Voter Data Theft: ತನಿಖೆ ನೆಪದಲ್ಲಿ ತನಿಖಾಧಿಕಾರಿಗಳ ಮಾನಸಿಕ ಹಿಂಸೆ: ಬಿಬಿಎಂಪಿ ಆರ್‌ಒ ಆರೋಪ
ಬೆಂಗಳೂರು, ನವೆಂಬರ್ 28: ಮತದಾರರ ದತ್ತಾಂಶ ಕಳ್ಳತನ ಪ್ರಕರಣ ಸಂಬಂಧಿಸಿದಂತೆ ತನಿಖೆಯ ನೆಪದಲ್ಲಿ ತನಿಖಾಧಿಕಾರಿಗಳು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ವಿಚಾರಣೆ ಎದುರಿಸುತ್ತಿರುವ ಬಿಬಿಎಂಪಿ ಕಂದಾಯ ಇಲಾಖೆ ಅಧಿಕಾರಿಗಳು ಆರೋಪ ಮಾಡಿದ್ದಾರೆ.
ಬೆಂಗಳೂರಿ ಬಿಬಿಎಂಪಿ ವ್ಯಾಪ್ತಿಯ ಮತದಾರರ ಅಕ್ರಮ ಮಾಹಿತಿ ಸಂಗ್ರಹಿಸಿದ್ದ ಪ್ರಕರಣದಡಿ ಬಿಬಿಎಂಪಿ ಕಂದಾಯ ವಿಭಾಗದ ಹಲವು ಅಧಿಕಾರಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಮೂವರು ಅಧಿಕಾರಿಗಳು ಅಮಾನತುಗೊಂಡಿದ್ದಾರೆ.
ಮತಪಟ್ಟಿ ಅಕ್ರಮ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅಮಾನತಿಗೆ ಕಾಂಗ್ರೆಸ್ ಆಗ್ರಹ
ಪ್ರಕರಣ ತನಿಖೆ ಚುರುಕುಗೊಂಡಿದೆ. ವಿಚಾರಣೆಗೆ ಹಾಜರಾಗುವಂತೆ ವಿವಿಧ ತನಿಖಾ ತಂಡಗಳು ನೋಟಿಸ್ ನೀಡಿವೆ. ಪದೇ ಪದೆ ವಿಚಾರಣೆ ನಡೆಸುತ್ತಿರುವುದರಿಂದ ಮಾನಸಿಕ ಹಿಂಸೆ ಆಗುತ್ತಿದೆ. ಹೀಗೆಂದು ಕಂದಾಯ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಬಿಬಿಎಂಪಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ತನಿಖೆ ನೆಪದಲ್ಲಿ ಏಕಕಾಲದಲ್ಲಿ ವಿಚಾರಣೆ ಹಾಜರಾಗುವಂತೆ ನೋಟಿಸ್ ಬರುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಇದು ಮಾನವ ಹಕ್ಕು ಉಲ್ಲಂಘನೆಯಾಗದ ರೀತಿ ಒಂದೇ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಮತದಾರರ ಅಕ್ರಮ ಮಾಹಿತಿ ಪ್ರಕರಣದಲ್ಲಿ ಈಗಾಗಲೇ ಕೇಂದ್ರ ಚುನಾವಣೆ ಆಯೋಗ ಮಧ್ಯೆ ಪ್ರವೇಶ ಮಾಡಿದೆ. ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಲು ಸೂಚಿಸಿದೆ. ಐಎಎಸ್ ಕೆ.ಶ್ರೀನಿವಾಸ್ ತಲೆದಂಡವಾಗಿದೆ. ಶ್ರೀನಿವಾಸ್ ಜೊತೆ ಬಿಬಿಎಂಪಿ ಮತ್ತೊಬ್ಬ ಐಎಎಸ್ ಅಧಿಕಾರಿ ರಂಗಪ್ಪ ಅವರನ್ನು ಸಹ ಅಮಾನತು ಮಾಡಲಾಗಿದೆ. ಈ ಮೂಲಕ ಕೇಂದ್ರ ಚುನಾವಣಾ ಆಯೋಗ ಮಹತ್ವದ ಕ್ರಮ ಕೈಗೊಂಡಿದೆ
ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ದಿನಾಂಕವನ್ನು ಡಿಸೆಂಬರ್ 24 ರವರೆಗೆ ವಿಸ್ತರಿಸಿದೆ. ಭಾರತೀಯ ಕೇಂದ್ರ ಚುನಾವಣೆ ಆಯೋಗವು ಶಿವಾಜಿನಗರ, ಚಿಕ್ಕಪೇಟೆ, ಮಹದೇವಪುರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಈ ಸಮಯಾವಕಾಶ ವಿಸ್ತರಿಸಿದೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತದಾರರ ಜಾಗೃತಿಗಾಗಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಸಕ್ರಿಯ ಪಾಲುದಾರಿಕೆ ಬಗ್ಗೆ ಜಾಗೃತಿ ಮೂಡಿಸಲು ಯೋಜನೆ ರೂಪಿಸಿತ್ತು. ಈ ಜಾಗೃತಿ ಮೂಡಿಸಲು, ಪಟ್ಟಿ ಪರಿಷ್ಕರಣೆಗೆ ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ಸರ್ಕಾರೇತರ) ಅನುಮತಿ ನೀಡಿತ್ತು. ಅದರಂತೆ ಸಮೀಕ್ಷೆ ನಡೆಸಿದ ಸಂಸ್ಥೆ ಷರತ್ತು ಉಲ್ಲಂಘಿಸಿದ ಮಾಹಿತಿ ಸಂಗ್ರಹಿಸಿದೆ. ಜೊತೆಗೆ ಆ ಮಾಹಿತಿ ದುರ್ಬಳಕೆ ಆಗಿದೆ ಎಂಬ ಆರೋಪ ಕೇಳಿ ಬಂದಿವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.