ಬೆಂಗಳೂರು- ತುಮಕೂರು ನಡುವೆ ಚತುಷ್ಪಥ ಮಾರ್ಗ: ಭರ್ಜರಿ ಗುಡ್‌ನ್ಯೂಸ್
ಬೆಂಗಳೂರು ಹಾಗೂ ತುಮಕೂರು ಭಾಗದ ಜನರಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರಿನ ನಂತರ ಎರಡನೇ ಹಂತದಲ್ಲಿ ಅಭಿವೃದ್ಧಿ ಆಗುತ್ತಿರುವ ಪ್ರಮುಖ ಪ್ರದೇಶ ಹಾಗೂ ಜಿಲ್ಲೆಗಳ ಸಾಲಿನಲ್ಲಿ ತುಮಕೂರು ಜಿಲ್ಲೆಯೂ ಮುಂಚೂಣಿಯಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವೊಂದು ಮಹತ್ವದ ಅವಕಾಶಗಳಿಂದ ತುಮಕೂರು ಜಿಲ್ಲೆಯು ವಂಚಿತವಾಗಿತ್ತು. ಅದರಲ್ಲಿ ಮುಖ್ಯವಾಗಿ ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಪ್ರದೇಶ ಎಂದು ಬದಲಾಯಿಸಬೇಕು ಎನ್ನುವುದು ಹಾಗೂ ಬೆಂಗಳೂರು ಎರಡನೇ ವಿಮಾನ ನಿಲ್ದಾಣವನ್ನು ಇಲ್ಲಿ ನಿರ್ಮಾಣ ಮಾಡಬೇಕು ಎನ್ನುವುದು. ಇನ್ನು ಈ ಎರಡೂ ಅವಕಾಶಗಳೂ ಸಹ ತುಮಕೂರಿಗೆ ಸಿಕ್ಕಿರಲಿಲ್ಲ. ಇದೀಗ ಮಹತ್ವದ ಯೋಜನೆಯೊಂದು ಜಾರಿಯಾಗುತ್ತಿದ್ದು ಭೂಮಿ ಬೆಲೆ ಹೆಚ್ಚಳವಾಗುವ ಭರವಸೆ ಮೂಡಿದೆ.
ಹೌದು ಕೇಂದ್ರ ಸಚಿವ ವಿ. ಸೋಮಣ್ಣ ಅವರು, ಬೆಂಗಳೂರು- ತುಮಕೂರು ಚತುಷ್ಪಥ ರೈಲು ಮಾರ್ಗದ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟಿದ್ದಾರೆ. ಭವಿಷ್ಯದ ದೃಷ್ಟಿಯಿಂದ ತುಮಕೂರು-ಬೆಂಗಳೂರು ನಡುವೆ ಚತುಷ್ಪಥ ರೈಲು ಮಾರ್ಗ ನಿರ್ಮಾಣ ಯೋಜನೆ ಅವಶ್ಯವಿದ್ದು ಈ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಇದು ಬೆಂಗಳೂರು ಹಾಗೂ ತುಮಕೂರಿನ ನಡುವೆ ರಿಯಲ್ ಎಸ್ಟೇಟ್ ಬೂಸ್ಟ್ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ತುಮಕೂರಿನಿಂದ ಸಾವಿರಾರು ಜನ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾರೆ. ಕೆಲವರು ನಿತ್ಯ ಕೆಲಸ ಮುಗಿಸಿಕೊಂಡು ತಮ್ಮ ಊರುಗಳಿಗೆ ಹಿಂದಿರುಗುವುದು ಇದೆ. ಬೆಂಗಳೂರಿನ ಉಪ ನಗರ ಪ್ರದೇಶಗಳಲ್ಲಿ ರೈಲು ಸಂಚಾರ ಅಭಿವೃದ್ಧಿ ಮಾಡಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿದೆ. ಇದೀಗ ವಿ. ಸೋಮಣ್ಣ ಅವರ ಮೂಲಕ ಇದು ಈಡೇರುತ್ತಿದೆ. ಬೆಂಗಳೂರು ಹಾಗೂ ತುಮಕೂರು ಜಿಲ್ಲೆಗಳ ನಡುವೆ ಚತುಷ್ಪಥ ರೈಲು ಮಾರ್ಗ ನಿರ್ಮಾಣ ಯೋಜನೆಯ ಬಗ್ಗೆ ವಿ. ಸೋಮಣ್ಣ ಅವರು ಮಾತನಾಡಿದ್ದು ಶೀಘ್ರ ಜಾರಿಗೆ ಒತ್ತು ನೀಡುವುದಾಗಿಯೂ ಹೇಳಿದ್ದಾರೆ.
ಬೆಂಗಳೂರಿಗೆ ಪೂರಕವಾಗಿ ತುಮಕೂರು ಸಹ ಅಭಿವೃದ್ಧಿಯಾಗುತ್ತಿದೆ. ಸುತ್ತಮುತ್ತಲ ಪ್ರದೇಶ, ರೈಲು ಅವಲಂಬನೆ ಸಹ ಹೆಚ್ಚಾಗಲಿದ್ದು, ಹೆಚ್ಚುವರಿ ರೈಲುಗಳ ಸೇವೆ ಒದಗಿಸಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಮುಂದುವರಿದು ಇದರೊಂದಿಗೆ ದ್ವಿಪಥ ರೈಲು ಮಾರ್ಗವನ್ನು ಚತುಷ್ಪಥ ಮಾರ್ಗವನ್ನಾಗಿ ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದಾರೆ.
ನಾನು ಯಾರನ್ನೋ ಮೆಚ್ಚಿಸುವುದಕ್ಕಾಗಿ ಕೆಲಸ ಮಾಡುತ್ತಿಲ್ಲ. ಜನರಿಗೆ ಅನುಕೂಲ ಆಗಬೇಕು ಎನ್ನುವ ಕಾರಣಕ್ಕೆ ಕೆಲಸ ಮಾಡುತ್ತಿದ್ದೇನೆ. 50 ವರ್ಷದಿಂದ ನನೆಗುದಿಗೆ ಬಿದ್ದಿದ ರೈಲ್ವೆ ಯೋಜನೆಗಳಿಗೆ ಚಾಲನೆ ಕೊಡಲು ನಾನೇ ಬರಬೇಕಾಯಿತು. ಜಿಲ್ಲೆಯಲ್ಲಿ 27-28 ರೈಲ್ವೆಗೇಟ್ ತೆರವುಗೊಳಿಸಿ ಅಲ್ಲಿ ಮೇಲ್ವೇತುವೆ, ಕೆಳಸೇತುವೆ ನಿರ್ಮಾಣ ಕೆಲಸ ಆರಂಭವಾಗಿದೆ. 2 ವರ್ಷಗಳಲ್ಲಿ ಲೋಕಾರ್ಪಣಿಯಾಗಲಿವೆ. 18 ವರ್ಷಗಳಿಂದ ಬಾಕಿ ಉಳಿದಿದ್ದ ತುಮಕೂರು-ದಾವಣಗೆರೆ ರೈಲು ಮಾರ್ಗ ಯೋಜನೆ ಕಾಮಗಾರಿಗೆ ವೇಗ ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications