ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಅರೆಸ್ಟ್
Pralhad Joshi Brother Arrest: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರನನ್ನು ಬೆಂಗಳೂರು ಪೊಲೀಸರು ಶನಿವಾರ (ಅಕ್ಟೋಬರ್ 19) ಕೊಲ್ಲಾಪುರದಲ್ಲಿ ಬಂಧಿಸಿದ್ದಾರೆ. ಹಾಗಾದರೆ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ, ಹಣ ಪಡೆದು ವಂಚಿಸಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜೆಡಿ(ಎಸ್) ಮುಖಂಡರಿಂದ ಹಣ ಪಡೆದು ವಂಚಿಸಿರುವ ಆರೋಪದ ಮೇಲೆ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಅವರನ್ನು ಬೆಂಗಳೂರು ಪೊಲೀಸರು ಶನಿವಾರ ಕೊಲ್ಲಾಪುರದಲ್ಲಿ ಬಂಧಿಸಿದ್ದಾರೆ. ಇನ್ನೂ ಶುಕ್ರವಾರ (ಅಕ್ಟೋಬರ್ 18) ಮೂರು ದಶಕಗಳಿಗೂ ಹೆಚ್ಚು ಕಾಲ ತನ್ನ ಸಹೋದರ ಗೋಪಾಲ್ ಜೋಶಿಯಿಂದ ಬೇರ್ಪಟ್ಟಿದ್ದೇನೆ ಮತ್ತು ತನ್ನ ಸಹೋದರ ಮಾಡಿದ ಯಾವುದೇ ಹಣಕಾಸಿನ ವ್ಯವಹಾರದಲ್ಲಿ ನನ್ನ ಪಾತ್ರವಿಲ್ಲ ಎಂದು ಎಂದು ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯ ಲಕ್ಷ್ಮೀ ಜೋಶಿ ಸಹಿತ ಮೂವರ ವಿರುದ್ಧ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ ಸುನೀತಾ ಚವ್ಹಾಣ್ ಎಂಬುವರು ನೀಡಿದ್ದರು. ಇದರನ್ವಯ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು ಎಂದು ತಿಳಿದುಬಂದಿದೆ.
ನನ್ನ ಪತಿ ದೇವಾನಂದ್ ಫುಲ್‌ಸಿಂಗ್ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ನಂತರ 2023ರ ಚುನಾವಣೆಯಲ್ಲಿ ಸೋತಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಪತಿಗೆ ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋಪಾಲ್ ಜೋಶಿ ಅವರು 25,00,000 ರೂಪಾಯಿ ಹಾಗೂ 5 ಕೋಟಿ ರೂಪಾಯಿಗಳ ಚೆಕ್ ಅನ್ನು ಮುಂಗಡವಾಗಿ ಪಡೆದಿದ್ದರು.
ಅಥಣಿಯಲ್ಲಿ ಎಂಜಿನಿಯರ್ ಆಗಿದ್ದ ಶೇಖರ್ ನಾಯಕ್ ಎಂಬುವರ ಮೂಲಕ ಗೋಪಾಲ್ ಜೋಶಿ ಅವರ ಪರಿಚಯವಾಗಿತ್ತು. ಗೋಪಾಲ್ ಜೋಶಿ ಅವರು ಸೂಚಿಸಿದಂತೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ಅವರ ಸಹೋದರಿ ವಿಜಯಲಕ್ಷ್ಮಿ ಅವರ ಮನೆಗೆ ಹಣ ಹಾಗೂ ಚೆಕ್ ತೆಗೆದುಕೊಂಡು ಹೋಗಿ ಕೊಟ್ಟಿದ್ದೆವು.
ಆಗ ಸಹೋದರಿಯ ಮನೆಯಲ್ಲೇ ಇದ್ದ ಗೋಪಾಲ್ ಜೋಶಿ, ಕೇಂದ್ರ ಸಚಿವ ಅಮಿತ್ ಶಾ ಅವರ ಆಪ್ತ ಸಹಾಯಕರಿಗೆ ಕರೆ ಮಾಡಿ ಮಾತನಾಡಿದಂತೆ ನಟಿಸಿದ್ದರು. ಅಲ್ಲದೆ, ತಮ್ಮ ಪತಿಗೆ ಬಿಜೆಪಿ ಟಿಕೆಟ್ ಖಚಿತವಾಗಿರುವುದಾಗಿ ಹೇಳಿ ಹಂತ-ಹಂತವಾಗಿ 2 ಕೋಟಿ ರೂಪಾಯಿ ಪಡೆದಿದ್ದರು.
ಪಕ್ಷದ ಟಿಕೆಟ್ ಸಿಗದ ಬಳಿಕ ಹಣ ವಾಪಸ್ ಕೇಳಿದಾಗ ಕಾರಣಗಳನ್ನು ಹೇಳಲು ಶುರು ಮಾಡಿದರು. 200 ಕೋಟಿ ರೂಪಾಯಿಗಳ ಯೋಜನೆಯ ಬಿಲ್ ಬಾಕಿಯಿದ್ದು, ಹಣವನ್ನು ಒಟ್ಟಿಗೆ ಹಿಂದಿರುಗಿಸುವುದಾಗಿ ಹೇಳಿದರು.
ಆಗಸ್ಟ್ 1ರಂದು ವಿಜಯಲಕ್ಷ್ಮಿ ಅವರ ನಿವಾಸಕ್ಕೆ ಭೇಟಿ ನೀಡಿದಾಗ ನನ್ನ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದರು. ಅಲ್ಲದೆ, ನನಗೆ ಹಾಗೂ ನನ್ನ ಮಗನಿಗೆ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ದೂರು ಹಿನ್ನೆಲೆ ಪೊಲೀಸರು ಮೂವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ, BNS ಸೆಕ್ಷನ್‌ಗಳ ಜೊತೆಗೆ SC/ST ಕಾಯಿದೆ ಅಡಿಯಲ್ಲೂ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.












Click it and Unblock the Notifications