ಕಾಸರಗೋಡು ಸರ್ಕಾರಿ ಶಾಲೆ ರಕ್ಷಿಸಿ: ಸರ್ಕಾರಕ್ಕೆ ವಾಟಾಳ್ ಒತ್ತಡ
ಬೆಂಗಳೂರು, ಅಕ್ಟೋಬರ್ 6: ಕಾಸರಗೋಡಿನಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಲು ಸರ್ಕಾರ ಮುಂದಾಗಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ಸರ್ಕಾರಕ್ಕೆ ಮನವಿ ಮಾಡಿದರು.
ವಿಧಾನ ಸೌಧದಲ್ಲಿ ಶನಿವಾರ ಉಪ ಮುಖ್ಯಮಂತ್ರಿ ಭೇಟಿ ಮಾಡಿದ ವಾಟಾಳ್ ನಾಗರಾಜ್ ಮತ್ತು ಸಾ.ರಾ.ಗೋವಿಂದು, ಕಾಸರಗೋಡಿನಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಕನ್ನಡ ತರಗತಿಗಳಿಗೆ ಮಲೆಯಾಳಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಭಾಷಾ ಹೇರಿಕೆ ಮಾಡಿದಂತಾಗುತ್ತದೆ ಎಂದು ಹೇಳಿದರು.
10ನೇ ತರಗತಿವರೆಗೆ ಗಡಿನಾಡಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಶೈಕ್ಷಣಿಕ ಸೀಟುಗಳನ್ನು ಪಡೆಯುವ ಅವಕಾಶ ಇದೆ. ಆದರೆ, ಅಲ್ಲಿನ ಮಲೆಯಾಳಿ ವಿದ್ಯಾರ್ಥಿಗಳು ಕನ್ನಡ ಬಲ್ಲವರೆಂದು ದಾಖಲಾತಿ ಪಡೆಯುತ್ತಿದ್ದಾರೆ. ಇದರಿಂದ ಅರ್ಹ ಕನ್ನಡ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣದ ಕೋರ್ಸ್ ಗಳ ಪ್ರವೇಶದಿಂದ ವಂಚಿತರಾಗಿದ್ದಾರೆ.

ಕಾಸರಗೋಡಿನ ಕನ್ನಡ ಶಾಲೆಗಳ ರಕ್ಷಣೆಗೆ ಮನವಿ ಮಾಡಲಾಗಿದೆ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಾಗಿತ್ತು. ಅಲ್ಲಿನ ಶಾಲೆಗಳ ರಕ್ಷಣೆ ಆಗಬೇಕು. ಮಲೆಯಾಳಂ ಭಾಷಾ ಹೇರಿಕೆ ಅಲ್ಲಿನ ಕನ್ನಡ ಶಾಲೆಗಳಿಗೆ ಕುತ್ತು ತಂದಿದೆ. ಕಾಸರಗೋಡಿನ ಕನ್ನಡ ಶಾಲೆಗಳ ರಕ್ಷಣೆಗೆ ನವೆಂಬರ್ 25 ರ ನಂತರ ಕಾಸರಗೋಡಿನಿಂದ ಬೆಂಗಳೂರಿಗೆ ಜಾಥಾ ನಡೆಸಲಿದ್ದೇವೆ ಎಂದು ತಿಳಿಸಿದರು.












Click it and Unblock the Notifications