ಪಾರ್ಕಿಂಗ್ ಜಾಗವನ್ನು ಅನ್ಯ ಉದ್ದೇಶಗಳಿಗೆ ಬಳಸುತ್ತಿದ್ದೀರಾ? ಹುಷಾರ್..
ಬೆಂಗಳೂರು, ಡಿಸೆಂಬರ್ 25: ವಾಹನ ನಿಲುಗಡೆ ವ್ಯವಸ್ಥೆ ಮಾಡದೆ ಮನೆ ಕಟ್ಟಿಸಿರುವವರಿಗೆ, ಪಾರ್ಕಿಂಗ್ ಜಾಗವನ್ನು ಬೇರೆ ಉದ್ದೇಶಗಳಿಗೆ ಳಕೆ ಮಾಡುವವರಿಗೆ ಬಿಬಿಎಂಪಿಯಿಂದ ಶಾಕ್ ಕಾದಿದೆ.
ಮುಂದಿನ ವಾರದಿಂದ ಇಂತಹ ಕಟ್ಟಡಗಳ ಸಮೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ. ಪ್ರತಿ ಕಟ್ಟಡದಲ್ಲೂ ನಿಲುಗಡೆ ವ್ಯವಸ್ಥೆ ಇರಬೇಕು ಇಲ್ಲವಾದಲ್ಲಿ ನಕ್ಷೆ ಮಂಜೂರಾತಿ ರದ್ದು ಮಾಡುವ ನಿರ್ಧಾರಕ್ಕೆ ಬಂದಿದೆ.
ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ನಿಯಮಾವಳಿ ಪ್ರಕಾರ ಪಾರ್ಕಿಂಗ್ ಸೌಲಭ್ಯ ಇಲ್ಲದಿರುವುದರಿಂದ ವಾಹನಗಳು ರಸ್ತೆಯನ್ನೇ ಅವಲಂಬಿಸಿವೆ. ನಕ್ಷೆ ಮಂಜೂರಾತಿಯನ್ವಯ ವಾಹನ ನಿಲುಗಡೆ ಸ್ಥಳಗಳನ್ನು ಅನ್ಯ ಉದ್ದೇಶಗಳಿಗೆ ಬಳಸಿರುವ ಮತ್ತು ಪಾದಚಾರಿ ಮಾರ್ಗಗಳನ್ನೂ ಅತಿಕ್ರಮಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 28 ಲಕ್ಷ ಕಟ್ಟಡಗಳ ಪೈಕಿ 70ರಷ್ಟು ಕಟ್ಟಡಗಳು ಪಾರ್ಕಿಂಗ್ ಸೌಲಭ್ಯವನ್ನೇ ಹೊಂದಿಲ್ಲ. ಆದರೆ, ಆ ಸ್ಥಳಗಳನ್ನು ಮಳಿಗೆಗಳು, ಕ್ಯಾಂಟೀನ್, ರೆಸ್ಟೋರೆಂಟ್ ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ವಸತಿ ಪ್ರದೇಶಗಳಲ್ಲಿನ ಇಕ್ಕಟ್ಟಾದ ರಸ್ತೆಗಳ ಇಕ್ಕೆಲಗಳಲ್ಲಿ ಕಾರುಗಳನ್ನು ನಿಲುಗಡೆ ಮಾಡುವುದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತದೆ. ಪಾರ್ಕಿಂಗ್ ಸ್ಥಳಗಳನ್ನು ಅನ್ಯ ಉದ್ದೇಶದಿಂದ ಬಳಸುತ್ತಿರುವ ಕಟ್ಟಡಗಳನ್ನು ಗುರುತಿಸಲು ಮತ್ತು ಪಾದಚಾರಿ ಮಾರ್ಗದ ಅತಿಕ್ರಮಣ ಪತ್ತೆ ಮಾಡಿ, ಅದರ ತೆರವಿಗೆ ಯೋಜನೆ ರೂಪಿಸುವಂತೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.












Click it and Unblock the Notifications