ಬೆಂಗಳೂರಲ್ಲಿ ನೀರು ಸಮಸ್ಯೆ: ಈ ತಪ್ಪು ಮಾಡಿದರೆ 5,000 ಸಾವಿರ ದಂಡ BWSSB ಎಚ್ಚರಿಕೆ!
ಬೆಂಗಳೂರಿನಲ್ಲಿ ಈ ಬಾರಿ ಬೇಸಿಗೆ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗುವ ಮುನ್ಸೂಚನೆಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೀರನ್ನು ಮಿತವಾಗಿ ಬಳಸುವುದು ಸೇರಿದಂತೆ ಹಲವು ಮಹತ್ವದ ಸೂಚನೆಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡ್ಲ್ಯೂಎಸ್‌ಎಸ್‌ಬಿ - BWSSB) ನಿರ್ದೇಶನ ನೀಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ನೀರು ಬಳಕೆಯ ವಿಚಾರದಲ್ಲಿ ಈ ತಪ್ಪು ಮಾಡಿದರೆ ಬರೋಬ್ಬರಿ 5,000 ಸಾವಿರ ರೂಪಾಯಿ ದಂಡ ವಿಧಿಸುವುದಾಗಿಯೂ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕಳೆದ ಬಾರಿ ರಾಜ್ಯದಲ್ಲಿ ಮಳೆ ಕೊರತೆ ಹಾಗೂ ತೀವ್ರ ಬಿಸಿಲಿನಿಂದಾಗಿ ಭಾರೀ ಸಮಸ್ಯೆ ಆಗಿತ್ತು. ಬೆಂಗಳೂರಿನಲ್ಲಿ ನೀರಿಗಾಗಿ ಜನ ಪರದಾಡಿದ್ದರು. ಬೆಂಗಳೂರಿನಲ್ಲಿ ಈ ಬಾರಿಯೂ ನೀರಿನ ಸಮಸ್ಯೆ ಎದುರಾಗುವ ಮುನ್ಸೂಚನೆ ಸಿಕ್ಕಿದ್ದು. ಪ್ರಾರಂಭದ ಹಂತದಲ್ಲೇ ಬಿಡ್ಲ್ಯೂಎಸ್‌ಎಸ್‌ಬಿ ಎಚ್ಚೆತ್ತುಕೊಂಡಿದೆ. ಬೆಂಗಳೂರು ಮಹಾನಗರದಲ್ಲಿ ಖಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆಯನ್ನು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯವಾಗಿರುತ್ತದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದೆ ಎಂದು ಜಲಮಂಡಳಿ ಹೇಳಿದೆ.

ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಲು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಅಗತ್ಯಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ ಎಂದು ಜಲಮಂಡಳಿ ಹೇಳಿದೆ.
ಜಲಮಂಡಳಿ ನೀಡಿರುವ ಪ್ರಮುಖ ಸೂಚನೆಗಳು
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗುವ ಆತಂಕವಿದ್ದು ಜಲಮಂಡಳಿಯು ಕೆಲವೊಂದು ಪ್ರಮುಖ ಸೂಚನೆಗಳನ್ನು ಕೊಟ್ಟಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಬರೋಬ್ಬರಿ 5,000 ಸಾವಿರ ರೂಪಾಯಿಯ ವರೆಗೆ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಕೆಲವು ನಿರ್ದಿಷ್ಟ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ.

* ವಾಹನಗಳ ಸ್ವಚ್ಛತೆಗೆ
* ಕೈದೋಟಕ್ಕೆ
* ಕಟ್ಟಡಗಳ ನಿರ್ಮಾಣಕ್ಕೆ
* ಮನರಂಜನೆಯ ಉದ್ದೇಶದಿಂದ ಬಳಸುವ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ
* ಸಿನಿಮಾ ಮಂದಿರ ಹಾಗೂ ಮಾಲ್‌ಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆ
* ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಕಾವೇರಿ ನೀರನ್ನು ಬಳಸದಂತೆ ಹಾಗೂ ಅನವಶ್ಯಕವಾಗಿ ನೀರು ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ.
ಭಾರೀ ದಂಡ ವಿಧಿಸುವ ಎಚ್ಚರಿಕೆ ಕೊಟ್ಟ ಜಲಮಂಡಳಿ
ಒಂದೊಮ್ಮೆ ಯಾರಾದರೂ ಬೆಂಗಳೂರಿನಲ್ಲಿ ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ. ಉಲ್ಲಂಘನೆ ಮಾಡುವವರ ವಿರುದ್ಧ ಜಲಮಂಡಳಿಯ ಕಾಯ್ದೆ 1964 ರ ಕಲಂ 109ರಂತೆ 5000 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮತ್ತೆ ಮಾಡಿದರೆ ದಂಡ ಮೊತ್ತ 5000 ಜೊತೆಗೆ ಹೆಚ್ಚುವರಿಯಾಗಿ 500 ರೂಪಾಯಿಯಂತೆ ಪ್ರತಿದಿನದಂತೆ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಸಾರ್ವಜನಿಕರು ಮೇಲ್ಕಂಡ ನಿಷೇಧಗಳನ್ನು ಯಾರಾದರು ಉಲ್ಲಂಘನೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ : 1916 ಗೆ ತಿಳಿಸಬಹುದಾಗಿದೆ ಎಂದೂ ಜಲಮಂಡಳಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications