಸೂಚಿಸಿದ್ದರು.ಅದಕ್ಕಾಗಿ ರಜೆ ಅರ್ಧಕ್ಕೆ ಮೊಟಕುಗೊಳಿಸಿ ಗುರುವಾರ ಬೆಳಗ್ಗೆ ಔಷಧ ತೆಗೆದುಕೊಂಡು ಬರುವಾಗ ಮಂಪರು ಉಂಟಾಗಿ ಆಟೋಕೆ ಕಾರು ಡಿಕ್ಕಿಯಾಗಿತ್ತು.












Click it and Unblock the Notifications