Tunnel Road Project: ಟನಲ್ ರಸ್ತೆ ಬೇಡ ಎಂದವರಿಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಭವಿಷ್ಯದ ಬೆಂಗಳೂರಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಮತ್ತೊಂದೆಡೆ ಈ ಯೋಜನೆಗೆ ಭಾರೀ ವಿರೋಧವೂ ವ್ಯಕ್ತವಾಗಿದೆ. ಇಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಲಾಲ್‌ಬಾಗ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು, ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ ನಡೆಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಟನಲ್ ರಸ್ತೆ ಯೋಜನೆ ಬಗ್ಗೆ ಬಿಜೆಪಿಯವರು ರಾಜಕೀಯ ಉದ್ದೇಶದಿಂದ ವಿರೋಧಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಟನಲ್ ರಸ್ತೆ ಯೋಜನೆ ಬಗ್ಗೆ ಉಪಮುಖ್ಯಮಂತ್ರಿಗಳು ಈಗಾಗಲೇ ಉತ್ತರ ನೀಡಿದ್ದಾರೆ. ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಇದನ್ನು ವಿರೋಧಿಸುತ್ತಿದ್ದಾರೆ. ಈ ಬಗ್ಗೆ ಯೋಜನೆಯ ಬಗ್ಗೆ ವಿರೋಧ ಪಕ್ಷದ ಕಳವಳಗಳನ್ನು ಪರಿಶೀಲಿಸಿ ಒಮ್ಮತಕ್ಕೆ ಬರಲು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಯೋಜನೆ ಬಗ್ಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಈಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸುವ ಈ ಯೋಜನೆಗೆ ವಿರೋಧ ಏಕೆ ವ್ಯಕ್ತವಾಗಬೇಕು? ಇದೇ ರೀತಿಯ ಟನಲ್ ಯೋಜನೆಗಳನ್ನು ಅನೇಕ ದೇಶದಲ್ಲಿಯೂ ಕೈಗೊಳ್ಳಲಾಗಿದೆ. ಅಲ್ಲಿನ ಜನರು ಇದನ್ನು ವಿರೋಧಿಸಿಲ್ಲ. ಟನಲ್ ಯೋಜನೆಯನ್ನು ಕಾರು, ಬಸ್, ದ್ವಿಚಕ್ರ ವಾಹನ ಸವಾರರು ಹೀಗೆ ಎಲ್ಲ ವರ್ಗದ ಜನರಿಗೆ ಅನುಕೂಲವಾಗಲೆಂದು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ರಾಜಕೀಯ ಗಿಮಿಕ್ ಏಕೆ?
ಬಿಜೆಪಿ ನಾಯಕರು 'ಲಾಲ್‌ಬಾಗ್ ಉಳಿಸಿ' ಎಂದು ನಾಟಕವಾಡುತ್ತಿದ್ದಾರೆ. ಲಾಲ್‌ಬಾಗ್ ಬಗ್ಗೆ ನಿಮ್ಮದು ಕಾಳಜಿಯೋ? ರಾಜಕೀಯವೋ? ಎಂದು ಕಾಂಗ್ರೆಸ್ ಸಚಿವ ರಾಮಲಿಂಗಾರೆಡ್ಡಿ ಕೂಡ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ಲಾಲ್‌ಬಾಗ್ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಇಡೀ ಯೋಜನೆಯನ್ನು ರದ್ದುಪಡಿಸಲು ಹಠ ಹಿಡಿಯುವ ಬದಲು, ಸುರಂಗದ ಪ್ರವೇಶ ಮತ್ತು ನಿರ್ಗಮನಕ್ಕೆ ಪರ್ಯಾಯ ಜಾಗವನ್ನು ಸೂಚಿಸುವ ಧೈರ್ಯ ತೋರಿ. ಅದನ್ನು ಬಿಟ್ಟು, ಜನರ ದಾರಿ ತಪ್ಪಿಸುವ ರಾಜಕೀಯ ಗಿಮಿಕ್ ಏಕೆ? ಎಂದು ಕೇಳಿದ್ದಾರೆ.
ನಿತಿನ್ ಗಡ್ಕರಿ ಬೆಂಗಳೂರಿಗೆ ಸುರಂಗವೇ ಮದ್ದು ಎಂದಿದ್ದರು. ಈಗೇಕೆ ಈ ಯೂ-ಟರ್ನ್? ಬೇರೆ ರಾಜ್ಯಗಳಲ್ಲಿ ಅಭಿವೃದ್ಧಿಯಾಗುವ ಸುರಂಗ, ಬೆಂಗಳೂರಿನಲ್ಲಿ ಮಾತ್ರ ಪರಿಸರ ವಿರೋಧಿಯಾಗುವುದೇ? ಬೆಂಗಳೂರಿನ ಜನತೆಗೆ ಬೇಕಿರುವುದು ಸಂಚಾರ ದಟ್ಟಣೆಯಿಂದ ಮುಕ್ತಿ, ನಿಮ್ಮ ರಾಜಕೀಯ ಅಡ್ಡಿ ಆತಂಕಗಳಲ್ಲ. ನಿಮ್ಮ ಪರಿಸರ ಪ್ರೇಮ ಎಂಬ ನಾಟಕ ಕೇವಲ ಲಾಲ್‌ಬಾಗ್‌ಗೆ ಸೀಮಿತವೇ? ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ನಿಮ್ಮ ಅವಧಿಯಲ್ಲಿ ಎಷ್ಟು ಅನುದಾನ ನೀಡಿದ್ದೀರಿ? ಅಧಿಕಾರದಲ್ಲಿ ಇದ್ದಾಗ ನಿಮಗೆ ಪರಿಸರದ ಮೇಲೆ ಎಷ್ಟರ ಮಟ್ಟಿಗೆ ಕಾಳಜಿ ಇತ್ತು ಎಂದು ಇದರಲ್ಲೇ ತಿಳಿಯುತ್ತದೆ. ಬಿಜೆಪಿಯವರೇ, ಅಭಿವೃದ್ಧಿಗೆ ಕೈಜೋಡಿಸಿ, ಇಲ್ಲವೇ ಜನರ ಮುಂದೆ ನಿಮ್ಮ ದ್ವಂದ್ವ ನೀತಿಯನ್ನು ಒಪ್ಪಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.












Click it and Unblock the Notifications