ಏರ್‌ಪೋರ್ಟ್ ಗೆ ಬಿಎಂಟಿಸಿ ಬಸ್‌ನಲ್ಲಿ ಹೋದರೆ ಶಾಂಪಿಂಗ್ ಡಿಸ್ಕೌಂಟ್
ಬೆಂಗಳೂರು, ಮಾರ್ಚ್ 06: ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಮೂಲಕ ತೆರಳುವ ಪ್ರಯಾಣಿಕರು ಇನ್ನುಮುಂದೆ ವಿಮಾನ ನಿಲ್ದಾಣಗಳ ಮಳಿಗೆಗಳಲ್ಲಿ ಡಿಸ್ಕೌಂಟ್ ಪಡೆಯಲಿದ್ದಾರೆ.
ಬಿಎಂಟಿಸಿಯ ವಾಯುವಜ್ರ ಫ್ಲೈ ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರಿವಾರ್ಡ್ ಪಾಯಿಂಟ್ ಗಳು ಲಭಿಸಲಿದ್ದು, ಅದರ ಆಧಾರದ ಮೇಲೆ ಏರ್ ಪೋರ್ಟ್ ನಲ್ಲಿರುವ ಫುಡ್, ಬಟ್ಟೆ ಮತ್ತಿತರ ಶಾಂಪಿಂಗ್ ಮಳಿಗೆಗಳಲ್ಲಿ ಡಿಸ್ಕೌಂಟ್ ಸಿಗಲಿದೆ. ಪ್ರಯಣಿಕರಿಗೆ ರಿವಾರ್ಡ್ ಅಂಕಗಳನ್ನು ನೀಡುವ ಅಪ್ಲಿಕೇಷನ್ ಸಿದ್ಧಪಡಿಸಲಾಗುತ್ತಿದೆ.
ಇದರಿಂದ ಸಮೂಹ ಸಾರಿಗೆಯನ್ನು ಉತ್ತೇಜಿಸಿದಂತಾಗುತ್ತದೆ. ಶೀಘ್ರದಲ್ಲಿ ಬಿಐಎಎಲ್ ಅಪ್ಲಿಕೇಷನ್ ಹೊರತರಲಿದೆ ಎಂದು ಬಿಐಎಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಎಂಟಿಸಿಯ 100 ಎಸಿ ವಾಯುವಜ್ರ ಬಸ್ ಗಳು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಿಂದ ವಿವಿಧ 15 ಮಾರ್ಗಗಳಿಗೆ ತೆರಳುತ್ತದೆ.

ಬಿಐಎಎಲ್ ಬಸ್ ಗಳಲ್ಲಿ ಆಟೋಮೇಟೆಡ್ ಚೆಕ್ ಇನ್ ಕಿಯೋಸ್ಕ್ ನ್ನು ಅಳವಡಿಸಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಏರ್ ಪೋರ್ಟ್ ಗೆ ಬರುವ ಕೆಐಎಎಸ್-8 ಸಂಖ್ಯೆಯ ಬಸ್ ಗೆ ಪೈಲಟ್ ಯೋಜನೆಯಡಿ ಪ್ರಾಯೋಗಿಕವಾಗಿ ಕಿಯಾಸ್ಕ್ ಅಳವಡಿಸಲಾಗಿದೆ.
ಪ್ರಯಾಣಿಕರ ಸ್ಪಂದನೆ ನೋಡಿಕೊಂಡು ವಿವಿಧ ವಜ್ರ ಬಸ್ ಗಳಿಗೂ ವಿಸ್ತರಿಸಲಾಗುತ್ತದೆ. ಎಸಿ ಬಸ್ ಗಳಿಗಿಂತಲೂ ಕಡಿಮೆ ದರದಲ್ಲಿ ಓಲಾ, ಊಬರ್ ಕ್ಯಾಬ್ ಗಳು ಲಭ್ಯವಾಗುತ್ತಿದ್ದು, ಪ್ರಯಾಣಿಕರು ಅತಿ ಹೆಚ್ಚು ಸಮೂಹ ಸಾರಿಗೆ ಬಳಸುವಂತೆ ಮಾಡಲು ಈ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.
ವಾಯುವಜ್ರ ಬಸ್ ಗಳಲ್ಲಿ ಮೂರಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಟಿಕೇಟ್ ತೆಗೆದುಕೊಂಡರೆ ರಿಯಾಯಿತಿ ನೀಡಲಾಗುತ್ತಿದೆ. ಮೇಖ್ರಿ ವೃತ್ತ, ಹೆಬ್ಬಾಳ, ಎಸ್ಟೀಂ ಮಾಲ್, ಕೋಗಿಲು ಕ್ರಾಸ್, ಹುಣಸಮಾರನಹಳ್ಳಿ ಆ ಮಾರ್ಗದಲ್ಲಿ ಈಗಾಘಲೇ ದರ ಕಡಿಮೆ ಮಾಡಲಾಗಿದೆ.












Click it and Unblock the Notifications