ಬೆಂಗಳೂರು ಸುತ್ತಲಿನ ಹಳ್ಳಿಗಳಲ್ಲಿ ನೀರಿನ ಕ್ರಾಂತಿ
"ನಮ್ಮ ಅಪಾರ್ಟ್‌ಮೆಂಟಲ್ಲಿ ಎರಡು ಬೋರ್ವೆಲ್ ಇವೆ, ಮೂರು ದಿನಕ್ಕೊಮ್ಮೆ ಕಾವೇರಿ ವಾಟರ್ ಬರತ್ತೆ. ಮಳೆಗಾಲನಾದ್ರೂ ಬರಲಿ, ಬೇಸಿಗೆನಾದ್ರೂ ಬರಲಿ, ಚಳಿಗಾಲವಾದರೂ ಇರಲಿ ನಮಗಂತೂ ತೊಂದ್ರೆ ಇಲ್ಲ. ಇಪ್ಪತ್ನಾಕು ತಾಸೂ ನೀರಿರತ್ತೆ" ಅಂತ ಬೀಗುತ್ತ ಮಾತಾಡುತ್ತಿರುವವರನ್ನು ನೀವು ಕೇಳಿರಬಹುದು. ಅವರಿಗೆ ವರ್ತಮಾನದಲ್ಲಷ್ಟೇ ನಂಬಿಕೆ, ಭವಿಷ್ಯದ ಮೇಲಿಲ್ಲ, ಅದರ ಬಗ್ಗೆ ಚಿಂತೆಯೂ ಇಲ್ಲ.
ಕಾಂಕ್ರೀಟ್ ಕಾಡಿನಲ್ಲಿ ನಾಯಿ ಕೊಡೆಗಳಂತೆ ಏಳುತ್ತಿರುವ ಅಪಾರ್ಮೆಂಟುಗಳು, ಮಳೆಗಾಲದಲ್ಲೇ ಒಣಗುಡುತ್ತಿರುವ ಕೆರೆಗಳು, ಮಳೆನೀರು ಕೊಯ್ಲು ಇರದ ಮನೆಗಳು, ಕಣ್ಮರೆಯಾಗುತ್ತಿರುವ ಗಿಡಮರಗಳು, ಭೂಮಿಯನ್ನು ಕಂಡಲ್ಲಿ ಬಗೆಯುತ್ತಿರುವ ಬೋರ್ವೆಲ್ಲುಗಳು, ಕಾಣೆಯಾಗುತ್ತಿರುವ ಅಂತರ್ಜಲ, ಬತ್ತಿಹೋಗಿರುವ ತಿಪ್ಪಗೊಂಡನಹಳ್ಳಿ ಜಲಾಶಯ... ಇನ್ನು ಮಳೆ ಕೈಕೊಟ್ಟು ಕಾವೇರಿ ಬರಿದಾದರಂತೂ ಗೋವಿಂದಾ ಗೋವಿಂದಾ!
ಬೆಂಗಳೂರಿನ ಹಲವಾರು ಜನರಿಗಾಗಲಿ, ಬಿಸ್ಲೇರಿ ಕುಡಿಯುವ ರಾಜಕಾರಣಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಮುಂದೆ ಬೆಂಗಳೂರು ಅನುಭವಿಸಲಿರುವ ನೀರಿನ ಬವಣೆಯ ಕಾಳಜಿ ಇದೆಯಾ? ಸರಕಾರ ಕಳಿಸುವ ನೀರಿನ ಟ್ಯಾಂಕರ್ ಬಂದ ಕೂಡಲೆ ಗುದ್ದಾಡಿ ಬಿಂದಿಗೆಗಳನ್ನು ಹಿಡಿಯುವ ಜನರಿಗೆ ಮಾತ್ರ ಇದರ ಅರಿವಿರುತ್ತದೆ. ಅಲ್ಲಲ್ಲಿ ಹಾಳುಬಿದ್ದಿರುವ ಕೆರೆಗಳಿಗೆ ಮರುಜೀವ ಕೊಡುವ, ಮರಗಳನ್ನು ನೆಡುವ ಕಾರ್ಯಗಳು ನಡೆಯುತ್ತಿವೆಯಾದರೂ ಅದರಿಂದ ಆಗುವ ಲಾಭಗಳು ಅಷ್ಟಕಷ್ಟೆ.

ಹೀಗೆ ಬೆಂಗಳೂರು ಕೈಕಟ್ಟಿ ಕುಳಿತಿರುವಾಗ, ಬೆಂಗಳೂರಿನ ಸುತ್ತಲಿನ ಹಳ್ಳಿಗಳಲ್ಲಿ ಸದ್ದಿಲ್ಲದೆ ನೀರಿನ ಕ್ರಾಂತಿ ನಡೆಯುತ್ತಿದೆ. ಜೀವಸೆಲೆ ನೀರಿನ ಬೆಲೆ ಏನು ಎಂಬುದು ಪಟ್ಟಣದವರಿಗಿಂತ ಹಳ್ಳಿಗರು ಬೇಗನೆ ಅರ್ಥಮಾಡಿಕೊಂಡಿದ್ದಾರೆ. ಅವರ ಸಹಕಾರದಿಂದ ಅಲ್ಲಿನ ಅಂತರ್ಜಲ ಪುಟಿದೇಳುತ್ತಿದೆ, ಕಲ್ಯಾಣಿಗಳು ನಳನಳಿಸುತ್ತಿವೆ, ಕೆರೆಗಳು ಉಡಿ ತುಂಬಿಸಿಕೊಳ್ಳುತ್ತಿವೆ, ಕೃತಕವಾಗಿ ನಿರ್ಮಿಸಲಾಗಿರುವ ಬಾವಿಗಳು ಬಾಯಾರಿದ ಭೂಮಿಯನ್ನು ತಣಿಸುತ್ತಿವೆ.
ಇದು ಸಾಧ್ಯವಾಗಿದ್ದು ಆರ್ಟ್ ಆಫ್ ಲಿವಿಂಗ್ ಆರಂಭಿಸಿರುವ 'ಕುಮುದ್ವತಿ ನೀರು ಪುನರುಜ್ಜೀವನ' ಯೋಜನೆಯಿಂದಾಗಿ. ಮೈನ್ ಮತ್ತು ಜಿಯಾಲಜಿ ಇಲಾಖೆಯ ಮಾಜಿ ನಿರ್ದೇಶಕ ಡಾ. ಲಿಂಗರಾಜು ಅವರ ನೇತೃತ್ವದಲ್ಲಿ ಕಟ್ಟಿರುವ ಸ್ವಯಂಸೇವಕರ ತಂಡ ನೀರಿನ ಕ್ರಾಂತಿಗೆ ನಾಂದಿ ಹಾಡಿದೆ. ಮಾ.20 'ವಿಶ್ವ ನೀರಿನ ದಿನ' ಈ ಯೋಜನೆಯ ಮತ್ತೊಬ್ಬ ರೂವಾರಿ 36 ವರ್ಷದ ಚಿದಾನಂದ ನಾಗರಾಜ್ ಅವರು ಅವರು ಕೈಗೆತ್ತಿಕೊಂಡಿರುವ ಯೋಜನೆಯ ಕುರಿತು ಒನ್ಇಂಡಿಯಾ ಜೊತೆ ಮಾತನಾಡಿದ್ದಾರೆ.












Click it and Unblock the Notifications