'30-35 ವರ್ಷ ತನಕ ಮಾತ್ರ ಹೀರೋ ಆಮೇಲೆ ವಿಲನ್'- ನುಡಿದಂತೆ ನಡೆದ್ರಾ ನಟ ದರ್ಶನ್?
ನಟ ದರ್ಶನ್..ಡಿ ಬಾಸ್.. ಚಾಲೆಂಜಿಂಗ್ ಸ್ಟಾರ್..ಹೀಗೆ ಹತ್ತಾರು ಬಿರುದುಗಳನ್ನು ಹೊತ್ತು ಮೆರೆಯುತ್ತಿದ್ದ ನಟ ದರ್ಶನ್ ಕೋಟ್ಯಂತರ ಅಭಿಮಾನಿಗಳ ಪಾಲಿನ ಮೆಚ್ಚಿನ ಹೀರೋ..ಕೆಲವರಿಗಂತೂ ಆರಾಧ್ಯ ದೈವ ಎನ್ನುವ ರೀತಿ ವರ್ತಿಸುತ್ತಾರೆ. ಕೋಟ್ಯಂತರ ಕಣ್ಣುಗಳಲ್ಲಿ ಹೀರೋ ಆಗಿ ಮಿಂಚಿದ್ದ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ಒಂದು ಕುಟುಂಬದ ಪಾಲಿನ ವಿಲನ್..ಈಗೀಗ ನೂರಾರು ಕಣ್ಣಿಗೆ ವಿಲನ್..
ಹೀರೋ ಆಗಿ ಮೆರೆಯುತ್ತಿದ್ದ ದರ್ಶನ್ ಈಗ ಕೊಲೆ ಪ್ರಕರಣದ ಆರೋಪಿ. ಕಳೆದೊಂದು ವಾರದಿಂದ ಪೊಲೀಸರ ಅತಿಥಿ. ವಿಚಾರಣೆ, ಕೋರ್ಟ್, ವಕೀಲರು, ಮಾಧ್ಯಮಗಳು ಹೀಗೆ ಒಂದು ವಾರದಿಂದ ದರ್ಶನ್ ಹೀರೋಯಿಸಮ್ ಕಳೆಗುಂದುತ್ತಿದೆ. ಹೀರೋ ಹಾಗೂ ವಿಲನ್ ಜೀವನದಲ್ಲಿ ಎರಡು ಪಾತ್ರಗಳು ಬಂದೇ ಬರುತ್ತದೆ ಎಂದು ನಟ ದರ್ಶನ್ ಈ ಹಿಂದೆ ಅಂದರೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು.

ಅಂದು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ದರ್ಶನ್, ನೀವು ಖಳನಾಯಕನ ಮಗನಾಗಿ ನಾಯಕ ನಟನಾಗಿರುವುದಕ್ಕೆ ಏನನಿಸುತ್ತದೆ ಎನ್ನುವ ಪ್ರಶ್ನೆಗೆ ಸವಿವರವಾಗಿ ಉತ್ತರಿಸಿದ್ದರು. 'ನಾನು ನಾಯಕ ನಟನಾಗುವ ಮುಂಚೆ ಖಳನಾಯಕನಾಗಿದ್ದೆ. ಅದು ಫಸ್ಟ್ ನನಗೆ. ಆಮೇಲೆ ನಾನು ಹೀರೋ ಆಗಿದ್ದು. ಖಳನಾಯಕನ ಮಗ ಖಳನಾಯಕನಾಗೇ ಬಂದೆ ಎನ್ನುವ ಸಂತೋಷವಿದೆ' ಎಂದಿದ್ದರು.
'ಈಗಲೂ ನಾನು ಹೇಳುವುದೇನೆಂದರೆ ನಮ್ಮ ಜೀವಿತಾವಧಿಯಲ್ಲಿ ನನಗೆ ಇಷ್ಟು ವರ್ಷ ಆಗಬೇಕು ಎಂದು ತಲೆಯಲ್ಲಿ ಇಟ್ಟುಕೊಂಡಿದ್ದೇನೆ. ಅಷ್ಟಾದ ಮೇಲೆ ಕ್ಲೀನ್ ಆಗಿ ನಮ್ಮನ್ನು ನಾವು ಟರ್ನ್ ಮಾಡಿಕೊಳ್ಳುವುದು ಉತ್ತಮ. ಈಗ ಇಪ್ಪತ್ತರಿಂದ ಮೂವತ್ತು ವರ್ಷ..ಇಲ್ಲಾ ಮೂವತ್ತರಿಂದ ಮೂವತೈದು ವರ್ಷ ಹೀರೋ ಅಂತಾ ತೋರಿಸಬಹುದು. ಆಮೇಲಿಂದ ನಾವು ವಿಲನ್ ಆಗುವುದು ಉತ್ತಮ ಎನ್ನುವುದು ನನ್ನ ಅನಿಸಿಕೆ' ಎಂದು ದರ್ಶನ್ ಹೇಳಿದ್ದರು.
ಇನ್ನು 'ಇದೇ ಸಂದರ್ಶನದಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡಿದ ದರ್ಶನ್, ನನಗೆ ಒಳ್ಳೆಯ ಅಭಿಮಾನಿಗಳೇ ಇದ್ದಾರೆ. ಅವರು ಅಭಿಮಾನಿಗಳಿಗಿಂತ ನನ್ನ ಮಾರ್ಗದರ್ಶಕರು. ಅಂದರೆ ದರ್ಶನ್ ಅವರೇ ನೀವು ಈ ರೀತಿ ಮಾಡಿ. ನಿಮ್ಮದು ಇಲ್ಲಿ ತಪ್ಪಾಗಿತ್ತು ಅಂತಾ ತಿದ್ದುತ್ತಿರುತ್ತಾರೆ. ಅವರು ಯಾವಾಗಲೇ ನನಗೆ ಫೋನ್ ಮಾಡಿದರೂ ಮೊದಲು ನನ್ನ ಮೈಸನ್‌ಪಾಯಿಂಟ್‌ಗಳ ಬಗ್ಗೆ ಮಾತನಾಡುತ್ತಾರೆ. ಅವರು ಹೇಳಿದಾಗ ನಾನು ಯೋಚನೆ ಮಾಡುತ್ತೇನೆ. ಹೋ ನಾನು ಇದನ್ನು ಮಾಡಿದ್ದು ತಪ್ಪು ಇರಬಹುದು ಎಂದುಕೊಂಡು ತಿದ್ದಿಕೊಳ್ಳುತ್ತೇನೆ' ಎಂದಿದ್ದರು.

'ಅವರ ಮಾತನ್ನು ನಾನು ಕೇಳುತ್ತೇನೆ ಯಾಕೆಂದರೆ ನಮ್ಮ ತಂದೆ ಇಲ್ಲ. ಹೇಳಿ ಕೊಡುವವರು ಯಾರೂ ಇಲ್ಲ. ತಪ್ಪು ತಿದ್ದಲು ಯಾರಿಲ್ಲ. ಹೀಗಾಗಿ ಅಭಿಮಾನಿಗಳು ನನ್ನ ಜೊತೆ ಇದ್ದಾರೆ. ಅವರು ಹೇಳುವುದರ ಬಗ್ಗೆ ಯೋಚಿಸುತ್ತೇನೆ. ಅಭಿಮಾನಿಗಳು ಒಬ್ಬ ನಟನಾಗಿ ನನ್ನನ್ನು ಪ್ರೀತಿಸಿ. ಅದನ್ನು ಬಿಟ್ಟು ಬೇರೆ ಯಾವುದಕ್ಕೂ ಹೋಗಬೇಡಿ. ನಮ್ಮನ್ನು ರಂಜಿಸುತ್ತಾನೆ. ಅಷ್ಟಕ್ಕೇ ಮಾತ್ರ ಇಟ್ಟುಕೊಳ್ಳಿ ನನ್ನ. ನನ್ನ ಬಗ್ಗೆ ಪೊಸೆಸಿವ್‍ನೆಸ್ ಬೇಡ ಎಂದು ಅನೇಕರಿಗೆ ಹೇಳುತ್ತೇನೆ' ಎಂದು ದರ್ಶನ್ ಹೇಳಿದ್ದರು.












Click it and Unblock the Notifications