ಶಿಷ್ಯನ ತೋಟದಲ್ಲಿ ಇತಿಹಾಸಕಾರ ಷ ಶಟ್ಟರ್ ಅಂತ್ಯಕ್ರಿಯೆ
ಬೆಂಗಳೂರು, ಫೆಬ್ರವರಿ 28: ಶುಕ್ರವಾರ ನಿಧನರಾದ ಖ್ಯಾತ ಇತಿಹಾಸಕಾರ ಷ ಶಟ್ಟರ್ ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಕೋಲಾರ ಜಿಲ್ಲೆಯ ಮಾಲೂರು ಬಳಿಯ ಆಲದಳ್ಳಿ ತೋಟದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ವಿಶೇಷವೆಂದರೆ ಷ ಶಟ್ಟರ್ ಅವರ ಶಿಷ್ಯರೊಬ್ಬರ ತೋಟದಲ್ಲಿ ಶಟ್ಟರ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಶನಿವಾರ ಮಧ್ಯಾಹ್ನದವರೆಗೆ ಬೆಂಗಳೂರಿನ ಭೂಪಸಂದ್ರದಲ್ಲಿರುವ ಕಲ್ಪನಾ ಚಾವ್ಲಾ ರಸ್ತೆಯ ಅವರ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಹಲವು ದಿನಗಳ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಇತಿಹಾಸಕಾರ, ಲೇಖಕ ಷ, ಶೆಟ್ಟರ್ (85) ಶುಕ್ರವಾರ ನಸುಕಿನ 3 ಗಂಟೆ ಸುಮಾರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಷ. ಶೆಟ್ಟರ್ ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದರಿಂದ ಅವರು ಉಸಿರಾಟದ ಸಮಸ್ಯೆ ಅನುಭವಿಸುತ್ತಿದ್ದರು. ಅವರಿಗೆ ಬನ್ನೇರುಘಟ್ಟದ ಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಬಳ್ಳಾರಿ ಜಿಲ್ಲೆಯ ಹಂಪಸಾಗರದಲ್ಲಿ 1935ರ ಡಿಸೆಂಬರ್ 11ರಂದು ಜನಿಸಿದ ಅವರು, ಮೈಸೂರು, ಧಾರವಾಡ ಮತ್ತು ಕೇಂಬ್ರಿಡ್ಜ್‌ನಲ್ಲಿ ಉನ್ನತ ಅಧ್ಯಯನ ನಡೆಸಿದ್ದಾರೆ. ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡದ ಕುರಿತು 27ಕ್ಕೂ ಅಧಿಕ ಸಂಶೋಧನಾ ಕೃತಿಗಳನ್ನು ಬರೆದಿದ್ದಾರೆ.












Click it and Unblock the Notifications