ಪ್ರೇಮಿಗಳ ದಿನ ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್, ನಕ್ಕು ನಗಿಸುತ್ತವೆ ಈ ಪೋಸ್ಟರ್‌ಗಳು
'ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ'
ಬೆಂಗಳೂರು, ಫೆಬ್ರವರಿ. 14: ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪದ ಮೇಲೆ ಪೇ ಸಿಎಂ ಅಭಿಯಾನ ಮಾಡಿದ್ದ ಕಾಂಗ್ರೆಸ್ ಪ್ರೇಮಿಗಳ ದಿನದಂದು ಇನ್ನೊಂದು ವಿಭಿನ್ನ ಅಭಿಯಾನದ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದೆ.
ಪ್ರೇಮಿಗಳ ದಿನದಂದು ವಿಶೇಷವಾಗಿ 40% ಲವ್ ಅಭಿಯಾನವನ್ನು ಕರ್ನಾಟಕ ಕಾಂಗ್ರೆಸ್ ಆರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸೇರಿದಂತೆ ಅನೇಕ ಬಿಜೆಪಿ ನಾಯಕರನ್ನು ಭಿನ್ನವಾಗಿ ಚಿತ್ರಿಸಿ ಪೋಸ್ಟರ್ ಹಂಚಿಕೊಂಡಿದೆ.
|
ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ
ಬಸವರಾಜ ಬೊಮ್ಮಾಯಿ ಅವರ ಚಿತ್ರವನ್ನು ಹಂಚಿಕೊಂಡಿರುವ ಕಾಂಗ್ರೆಸ್ "ಬಿಜೆಪಿಗರು ಶುದ್ಧ 40% ಪ್ರೇಮಿಗಳು, 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು!! ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ.....!!" ಎಂದಿದೆ.
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರ ಚಿತ್ರದ ಜೊತೆಗೆ ಹಚುವಿನ ಚಿತ್ವನ್ನು ಹಂಚಿಕೊಂಡು, "ಬಿಜೆಪಿಗರದ್ದು ಗೋ ಪ್ರೀತಿಯಲ್ಲ,
Go ಪ್ರೀತಿ!! ಬಿಜೆಪಿಗರು ಗೋವಿನ ಎದುರು ಫ್ಲರ್ಟ್ ಮಾಡುತ್ತಾರೆ ಹೊರತು ಪ್ರೀತಿಯಲ್ಲ!" ಎಂದಿದೆ.

ಭಗ್ನಪ್ರೇಮಿಗೆ ಕೌನ್ಸ್‌ಲಿಂಗ್ ಅಗತ್ಯವಿದೆ!
ಇನ್ನು, ಸಂಸದ ತೇಜಸ್ವಿ ಸೂರ್ಯ ಅವರನ್ನು ಭಗ್ನ ಪ್ರೇಮಿ ಎಂದು ವ್ಯಂಗ್ಯವಾಡಿದೆ.
"ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು,
◆ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು.
◆ಸಿಎಂ ಮನೆಗೆ ಕಲ್ಲು ಹೊಡೆಯುವುದು.
◆ರೈತರಿಗೆ ಅವಮಾನಿಸುವುದು. ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್‌ಲಿಂಗ್ ಅಗತ್ಯವಿದೆ!" ಎಂದು ಲೇವಡಿ ಮಾಡಿದೆ.
ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕುಡ ಭಗ್ನ ಪ್ರೇಮಿ ಸಾಲಿಗೆ ಸೇರಿಸಿದೆ. "ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ! ಮಂಡ್ಯದಲ್ಲಿ ತಿರಸ್ಕಾರದ ಪ್ರೇಮವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನಪ್ರೇಮಿಗೆ ನಮ್ಮ ಸಾಂತ್ವಾನಗಳು!" ಎಂದಿದೆ.

ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ!'
ಈಶ್ವರಪ್ಪ ಮತ್ತು ರೇಣುಕಾಚಾರ್ಯರನ್ನು ಬಿಡದ ಕಾಂಗ್ರೆಸ್, "ಪ್ರೀತಿ ಮಧುರ, ತ್ಯಾಗ ಅಮರ" ಎಂದು ಇಬ್ಬರನ್ನು ಕೆಣಕಿದೆ.
"ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ..ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ!!" ಎಂದಿದೆ.
"ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ!. ಸಚಿವ ಹುದ್ದೆ ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ!" ಎಂದು ರೇಣುಕಾಚಾರ್ಯಯನ್ನು ವ್ಯಂಗ್ಯವಾಡಿದೆ.

ದ್ವೇಷವನ್ನೇ ಪ್ರೇಮಿಸುವ ನಳಿನ್ ಕುಮಾರ್ ಕಟೀಲ್!
ಡಾ. ಅಶ್ವತ್ಥ್ ನಾರಾಯಣ್ ಅವರು ಪಿಎಸ್‌ಐ ಹಗರಣದಲ್ಲಿ ಪ್ರೀತಿಗೆ ಬಿದ್ದಿದ್ದಾರೆ ಎಂದಿರುವ ಕಾಂಗ್ರೆಸ್, "ಈ ಸ್ಪೆಷಲ್ ಡಾಕ್ಟರ್‌ಗೆ ಹೃದಯ ಬಡಿತವೂ ತಿಳಿಯುತ್ತದೆ. ಲೂಟಿ ಹೊಡೆತವೂ ತಿಳಿದಿದೆ!. ಈ ಡಾಕ್ಟರ್‌ಗೂ ಲವ್ವಾಗಿದೆ - PSI ಹುದ್ದೆಗಳ ಮೇಲೆ!" ಎಂದು ಹೇಳಿದೆ.
ಮುಂದುವರಿದು, "ಪ್ರೇಮವಿರುವ ಕಡೆ ದ್ವೇಷಕ್ಕೆ ಜಾಗವಿಲ್ಲ..ಆದರೆ ದ್ವೇಷವನ್ನೇ ಪ್ರೇಮಿಸಿದರೆ....!? ದ್ವೇಷವನ್ನೇ ಪ್ರೀತಿಸಿ, ದ್ವೇಷವನ್ನೇ ಧ್ಯಾನಿಸಿ, ದ್ವೇಷದೊಂದಿಗೆ ರೊಮ್ಯಾನ್ಸ್ ಮಾಡುವ ವಿಶಿಷ್ಠ ಪ್ರೇಮಿ ಇವರು!!" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಿತ್ರವನ್ನು ಹಂಚಿಕೊಂಡಿದೆ.
ಸಿಟಿ ರವಿ ಅವರ ಚಿತ್ರವನ್ನು ಹಂಚಿಕೊಂಡು, "ಪ್ರೇಮದಲ್ಲಿ ಮುಳುಗಿದವರು ಸದಾ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ ಮತ್ತು ಆ ಭ್ರಮೆಗಳನ್ನೇ ವಾಸ್ತವ ಎಂದು ತಿಳಿದುಕೊಂಡಿರುತ್ತಾರೆ. ಇದು ಪ್ರೇಮದ ಮೊದಲ ಹಂತ!" ಎಂದಿದ್ದು, ಸಿಟಿ ರವಿ ಟಿಪ್ಪುವನ್ನು ಕೊಂದವರು ಉರಿಗೌಡ, ನಂಜೇಗೌಡ ಎಂದು ತಮಿಳು ವೀರರ ಬಗ್ಗೆ ಸುಳ್ಳು ಸುದ್ದಿ ಹಂಚಿಕೊಂಡಿದ್ದನ್ನು ಲೇವಡಿ ಮಾಡಿದೆ.
ಒಟ್ಟಾರೆ, ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ 40% ಲವ್ ಕ್ಯಾಂಪೇನ್ ಪೋಸ್ಟರ್‌ಗಳು ನೋಡುಗರಲ್ಲಿ ನಗು ಉಕ್ಕಿಸುವಂತಿವೆ. ಈಅಭಿಯಾನಕ್ಕೆ ಬಿಜೆಪಿ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications