Water Misuse In Bengaluru: ಕೇವಲ ಮೂರೇ ದಿನಕ್ಕೆ BWSSB ವಿಧಿಸಿದ ದಂಡ ಎಷ್ಟು ಲಕ್ಷ ಗೊತ್ತಾ?, ಮಾಹಿತಿ, ವಿವರ
ಬೆಂಗಳೂರು, ಮಾರ್ಚ್, 26: ಇದೀಗ ರಾಜ್ಯದ ಬಹುತೇಕ ಭಾಗಗಳಲ್ಲಿ ರಣಭೀಕರ ಬಿಸಿಲಿನ ವಾತಾವರಣ ನಿರ್ಮಾಣವಾಗುತ್ತಿದ್ದು, ಕೆರೆ, ಕಟ್ಟೆಗಳೆಲ್ಲ ಖಾಲಿಯಾಗಿ ನೀರಿನ ಅಭಾವ ಶುರುವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಂತೂ ಭಾರೀ ನೀರಿನ ಕೊರತೆ ಕಾಡತೊಡಗಿದೆ. ಇಂತಹ ಸಂದರ್ಭದಲ್ಲಿ ನೀರನ್ನು ದುರ್ಬಳಕೆ ಮಾಡಿಕೊಂಡ ನಗರದ 22 ಕುಟುಂಬಗಳಿಗೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ವಿಧಿಸಿದ ದಂಡ ಎಷ್ಟು ಲಕ್ಷ ಹಾಗೂ ಎಷ್ಟು ಕುಟುಂಬಗಳಿಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು ನಗರದಲ್ಲಿ ನೀರಿನ ಬಿಕ್ಕಟ್ಟು ಎದುರಿಸುತ್ತಿರುವಾಗ ಕಾರುಗಳನ್ನು ಸ್ವಚ್ಛಗೊಳಿಸುವಂತಹ ಅನಿವಾರ್ಯವಲ್ಲದ ಚಟುವಟಿಕೆಗಳಿಗೆ ಕುಡಿಯುವ ನೀರನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ 22 ಕುಟುಂಬಗಳಿಗೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೇವಲ ಮೂರೇ ದಿನಗಳಲ್ಲಿ 1.10 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಲ್ಲದೆ ಬೆಂಗಳೂರು ನಿವಾಸಿಗಳು ನೀರನ್ನು ಮಿತವಾಗಿ ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ನೀರಿನ ದುರ್ಬಳಕೆ ವಿಚಾರವಾಗಿ ನಗರದ ಆಗ್ನೇಯ ಭಾಗದಿಂದ ಹೆಚ್ಚೆಚ್ಚು ದೂರುಗಳು ದಾಖಲಾಗುತ್ತಿದ್ದು, ನೀರು ಮಿತವಾಗಿ ಬಳಸುವಂತೆ ಜನರಿಗೆ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪ್ರಶಾಂತ್ ಮನೋಹರ್ ತಿಳಿಸಿದ್ದಾರೆ.
ಇದುವರೆಗೆ ವಸೂಲಿ ಆಗಿರುವ ಒಟ್ಟು 1.10 ಲಕ್ಷ ರೂಪಾಯಿಗಳಲ್ಲಿ ನಗರದ ನೈಋತ್ಯ ಪ್ರದೇಶವೊಂದರಿಂದಲೇ 65 ಸಾವಿರ ರೂಪಾಯಿ ಸಂಗ್ರಹಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ, BWSSB ವಾಹನಗಳನ್ನು ಸ್ವಚ್ಛಗೊಳಿಸಲು, ತೋಟಗಾರಿಕೆ, ಕಟ್ಟಡ ನಿರ್ಮಾಣ, ಚಾಲನೆಯಲ್ಲಿರುವ ಕಾರಂಜಿಗಳು ಇತ್ಯಾದಿಗಳಿಗೆ ನೀರಿನ ಬಳಕೆಯನ್ನು ನಿಷೇಧಿಸಿದೆ.
"ನಗರದಲ್ಲಿ ದಿನೇ ದಿನೇ ತಾಪಮಾನದ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಕುಸಿದಿದೆ. ಇನ್ನು ನಗರದಲ್ಲಿ ನೀರು ಪೋಲಾಗುವುದನ್ನು ತಡೆಯುವ ಅಗತ್ಯವಿದೆ. ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು" ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಸೂಚನೆ ಹೊರಡಿಸಿದೆ.
ಇನ್ನು ಮಾರ್ಚ್ ಮಧ್ಯದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ದಿನಕ್ಕೆ 500 ಮಿಲಿಯನ್ ಲೀಟರ್ ನೀರಿನ ಕೊರತೆಯನ್ನು ಎದುರಿಸುತ್ತಿದೆ ಎಂದು ಹೇಳಿದರು. ಬೆಂಗಳೂರಿನ 14,000 ಬೋರ್‌ವೆಲ್‌ಗಳಲ್ಲಿ ಈಗಾಗಲೇ ನೀರು 6,900 ಬತ್ತಿಹೋಗಿದೆ ಎಂದು ಅವರು ಹೇಳಿದರು.
ಕೈಗಾರಿಕೆಗಳನ್ನು ಉತ್ತೇಜಿಸುವ ವಿನೂತನ ಕಾರ್ಯಕ್ರಮ: ಅಲ್ಲದೆ, ನಗರದಲ್ಲಿ ಹೋಳಿ ಆಚರಣೆ ವೇಳೆ ಪೂಲ್ ಡ್ಯಾನ್ಸ್ ಮತ್ತು ರೈನ್ ಡ್ಯಾನ್ಸ್‌ನಂತಹ ಚಟುವಟಿಕೆಗಳಿಗೆ ಕಾವೇರಿ ನೀರು ಮತ್ತು ಬೋರ್‌ವೆಲ್ ನೀರನ್ನು ಬಳಸುವುದನ್ನು ಜಲಮಂಡಳಿ ನಿಷೇಧಿಸಿತ್ತು. ನೀರಿನ ಬಳಕೆಯನ್ನು ಕಡಿಮೆ ಮಾಡಲು ಏರೇಟರ್‌ಗಳನ್ನು ಸ್ಥಾಪಿಸಲು ಹೋಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ಕೈಗಾರಿಕೆಗಳನ್ನು ಉತ್ತೇಜಿಸುವ ವಿನೂತನ ಕಾರ್ಯಕ್ರಮವನ್ನು ಇದು ಪರಿಚಯಿಸಿತು.
ಬೆಂಗಳೂರಿನ ನೀರಿನ ಅಭಾವದ ಸಮಸ್ಯೆಯನ್ನು ಪರಿಹರಿಸಲು, ಸರ್ಕಾರವು ಶುದ್ಧೀಕರಿಸಿದ ನೀರನ್ನು ಕಾರ್ಯಸಾಧ್ಯವಾದ ಪರಿಹಾರವಾಗಿ ನೋಡುತ್ತಿದೆ. ಈ ಶುದ್ಧೀಕರಿಸಿದ ನೀರನ್ನು ಅನಿವಾರ್ಯವಲ್ಲದ ಉದ್ದೇಶಗಳಿಗೆ ಬಳಸಬಹುದು. ಮುಖ್ಯವಾಗಿ ಕುಡಿಯಲು ಬಳಸುವ ಕಾವೇರಿ ನೀರನ್ನು ಅವಲಂಬಿಸುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ಬೆಂಗಳೂರು ನೀರು ಸರಬರಾಜು ಮಂಡಳಿಯು ನಗರದ ಬತ್ತಿ ಹೋಗಿರುವ ಕೆರೆಗಳಿಗೆ ಸಂಸ್ಕರಿಸಿದ ಕೊಳಚೆ ನೀರಿನಿಂದ ತುಂಬಿಸುವ ಮೂಲಕ ಕ್ರಮ ಕೈಗೊಳ್ಳುವ ಆಶಯ ಹೊಂದಿದೆ.












Click it and Unblock the Notifications