ಬಿಜೆಪಿಯವರ ಬಾಂಡ್ ವಸೂಲಿ ಇತಿಹಾಸ ನಮಗೆ ಗೊತ್ತಿದೆ: ಡಿ.ಕೆ.ಶಿವಕುಮಾರ್
ಬೆಂಗಳೂರು, ನವೆಂಬರ್ 4: ಬಿಜೆಪಿಯವರ ಬಾಂಡ್ ವಸೂಲಿಯ ಇತಿಹಾಸ ನಮಗೆ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ಟಿಕೆಟ್‌ಗಾಗಿ ಅರ್ಜಿ ಹಾಕುವದರ ಜೊತೆ 2 ಲಕ್ಷ ರೂ. ಡಿಡಿ ಕಟ್ಟಬೇಕು ಎಂಬ ಹೇಳಿಕೆಗೆ ಕಾಂಗ್ರೆಸ್ ಹಣ ವಸೂಲಿ ಮಾಡುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿತ್ತು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, 'ನಾವು ನಮ್ಮ ಕಾರ್ಯಕರ್ತರಿಂದ ಪಡೆಯುತ್ತಿದ್ದೇವೆ. ಬಿಜೆಪಿಯವರು ಎಷ್ಟು ಬಾಂಡ್‌ಗಳನ್ನು ವಸೂಲಿ ಮಾಡಿದ್ದಾರೆ. ಅವರ ಬಾಂಡ್ ಇತಿಹಾಸ ನಮಗೆ ಗೊತ್ತಿದೆ. ಆದರೆ ನಮಗೆ ಬಾಂಡ್ ಕೊಡುವವರಿಲ್ಲ. ಹೀಗಾಗಿ ಪಕ್ಷದ ಸಂಘಟನೆಗೆ ನಾವು ನಮ್ಮ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದರೆ ಬಿಜೆಪಿಯವರಿಗೇನು ನೋವು' ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಬಿಜೆಪಿಯವರು ಏನಾದರೂ ಟೀಕೆ ಮಾಡಲಿ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಅರ್ಜಿ ಶುಲ್ಕ 5 ಸಾವಿರ ಹಾಗೂ ಅರ್ಜಿ ಸಲ್ಲಿಸುವಾಗ 2 ಲಕ್ಷ, 1 ಲಕ್ಷ ರು. ಡಿಡಿ ಪಡೆದರೆ ಬಿಜೆಪಿಯವರಿಗೇನು ನೋವು ಎಂದು ಡಿಕೆಶಿ ಕಿಡಿಕಾರಿದರು.
ನಿಮ್ಮ ಪಕ್ಷದ ಕಾರ್ಯಕರ್ತರೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ನನ್ನ ಬಳಿ ಯಾರೂ ಕೂಡ ಅಸಮಾಧಾನ ವ್ಯಕ್ತಪಡಿಸಿಲ್ಲ. ಅಸಮಾಧಾನಗೊಳ್ಳುವವರು ಪಕ್ಷದಲ್ಲಿ ಇರುವುದು ಬೇಡ, ಅವರು ಪಕ್ಷ ತೊರೆಯಬಹುದು. ಪಕ್ಷದ ವತಿಯಿಂದ ಎಲ್ಲರನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ. ಇದು ಪಕ್ಷದ ವಿಚಾರ. ಪಕ್ಷ ಉಳಿಯಬೇಕು. ಪಕ್ಷ ಹಾಗೂ ಪಕ್ಷದ ಬಾವುಟ ಕಟ್ಟುವವರು ಯಾರು? ಮಾತನಾಡುವವರು ಬಂದು ಪಕ್ಷ ಕಟ್ಟುತ್ತಾರಾ?' ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಬಾಗಿಲು ಕ್ಲೋಸ್ ಆಗಲಿದೆ ಎಂಬ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಬಾಗಿಲು ಮುಚ್ಚುವುದಾದರೆ, ಅವರು ಕಾಂಗ್ರೆಸ್ ಶಾಸಕರನ್ನು ಕಾಡಿ ಬೇಡಿ, ಕಾಲಿಗೆ ಬಿದ್ದು, ಹಣ ಕೊಟ್ಟು ಖರೀದಿ ಮಾಡಿದರಲ್ಲ. ನಮ್ಮ ಪಕ್ಷದ 13 ಹಾಗೂ ಜೆಡಿಎಸ್‌ನ 3 ಸದಸ್ಯರನ್ನು ಕರೆದುಕೊಂಡರಲ್ಲ, ಆಗೇನು ಅವರ ಪಕ್ಷದ ಬಾಗಿಲು ಬಂದ್ ಆಗಿತ್ತಾ? ಅವರಿಗೆ ತಾಕತ್ತಿದ್ದರೆ ಜನಮತದ ಆಧಾರದ ಮೇಲೆ ಗೆಲ್ಲಬೇಕಿತ್ತು. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ' ಎಂದು ಕಿಡಿಕಾರಿದರು.
ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದ ಬ್ರ್ಯಾಂಡ್ ಎಂಬ ಸಚಿವ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ಬಗ್ಗೆ ಮಾತನಾಡಿ, 'ನನ್ನನ್ನು ಟಾರ್ಗೆಟ್ ಮಾಡಿದರೆ ಅವರಿಗೆ ಮಾರ್ಕೆಟ್ ಇರುತ್ತದೆ' ಎಂದರು. ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ಹೇಳಿಕೆಗೆ ಕಾಲವೇ ಉತ್ತರ ನೀಡಲಿದೆ' ಎಂದರು.
ಇನ್ನೂ ರೇಣುಕಾಚಾರ್ಯ ಅವರ ಸಹೋದರನ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ. ಈ ವಿಚಾರವನ್ನು ನಾನು ಮಾಧ್ಯಮಗಳಲ್ಲಿ ನೋಡಿದೆ. ಇಂತಹ ಘಟನೆ ಆಗಬಾರದಿತ್ತು, ಆಗಿಹೋಗಿದೆ. ಈ ರೀತಿ ಹೇಗೆ ಆಯಿತು ಎಂದು ಎಲ್ಲರಿಗೂ ಅನುಮಾನ ಬರುತ್ತದೆ. ಸರ್ಕಾರ ಈ ಬಗ್ಗೆ ತನಿಖೆ ಮಾಡಿ ನ್ಯಾಯ ಒದಗಿಸಲಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ಧೈರ್ಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದರು.












Click it and Unblock the Notifications