Video Viral: ಕೋತಿ ಮಾಡಿದ ಅವಾಂತರಕ್ಕೆ ಶಿವಗಂಗೆ ಬೆಟ್ಟದ ತುದಿಗೆ ಇಳಿದ ವ್ಯಕ್ತಿ: ಮುಂದೇನಾಯ್ತು..?
Wahtch Viral Video: ಕೋತಿಗಳೇ ಹಾಗೇ ಅವುಗಳು ಕಾಟ ನೀಡಲು ಮುಂದಾದರೆ ಮನುಷ್ಯರಿಗೆ ಎಂತಹ ಅಪಾಯವನ್ನಾದರೂ ತಂದೊಡ್ಡಿ ಬಿಡುತ್ತವೆ. ಅದು ಮನೆ, ಮಠಗಳ ಜಾಗವಾದರೂ ಸರಿಯೇ, ಪ್ರವಾಸಿ ತಾಣ, ಬೆಟ್ಟ-ಗುಡ್ಡಗಳಲ್ಲಿ ಆದರೂ ಸರಿಯೇ..! ಇಲ್ಲೊಬ್ಬರ ಬ್ಯಾಗ್ ಕಸಿಕೊಂಡು ಓಡಿ ಹೋಗಿ ಚೆಲ್ಲಾಪಿಲ್ಲ ಮಾಡಿದ ಕೋತಿಯಿಂದ ಆ ಬ್ಯಾಗ್ ತರಲು ಪ್ರವಾಸಿಗರೊಬ್ಬರು ಹರಸಾಹಸ ಪಟ್ಟ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಸಲಿಗೆ ಈ ಘಟನೆ ನಡೆದಿರುವುದು ಬೆಂಗಳೂರಿನಿಂದ 55 ಕಿಲೋ ಮೀಟರ್ ದೂರವಿರುವ ಶಿವಗಂಗೆ ಬೆಟ್ಟದ (Shivagange Hill) ತುದಿಯಲ್ಲಿ. ಹೌದು, ಇಲ್ಲಿಗೆ ಎಂದಿನಂತೆ ಪ್ರವಾಸಿಗರು ಬಂದಿದ್ದಾರೆ. ಇದು ಕಳೆದ ವಾರಾಂತ್ಯದ ವಿಡಿಯೋ ಅಂತಲೂ ಹೇಳಲಾಗುತ್ತಿದೆ. ಇನ್ಸ್‌ಟಾಗ್ರಾಮ್ ನಲ್ಲಿ wandering_allwayzz ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ.

ಬೆಟ್ಟದ ತುದಿಯಲ್ಲಿ ನಿಂತ ಪ್ರವಾಸಿಗರೊಬ್ಬರ ಬ್ಯಾಗ್ ಕಸಿದುಕೊಂಡ ಮಂಗವು ಬೆಟ್ಟದ ತುದಿಯ ಇಳಿಜಾರಿನಲ್ಲಿ ಬ್ಯಾಗ್ ಅನ್ನು ಉಚ್ಚಿ ಅದರಲ್ಲಿನ ವಸ್ತುಗಳನ್ನು ಹೊರಗೆಡವಿದೆ. ಒಂದಷ್ಟು ಬೇಕಾದ ಅತ್ಯಗತ್ಯ ವಸ್ತುಗಳು ಅದರಲ್ಲಿದ್ದವು ಎನ್ನಲಾಗಿದೆ. ಹೀಗಾಗಿಯೇ ಜೀವ ಪಣಕ್ಕಿಟ್ಟು ಬ್ಯಾಗ್ ಮಾಲೀಕ ಅದನ್ನು ತರಲು ಬೆಟ್ಟದ ತುದಿಗೆ ಇಳಿಯುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಒಂದೊಮ್ಮೆ ಈ ದೃಶ್ಯ ನೋಡುವಾಗ ಎದೆ ಝಲ್ ಅನ್ನಿಸದೇ ಇರದು.
ಶಿವಗಂಗೆ ಬೆಟ್ಟದ ಒಂದು ಕಡೆ ದೇವಸ್ಥಾನ ಇದೆ. ಮತ್ತೊಂದು ತುದಿಯತ್ತ ತುದಿಗೆ ಜನರು ಹೋಗಿ ಅಪಾಯ ತಂದುಕೊಳ್ಳಬಾರದೆಂದು ಬ್ಯಾರಿಕೇಡ್ ರೀತಿಯಲ್ಲಿ ಅಡ್ಡಲಾಗಿ ಕಬ್ಬಿಣದ ಕಂಬಗಳನ್ನು ಅಳವಡಿಸಲಾಗಿದೆ. ಈ ಕೋತಿ ಪ್ರವಾಸಿಗರೊಬ್ಬರ ಬ್ಯಾಗ್ ಕಸಿದು ಆ ಕಬ್ಬಿಣದ ಕಂಬ ದಾಟಿ ಮುಂದೆ ಹೋಗಿದೆ.
ಇದನ್ನು ನೋಡಿದ ವ್ಯಕ್ತಿ ಇತರರ ಪ್ರವಾಸಿಗರ ಸಹಾಯದಿಂದ ಸರಪಳಿ ರೀತಿ ಕೈ ಕೈ ಹಿಡಿದು ನಿಧಾನವಾಗಿ ಬ್ಯಾಗ್‌ನತ್ತೆ ತೆರಳಿದ್ದಾರೆ. ಆಗಲೂ ಸುಮ್ಮನಿರದ ಕೋತಿ ಅವರೆಲ್ಲರನ್ನು ಹೆದರಿಸಲು, ಮೈ ಮೇಲೆ ಎರಗಲು ಮುಂದಾಗಿದೆ. ಕೆಲವರು ನಿಧಾನ ನಿಧಾನ ಎಂದು ಕೂಗಿದರೆ, ಇನ್ನೂ ಕೆಲವರು ಕೋತಿಗಳನ್ನು ಓಡಿಸುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ನೋಡ ನೋಡುತ್ತಿದ್ದಂತೆ ಬ್ಯಾಗ್ ಇರುವ ಸ್ಥಳಕ್ಕೆ ತೆರಳಿದ ವ್ಯಕ್ತಿ ಒಂದೊಂದೇ ವಸ್ತುಗಳನ್ನು ಬ್ಯಾಗ್ ಒಳಕ್ಕೆ ಹಾಕಿ, ಅಲ್ಲಿಂದ ನಿಧಾನವಾಗಿ ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ತೊಂದರೆ ಆಗಿಲ್ಲ. ಆದರೆ ಇಂತದ್ದೊಂದು ಘಟನೆ ನಡೆದಾಗ ಎಷ್ಟೆ ಜಾಗರೂಕರಾದರೂ ಸಹಿತ ಜೀವಕ್ಕೆ ತೊಂದರೆ ಆಗಿ ಬಿಡುತ್ತದೆ. ಹೀಗಾಗಿ ಕೋತಿಗಳಿರುವ ಪ್ರದೇಶದಲ್ಲಿ ಎಚ್ಚರಿಕೆ ವಹಿಸುವುದು ಅವಶ್ಯಕ.
ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?
'ನಿಜವಾಗಲೂ ಇದೇ ರೀತಿ ಖಂಡಿತ ಕೋತಿ ಮಾಡುತ್ತವೆ ನಿಮ್ಮ ವಸ್ತುಗಳನ್ನು ಜೋಪಾನವಾಗಿ ಬಿಗಿಯಾಗಿ ಹಿಡಿದುಕೊಂಡು ಹೋಗಿ. ಅನುಭವದ ಮಾತು' ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. 'ಕೋತಿ ಮಾಡಿದ ಅವಾಂತರ ಮಾತ್ರವಲ್ಲದೇ ವ್ಯಕ್ತಿಯ ಬೇಜವಾಬ್ದಾರಿ ಸಹ ಇದೆ ಎಂದು ಮತ್ತೊಬ್ಬರು ಹೇಳಿದ್ದಾರೆ.', 'ವಿಡಿಯೋ ಮಾಡೋದು ಬಿಟ್ಟು. ಹೋಗಿ ಅವರಿಗೆ ಸಹಾಯ ಮಾಡಿ' ಎಂದು ಇನ್ನೊಬ್ಬರು ತಿಳಿಸಿದ್ದಾರೆ.
'ಅದಕ್ಕೆ ಟೂರಿಸ್ಟ್ ಪ್ಲೇಸ್ ಗಳಲ್ಲಿ ಮೊದಲು ಬೋರ್ಡ್ ಹಾಕಿರ್ತೀರಲ್ಲ ನಿಮ್ಮ ಸಮಾನುಗಳಿಗೆ ನೀವೇ ಜವಾಬ್ದಾರರು''ಅಂತಲೂ ತಿಳಿ ಹೇಳುವಂತೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹುಷಾರು ಕಣಪ್ಪ, ನಂದು ಒಂದ್ ಬ್ಯಾಗ್ ಅಲ್ಲೇ ಇದೆ ತನ್ನಿ ಅಂತಲೂ ಕೆಲವರು ಕಾಲೆಳೆದಿದ್ದಾರೆ.












Click it and Unblock the Notifications