Railway Project: ಬೆಂಗಳೂರಿಗೆ ಬೆಟ್ಟಹಲಸೂರು-ರಾಜನುಕುಂಟೆ ರೈಲು ಮಾರ್ಗದ ಪ್ರಯೋಜನಗಳು
ಬೆಂಗಳೂರು, ಜನವರಿ 10: ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಾದೇಶಿಕವಾಗಿ ರೈಲು ಸಂಚಾರದ ಸುಧಾರಣೆಗೆ ಅನಕೂಲವಾಗಿರುವ ಹಾಗೂ ಸರಕು ಸಾಗಾಣೆಗೆ ಮೀಸಲಾಗಿರುವ ಹೊಸ ರೈಲು ಯೋಜನೆಯೊಂದನ್ನು ಬೆಂಗಳೂರಿನ ವಿಶೇಷ ಯೋಜನೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಅಷ್ಟಲ್ಲದೇ ಯೋಜನೆಯ ವೆಚ್ಚ, ಭೂಮಿಸ್ವಾಧೀನ ಕುರಿತು ಅಗತ್ಯ ಮಾಹಿತಿಗಳನ್ನು ಅಧಿಕಾರಿಗಳು ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಬೆಟ್ಟಹಲಸೂರು-ರಾಜನುಕುಂಟೆ ರೈಲು ಮಾರ್ಗವು ರೈಲು ಸಾರಿಗೆ ಸಂಪರ್ಕ ಸುಧಾರಿಸಲಿದೆ. ಈ ಯೋಜನೆ ಇನ್ನೂ ಕಾರ್ಯಗತವಾಗದಿದ್ದರೂ ಈ ಯೋಜನೆ ಮೇಲೆ ಸಾಕಷ್ಟು ಭರವಸೆ ಇದೆ. ಕಾರಣ 6.14 ಕಿಲೋಮೀಟರ್ ರೈಲು ಮಾರ್ಗವು ಸರಕು ಸಾಗಣೆಗೆ ಮೀಸಲಾಗಿದ್ದರೂ, ಬೆಂಗಳೂರಿನಿಂದ ಹೊರ ಹೋಗುವ ರೈಲುಗಳ ಸಂಚಾರಕ್ಕೆ ಪೂರಕವಾಗಲಿದೆ.

₹248 ಕೋಟಿ ಅಂದಾಜು ವೆಚ್ಚ
ಬೆಟ್ಟಹಲಸೂರು-ರಾಜನುಕುಂಟೆ ಸರಕು ಸಾಗಾಣೆ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಅಂದಾಜು ₹248 ಕೋಟಿ ವೆಚ್ಚವಾಗಲಿದೆ. ಮೆಜೆಸ್ಟಿಕ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣ ಬೆಂಗಳೂರಿನಿಂದ ಯಲಹಂಕ ರೈಲ್ವೆ ಜಂಕ್ಷನ್ ಮಧ್ಯೆ ಸಂಚಾರ ಸುಗಮಗೊಳಿಸುವಲ್ಲಿ ಈ ಮಾರ್ಗ ಮಹತ್ವದ ಪಾತ್ರ ವಹಿಸಲಿದೆ. ಸದ್ಯ ಯೋಜನೆ ಇನ್ನೂ ಆರಂಭವಾಗಿಲ್ಲ, ಯೋಜನೆಗೆ ಭೂಸ್ವಾಧೀನ ಆರಂಭವಾಗಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಲಹಂಕ ಜಂಕ್ಷನ್‌ನಲ್ಲಿ ಆಗಾಗ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರ ಪರಿಹಾರಕ್ಕೆ ಈ ಸರಕು ಸಾಗಾಣೆ ಮಾರ್ಗ ಅನುಕೂಲವಾಗಲಿದೆ. ನೆರೆಯ ರಾಜ್ಯವಾದ ಆಂಧ್ರಪ್ರದೇಶ ವ್ಯಾಪ್ತಿ ಪೆನುಕೊಂಡ ಮಾರ್ಗವಾಗಿ ತ್ವರಿತವಾಗಿ ವಾಹನಗಳು, ಸರಕು ಸಾಗಾಣೆ ಮಾಡಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜನುಕುಂಟೆ ಮಾರ್ಗದಿಂದ ಆರ್ಥಿಕ ಲಾಭವಾಗುತ್ತಾ?
ರಾಜನುಕುಂಟೆ-ಬೆಟ್ಟಹಲಸೂರು ರೈಲು ಮಾರ್ಗವು ಕೈಗಾರಿಕೆ ಬೆಳವಣಿಗೆಗೆ ಸಹಾಯವಾಗಲಿದೆ. ಸರಕು ತುಂಬಿದ ಕಂಟೇನರ್ ರೈಲುಗಳು ರಾಜನುಕುಂಟೆ, ದೇವನಹಳ್ಳಿ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಮಾರ್ಗದ ಮೂಲಕ ತ್ವರಿತಗತಿಯಲ್ಲಿ ಸಾಗಿಸಲು ನೆರವಾಗಲಿದೆ. ಇದರಿಂದ ಕೈಗಾರಿಕೆ ಉತ್ಪನ್ನಗಳ ಪೂರೈಕೆ ಪ್ರಮಾಣ ಹೆಚ್ಚಳ ನಿರೀಕ್ಷಿಸಬಹುದು.

ರೈಲು ಸಾರಿಗೆ ಹೆಸರೇ ಹೇಳುವಂತೆ ಇದೊಂದು ಕಡಿಮೆ ವೆಚ್ಚದ ಸಾರಿಗೆ. ತ್ವರಿತ ಸಂಚಾರದಿಂದಾಗಿ ಹಣ ಹಾಗೂ ಸಮಯ ಉಳಿತಾಯವಾಗುತ್ತಿದೆ. ರಸ್ತೆ ಸಾರಿಗೆ ಮೇಲಿನ ಪರಾವಲಂಬನೆ ತಪ್ಪಲಿದೆ. ಸದ್ಯ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕೈಗಾರಿಕೆ ವಲಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ
ಸಾರಿಗೆ ತಜ್ಞರು ಈ ಸರಕು ಸೇವಾ ರೈಲು ಮಾರ್ಗದಿಂದ ಬೆಂಗಳೂರಿನ ಆರ್ಥಿಕ ಮೂಲ ಸೌಕರ್ಯ ಬಲವರ್ಧನೆಗೊಳ್ಳಲಿದೆ. ರೈಲ್ವೆ ಸಂಪರ್ಕ ಸರಿಯಾಗಿದ್ದಲ್ಲಿ, ಕೈಗಾರಿಕೆ ಮೇಲಿನ ಹೂಡಿಕೆ, ಆಯಾ ಭಾಗಗಳ ಅಭಿವೃದ್ಧಿ, ಕ್ರಮೇಣ ಕೈಗಾರಿಕಾ ವಲಯಗಳ ಬೆಳವಣಿಗೆ ಸಾಧಿಸಬಹುದು ಎಂದು ಯೋಜನೆಯನ್ನು ಅವರು ಬೆಂಬಲಿಸಿದ್ದಾರೆ.
ಇಂದು ಮಾತ್ರವಲ್ಲದೇ ಭವಿಷ್ಯದಲ್ಲಿ ಸೃಷ್ಟಿಯಾಗುವ ಸರಕು ಸಾಗಣೆ ಬೇಡಿಕೆಗಳ ನಿರ್ವಹಣೆಗೂ ರೈಲ್ವೆ ಇಂಜಿನಿಯರ್‌ಗಳು ಸುರಕ್ಷಿತ ಹಾಗೂ ಪರಿಣಾಮಕಾರಿ ವ್ಯವಸ್ಥೆ ವಿನ್ಯಾಸಗೊಳಿಸಿದ್ದಾರೆ. ಆರ್ಥಿಕ ಬೆಳವಣಿಗೆಗೆ ಪೂರಕವಾಗಿಯೇ ಯೋಜನೆ ಸಿದ್ಧಪಡಿಸಿದ್ದಾರೆ. ಕೈಗಾರಿಕೆ ಬೆಳವಣಿಗೆ ಜೊತೆಗೆ ಉದ್ಯೋಗ ಸೃಷ್ಟಿಗೆ ಅನುಕೂಲವಾಗುತ್ತದೆ. ಬೆಂಗಳೂರಿನ ಸಾರಿಗೆ ವಲಯವು ಮತ್ತಷ್ಟು ಅಭಿವೃದ್ಧಿ ಆದಂತಾಗುತ್ತದೆ.
ವ್ಯಾಪಾರ ಮತ್ತು ಪೂರೈಕೆ ಸರಪಳಿಗೆ ಸುಧಾರಣೆ
ದಕ್ಷಿಣ ಭಾರತದ ಸಾರಿಗೆ ವಲಯದಲ್ಲಿ ವ್ಯಾಪಾರ ಮತ್ತು ಪೂರೈಕೆ ಸರಪಳಿಗೆ ಸುಧಾರಿಸಲಿದೆ. ಯೋಜನೆ ನಿರ್ಮಾಣದ ಪ್ರತಿ ಹಂತಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತದೆ. ಸಾರ್ವಜನಿಕ ಸಹಭಾಗಿತ್ವಕ್ಕೆ ಒತ್ತು ನೀಡಲಾಗುವುದು. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು, ತ್ವರಿತ ಸಾರಿಗೆ ಉತ್ತೇಜನ ನೀಡುವಲ್ಲಿ ಯೋಜನೆ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯ ಹೊರ ಹಾಕಿದರು.












Click it and Unblock the Notifications