ಬೆಂಗಳೂರು BEML: ವಂದೇ ಭಾರತ್ ಸ್ಲೀಪರ್ ರೈಲು ಸಾಧನಗಳ ತಯಾರಿಕೆಯಲ್ಲಿ ವಿಳಂಬ, ಕಾರಣವೇನು?
Vande Bharat Sleeper: ಭಾರತದ ಮುಂದಿನ ತಲೆಮಾರಿನ ರೈಲು ಎಂದೇ ಖ್ಯಾತಿ ಗಳಿಸಿರುವ ವಂದೇ ಭಾರತ್ ಸ್ಲೀಪರ್ ರೈಲುಗಳು ಈಗ ಬೆಂಗಳೂರಿನ Bharat Earth Movers Limited (BEML) ಕಾರ್ಖಾನೆಯಲ್ಲಿ ನಿರ್ಮಾಣವಾಗುತ್ತಿವೆ. ಭಾರತೀಯ ರೈಲ್ವೆಯು ಹೊಸ ರೈಲುಗಳನ್ನು ಪರಿಚಯಿಸುತ್ತಿದೆ. ಅದರಲ್ಲಿ ಮುಖ್ಯವಾಗಿ ವಂದೇ ಭಾರತ್ ಎಕ್ಸ್ ಪ್ರೆಸ್‌ರೈಲು ಹಾಗೂ ವಂದೇ ಭಾರತ್ ಸ್ಲೀಪರ್ ರೈಲುಗಳು ಪ್ರಮುಖವಾಗಿವೆ. ಈ ರೈಲುಗಳ ಸಾಧನಗಳನ್ನು ಬೆಂಗಳೂರಿನಲ್ಲಿ ತಯಾರಿಸಲಾಗುತ್ತಿದೆ. ಆದರೆ ಈ ರೈಲುಗಳ ವಿತರಣೆ ವೇಳಾಪಟ್ಟಿ ಬದಲಾಗಿದೆ. ಮೊದಲು 10 ಸ್ಲೀಪರ್ ರೈಲುಗಳು 2026ರ ಮಾರ್ಚ್ 31ರೊಳಗೆ ಸಿದ್ಧವಾಗಬೇಕಿತ್ತು. ಈಗ ಹೊಸ ಗಡುವು ಆಗಸ್ಟ್ 2026ಕ್ಕೆ ಮುಂದೂಡಲಾಗಿದೆ. ಕಾರಣ, ರೈಲುಗಳು ಕಠಿಣ ಪರೀಕ್ಷೆ ಮತ್ತು ಸುರಕ್ಷತಾ ಪರಿಶೀಲನೆ ಹಂತದಲ್ಲಿವೆ ಎಂದು ಹೇಳಲಾಗಿದೆ.
ಎರಡನೇ ರೈಲು ಪರಿಶೀಲನೆ ಹಂತದಲ್ಲಿದೆ ಎಂದು ಹೇಳಲಾಗಿದೆ. ಇನ್ನು ಎರಡನೇ ವಂದೇ ಭಾರತ್ ಸ್ಲೀಪರ್ ರೈಲು ಈಗ ಬೆಂಗಳೂರಿನ Sir.M Visvesvaraya Terminal (SMVT) ನಲ್ಲಿ ಅಂತಿಮ ಪರಿಶೀಲನೆಗೊಳಗಾಗಿದೆ.

ಪ್ರಯಾಣಿಕರ ಸೇವೆಗೆ ಮುಕ್ತವಾಗುವ ಮೊದಲು ರೈಲುಗಳನ್ನು ಕೆಲವೊಂದು ಪ್ರಮುಖ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಅದರಲ್ಲಿ ಮುಖ್ಯವಾಗಿ ಫೀಲ್ಡ್ ಟ್ರಯಲ್ ಮತ್ತು ಬ್ರೇಕಿಂಗ್ ಪರೀಕ್ಷೆ, 160 ಕಿ.ಮೀ ವೇಗದ ಅರ್ಧ-ಹೈ ಸ್ಪೀಡ್ ಪರೀಕ್ಷೆ, ಒಳಾಂಗಣ ವ್ಯವಸ್ಥೆಗಳ ಸಂಪೂರ್ಣ ಪರಿಶೀಲನೆ ಇದೆ. ಮುಂದುವರಿದು ಮೂರನೇ ಮತ್ತು ನಾಲ್ಕನೇ ರೈಲುಗಳು 2026ರ ಮಾರ್ಚ್ ಅಂತ್ಯದೊಳಗೆ ಸಿದ್ಧವಾಗುವ ಸಾಧ್ಯತೆ ಇದೆ. ನಂತರ ಪ್ರತಿ ತಿಂಗಳು ಒಂದು ರೈಲು ನಿರ್ಮಾಣ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಲೀಪರ್ ರೈಲು ವಿಶೇಷತೆ ಏನು: ಇನ್ನು ಈಗ ಇರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗಿಂತಲೂ ಹೊಸ ರೈಲುಗಳು ಭಿನ್ನವಾಗಿವೆ. ಅಲ್ಲದೆ ಸಾಕಷ್ಟು ಸೌಲಭ್ಯಗಳನ್ನು ಒಳಗೊಂಡಿದೆ. ಈಗ ಓಡುತ್ತಿರುವ ಚೇರ್ ಕಾರ್ ರೈಲುಗಳಿಗೆ ಹೋಲಿಸಿದರೆ, ಸ್ಲೀಪರ್ ಮಾದರಿ ದೀರ್ಘ ದೂರದ ರಾತ್ರಿ ಪ್ರಯಾಣಕ್ಕೆ ಅತ್ಯಂತ ಅನುಕೂಲಕರವಾಗಿದೆ. ಇದರಲ್ಲಿ 16 ಬೋಗಿಗಳ ವಿನ್ಯಾಸವಿದ್ದು, ಸುಧಾರಿತ ಮಲಗುವ ಹಾಸಿಗೆ ವ್ಯವಸ್ಥೆ ಇರಲಿದೆ. ಅಲ್ಲದೆ ಹೆಚ್ಚು ಸುರಕ್ಷತಾ ಸೌಲಭ್ಯಗಳು ಮತ್ತು ಉತ್ತಮ ಬೆಳಕಿನ ವ್ಯವಸ್ಥೆ, ಹೆಚ್ಚು ವೇಗದಲ್ಲೂ ಉತ್ತಮ ಪ್ರಯಾಣ ಅನುಭವ ನೀಡುವ ಸಸ್ಪೆನ್ಷನ್ ವ್ಯವಸ್ಥೆ ಇರಲಿದೆ. ಮುಖ್ಯವಾಗಿ ಇದನ್ನು ರಾತ್ರಿ ಪ್ರಯಾಣಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಕರ್ನಾಟಕಕ್ಕೆ ಹೇಗೆ ಇದರಿಂದ ಲಾಭ
ಇನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳ ಕಡೆ ರಾತ್ರಿ ಪ್ರಯಾಣಕ್ಕೆ ಉತ್ತಮ ರೈಲುಗಳನ್ನು ಪರಿಚಯಿಸಬೇಕು ಎನ್ನುವ ಬೇಡಿಕೆ ಇದೆ. ಈ ಹೊಸ ಸ್ಲೀಪರ್ ರೈಲುಗಳು ಪ್ರಯಾಣಿಕರಿಗೆ ವೇಗವಾದ ಮತ್ತು ಆರಾಮದಾಯಕ ಸೇವೆ ನೀಡಲಿವೆ. ಇನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ದೇಶದಾದ್ಯಂತ ಒಟ್ಟು 260 ಹೆಚ್ಚುವರಿ ಸ್ಲೀಪರ್ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಚೆನ್ನೈನ Integral Coach Factory (ICF) ನಲ್ಲಿ 24 ಬೋಗಿಗಳ 50 ದೊಡ್ಡ ಸ್ಲೀಪರ್ ರೈಲುಗಳನ್ನು ಸಹ ತಯಾರಿಸಲಾಗುತ್ತಿದೆ.












Click it and Unblock the Notifications