ಗಾಯತ್ರಿನಗರ, ಸುಬ್ರಹ್ಮಣ್ಯನಗರಕ್ಕೆ ಶೀಘ್ರದಲ್ಲಿ ನೀರು ಪೂರೈಕೆ
ಬೆಂಗಳೂರು, ಏಪ್ರಿಲ್ 27: ಬೆಂಗಳೂರಿನ ಗಾಯತ್ರಿನಗರ ಮತ್ತು ಸುಬ್ರಹ್ಮಣ್ಯ ನಗರಗಳಲ್ಲಿ 16 ಕಿ.ಮೀ. ಉದ್ದದ ನೀರು ಪೂರೈಕೆ ಕೊಳವೆ ಮಾರ್ಗ ಮತ್ತು 23 ಕಿ.ಮೀ. ಉದ್ದದ ಒಳಚರಂಡಿ ಮಾರ್ಗದ ಕಾಮಗಾರಿಯನ್ನು ಸೆಪ್ಟೆಂಬರ್ ಒಳಗೆ ಮುಗಿಯಲಿದೆ ಎಂದು ಕ್ಷೇತ್ರದ ಶಾಸಕ, ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಬುಧವಾರ ಅವರು ವಿಕಾಸಸೌಧದಲ್ಲಿ ನಡೆಸಿ, ಮಾತನಾಡಿದರು. ಈ ಸಂದರ್ಭದಲ್ಲಿ ಅವರು, ಈ ಕಾಮಗಾರಿಗಳನ್ನು ನಡೆಸುವಾಗ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ಎರಡೂ ಬಡಾವಣೆಗಳಲ್ಲಿ ಒಳಚರಂಡಿ ಮತ್ತು ನೀರು ಪೂರೈಕೆ ಕೊಳವೆಯನ್ನು ಸಂಪೂರ್ಣವಾಗಿ ಬದಲಿಸಲಾಗುವುದು ಎಂದು ಅವರು ತಿಳಿಸಿದರು.

ಈ ಪ್ರದೇಶಗಳಲ್ಲಿ ಒಳಚರಂಡಿ ಮತ್ತು ನೀರು ಕೊಳವೆಗಳು ತುಂಬಾ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿವೆ. ಹೊಸ ಕಾಮಗಾರಿಯಿಂದ ಮುಂದಿನ 30 ವರ್ಷಗಳ ಕಾಲ ಏನೂ ಯೋಚನೆ ಇರುವುದಿಲ್ಲ. ಮಲ್ಲೇಶ್ವರಂ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕೆಂಬ ಗುರಿಯೊಂದಿಗೆ ಹಂತಹಂತವಾಗಿ ಎಲ್ಲ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ. ಮೇಲ್ಕಂಡ ಕಾಮಗಾರಿಗಳ ಪೈಕಿ ಕೆಲವೆಡೆಗಳಲ್ಲಿ ಗುರುವಾರದಿಂದಲೇ ಚಟುವಟಿಕೆಗಳು ಆರಂಭವಾಗಲಿವೆ ಎಂದು ಅವರು ಹೇಳಿದ್ದಾರೆ.
ಸಭೆಯಲ್ಲಿ ಬಿಡಬ್ಲ್ಯುಎಸ್ಎಸ್ಬಿ ಮುಖ್ಯ ಎಂಜಿನಿಯರ್ ದೇವರಾಜು, ಎಕ್ಸಿಕ್ಯುಟೀವ್ ಎಂಜಿನಿಯರ್ ಹರಿನಾಥ್, ಸಹಾಯಕ ಎಕ್ಸಿಕ್ಯುಟೀವ್ ಎಂಜಿನಿಯರ್ ಹರೀಶ ಇದ್ದರು.












Click it and Unblock the Notifications