Bengaluru Rains : ಬೆಂಗಳೂರಲ್ಲಿ ಇನ್ನೂ 2 ದಿನ ಮಳೆ, ಚಳಿ ಮುಂದುವರಿಕೆ
ಬೆಂಗಳೂರು, ನವೆಂಬರ್ 24: ಹವಾಮಾನದಲ್ಲಿನ ನಿರಂತರ ಬದಲಾವಣೆಗಳಿಂದ ಬೆಂಗಳೂರಿನಲ್ಲಿ ಮಳೆಯ ಚಿಂಚನ ಜೊತೆಗೆ ಚಳಿಯು ಮುಂದುವರಿದಿದೆ. ಮುಂದಿನ ಎರಡು ದಿನವು ಇದೇ ರೀತಿಯ ವಾತಾವರಣ ನಗರಾದ್ಯಂತ ಕಂಡು ಬರಲಿದೆ.
ನಗರದಲ್ಲಿ ಇಂದು ಗುರುವಾರ ಬೆಳಗ್ಗೆಯಿಂದಲೇ ಅಲ್ಲಲ್ಲಿ ಸೋನೆ ಮಳೆ ಆರಂಭವಾಗಿದೆ. ಇಡಿ ದಿನ ಚಳಿ ಹಾಗೂ ಮಬ್ಬು ವಾತಾವರಣ ಕಂಡು ಬರುವ ಸಾಧ್ಯತೆ ಇದೆ. ಮುಂದಿನ ಎರಡು ದಿನ ತಾಪಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹೇಳಲಾಗಿದೆ.
ಬುಧವಾರವು ಬೆಳಗ್ಗೆಯಿಂದಲೇ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಸೋನೆ ಮಳೆ ಕಂಡು ಬಂತು. ಈ ಪೈಕಿ ಹೊರಮಾವು ಪ್ರದೇಶದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಬೆಳಗ್ಗೆ ನಗರಾದ್ಯಂತ ಮಂಜು ಕವಿದಿದ್ದು ಕಂಡು ಬಂತು.

ಹೊರಮಾವು (2) 19ಮಿ.ಮೀ. ಮಳೆ, ಹೂಡಿ ಮತ್ತು ಯಲಹಂಕ ತಲಾ 18.50 ಮಿ.ಮೀ, ಯಲಹಂಕ ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್ 13.5, ಹಗದೂರು 11.5, ಕೊಡಿಗೆಹಳ್ಳಿ 10.5ಮಿ.ಮೀ. ಮಳೆ ಸುರಿದಿದೆ. ಉಳಿದಂತೆ ಮೆಜೆಸ್ಟಿಕ್, ಹಂಪಿನಗರ, ವಿಜಯನಗರ, ಹೆಬ್ಬಾಳ, ಜಕ್ಕೂರು, ನಾಗವಾರ, ಆರ್ಆರ್ ನಗರ, ಜ್ಞಾನಭಾರತಿ ಹೀಗೆ ಹಲವು ಕಡೆಗಳಲ್ಲಿ ಮಳೆ ಆಯಿತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ತಿಳಿಸಿದೆ.
ಆರೋಗ್ಯ ಕಾಳಜಿ ವಹಿಸುತ್ತಿರುವ ಜನ
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಚಳಿಗೆ ಅನಾರೋಗ್ಯಕ್ಕೆ ತುತ್ತಾಗುವ ಭಯದಿಂದ ಸಾರ್ವಜನಿಕರು, ವೃದ್ಧರು, ಮಕ್ಕಳು ಆರೋಗ್ಯ ಕಾಳಜಿ ವಹಿಸುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಹೊರ ಬರುವುದು ತುಸು ಕಡಿಮೆ ಮಾಡಿದ್ದಾರೆ.. ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಧಿರಿಸಿನ ಮೊರೆ ಹೋಗಿದ್ದಾರೆ. ಬೆಂಗಳೂರಿನ ಎಲ್ಲೆಡೆ ಚಳಿಗಾಲದ ವಾತಾವರಣ ಕಂಡು ಬರುತ್ತಿದೆ. ಮುಂದಿನ ಎರಡು ದಿನ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ.

ಬಂಗಾಳಕೊಲ್ಲಿ ಸಮುದ್ರದಿಂದ ಆಂಧ್ರ ಪ್ರದೇಶದ ಕರಾವಳಿ ವರೆಗೆ ವಾಯುಭಾರ ಕುಸಿತ ಉಂಟಾಗಿದೆ. ಅಲ್ಲದೇ ತಮಿಳುನಾಡು ಕರಾವಳಿ ಭಾಗದಲ್ಲಿ ಸಹ ಮೇಲ್ಮೈ ಸುಳಿಗಾಳಿ ಕಂಡು ಬಂದಿದೆ. ಈಹಿನ್ನೆಲೆಯಲ್ಲಿ ಕೆಲವೆಡೆ ಭಾರಿ ಮಳೆ ಚಳಿ ಕಂಡು ಬಂದಿದೆ. ಇದರ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ತುಂತುತು ಇಲ್ಲವೇ ಹಗುರ ಮಳೆ ಹಾಗೂ ಚಳಿ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications