Budget 2024: ಲೋಕಸಭೆ ಚುನಾವಣೆಗೂ ಮೊದಲು ಬೆಂಗಳೂರಿಗೆ ಬಿಗ್ ಗಿಫ್ಟ್!
ಬೆಂಗಳೂರು, ಜನವರಿ 16: ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಫೆಬ್ರವರಿ 1ರಂದು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಲಿದೆ. ಈ ಬಾರಿಯ ಬಜೆಟ್‌ನಲ್ಲಿ ಉದ್ಯಾನ ನಗರಿ ಬೆಂಗಳೂರು ನಗರಕ್ಕೆ ಬಿಗ್ ಗಿಫ್ಟ್ ನಿರೀಕ್ಷೆ ಮಾಡಲಾಗಿದೆ.
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. ಕೆಲವೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ಎದುರಾಗುತ್ತಿರುವುದರಿಂದ ಬಜೆಟ್‌ನಲ್ಲಿ ಜನಪ್ರಿಯ ಘೋಷಣೆಗಳ ನಿರೀಕ್ಷೆ ಇದೆ.

ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನಗರದಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆ ಮಾಡಲು ಮುಂದಾಗಿದೆ. ಕಳೆದ ವಾರ ಕೇಂದ್ರ ಸರ್ಕಾರ ಬಿಎಂಆರ್‌ಸಿಎಲ್‌ಗೆ ಪೂರ್ಣ ಪ್ರಮಾಣದ ವ್ಯವಸ್ಥಾಪಕರನ್ನು ನೇಮಕ ಮಾಡಿದೆ.
ನಮ್ಮ ಮೆಟ್ರೋ 3ನೇ ಹಂತದ ಯೋಜನೆ; ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿಯೇ ಅನುಮೋದನೆ ನೀಡುವ ನಿರೀಕ್ಷೆ ಇದೆ. 2023ರ ಫೆಬ್ರವರಿಯಿಂದ ವಿವಿಧ ಹಂತದಲ್ಲಿ ಈ ಯೋಜನೆಯ ಕಡತಗಳನ್ನು ಅಂತಿಮಗೊಳಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಈ ಯೋಜನೆಗೆ ಒಪ್ಪಿಗೆ ಕೊಟ್ಟಿದ್ದು, ಕೇಂದ್ರದ ಒಪ್ಪಿಗೆ ಬಾಕಿ ಇದೆ.
ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ-3ನೇ ಹಂತದದಲ್ಲಿ 44.65 ಕಿ. ಮೀ. ಮಾರ್ಗದಲ್ಲಿ ಮೆಟ್ರೋ ಜಾಲ ವಿಸ್ತರಣೆ ಮಾಡಲು ಮುಂದಾಗಿದೆ. 2023ರ ಫೆಬ್ರವರಿಯಲ್ಲಿ ಈ ಯೋಜನೆಗಾಗಿ 16,328 ಕೋಟಿ ರೂ.ಗಳ ವಿವರವಾದ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ತಯಾರು ಮಾಡಿ ಕಳಿಸಲಾಗಿತ್ತು. ಆದರೆ ವೆಚ್ಚವನ್ನು ಕಡಿತಗೊಳಿಸುವಂತೆ ಕೇಂದ್ರ ಸೂಚಿಸಿದ ಹಿನ್ನಲೆಯಲ್ಲಿ 15,611 ಕೋಟಿ ರೂ.ಗಳಿಗೆ ವೆಚ್ಚ ಕಡಿತ ಮಾಡಲಾಗಿದೆ.
ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ-3ನೇ ಹಂತದ ಯೋಜನೆಯಲ್ಲಿ ಎರಡು ಮಾರ್ಗವನ್ನು ಪ್ರಸ್ತಾಪಿಸಿದೆ. ಮೊದಲ ಮಾರ್ಗ 32.1 ಕಿ. ಮೀ. ಇದ್ದು, ಕೆಂಪಾಪುರ-ಜೆಪಿ ನಗರ ಮೂಲಕ ಹೊರವರ್ತುಲ ರಸ್ತೆಯನ್ನು ಸಂಪರ್ಕಿಸಲಿದೆ. ಎರಡನೇ ಮಾರ್ಗ 12.5 ಕಿ. ಮೀ. ಇದ್ದು, ಮಾಗಡಿ ರಸ್ತೆ ಹೊಸಹಳ್ಳಿಯಿಂದ ಕಡಬಗೆರೆಗೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದಲ್ಲಿ 3 ಬೋಗಿಗಳ ರೈಲು ಸಂಚಾರ ನಡೆಸುವ ನಿರೀಕ್ಷೆ ಇದೆ.
ಈ ವರ್ಷದ ಮಾರ್ಚ್‌ವೊಳಗೆ ಈ ಯೋಜನೆಗೆ ಕೇಂದ್ರದಿಂದ ಅನುಮೋದನೆ ಪಡೆಯುವುದು ಬಿಎಂಆರ್‌ಸಿಎಲ್ ನಿರೀಕ್ಷೆಯಾಗಿದೆ. ಇದಕ್ಕಾಗಿಯೇ ಬಜೆಟ್‌ನಲ್ಲಿ ಕೇಂದ್ರ ಯೋಜನೆಗೆ ಒಪ್ಪಿಗೆ ನೀಡಿ, ವೆಚ್ಚ ಹಂಚಿಕೆ ಘೋಷಣೆ ಮಾಡಿದರೆ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ.
ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳು ಮತ್ತು ಪಿಎಂ ಗತಿಶಕ್ತಿ ಯೋಜನೆಯ ಎನ್‌ಪಿಜಿ ಸಭೆ ಜನವರಿ ಮೂರನೇ ವಾರದಲ್ಲಿ ನಡೆಯುವ ನಿರೀಕ್ಷೆ ಇದೆ. ಈ ಸಭೆಯಲ್ಲಿಯೂ ಬಜೆಟ್‌ನಲ್ಲಿ ನಮ್ಮ ಮೆಟ್ರೋ-3ನೇ ಹಂತದ ಯೋಜನೆಯನ್ನು ಸೇರಿಸುವ ಕುರಿತು ಮನವಿ ಸಲ್ಲಿಕೆ ಮಾಡಲಾಗುತ್ತದೆ.
ಫೆಬ್ರವರಿಯಲ್ಲಿ ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಸಭೆಯೂ ನವದೆಹಲಿಯಲ್ಲಿ ನಡೆಯಲಿದೆ. ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೂ ಸಹ ವೆಚ್ಚ ಹಂಚಿಕೆ ಸಂಬಂಧ ಪಿಐಬಿ ಸಭೆಯು ತೆಗೆದುಕೊಳ್ಳುವ ತೀರ್ಮಾನ ಅಂತಿಮವಾಗಿದೆ.
ಬಿಎಂಆರ್‌ಸಿಎಲ್ ಈ ಯೋಜನೆಗೆ 100 ಎಕರೆ ಭೂಮಿಯನ್ನು ಸಹ ಗುರುತಿಸಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ಬಳಿ ಮಾಗಡಿ ರಸ್ತೆಯಲ್ಲಿ ಡಿಪೋ ಸಹ ನಿರ್ಮಾಣವಾಗಲಿದೆ. ಇದಕ್ಕೆ 75 ಎಕರೆ ಜಾಗ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಪ್ರತಿ 10 ಕಿ. ಮೀ. ವಿಭಾಗಕ್ಕೆ ಭೂ ಸ್ವಾಧೀನ ಅಗತ್ಯತೆಗಳನ್ನು ನಿಗದಿಪಡಿಸಿ ಯೋಜನಾವರದಿ ತಯಾರು ಮಾಡಲಾಗಿದೆ.
ಬೆಂಗಳೂರಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಸದ್ಯ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ನಮ್ಮ ಮೆಟ್ರೋ 3ನೇ ಹಂತದ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೆಚ್ಚ ಹಂಚಿಕೆ ಮಾಡಿಕೊಂಡು ಜಾರಿಗೊಳಿಸಲಿವೆ. ಇದಕ್ಕೂ ಮೊದಲು ಕೇಂದ್ರದಿಂದ ಯೋಜನೆಗೆ ಒಪ್ಪಿಗೆ ಬೇಕಿದೆ.
ಜನವರಿ 11ರಂದು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಜುಂ ಪರ್ವೇಜ್ ಅವರನ್ನು ವರ್ಗಾವಣೆ ಮಾಡಿ, 1995ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂ. ಮಹಾಬಲೇಶ್ವರ ರಾವ್ ಅವರನ್ನು ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲು ಸರ್ಕಾರಕ್ಕೆ ಪತ್ರ ಬರೆದಿತ್ತು.
ಬೆಂಗಳೂರು ಮೆಟ್ರೋ ಯೋಜನೆಯನ್ನು ಬಿಎಂಆರ್‌ಸಿಎಲ್ ನಿರ್ವಹಣೆ ಮಾಡುತ್ತದೆ. ಬಿಎಂಆರ್‌ಸಿಎಲ್ ಎಂಡಿಗೆ ಯಾವುದೇ ಹೆಚ್ಚುವರಿ ಹೊಣೆ ನೀಡಬಾರದು ಎಂದು ಸೂಚನೆ ನೀಡಿತ್ತು. ಈ ಮೂಲಕ ಯೋಜನೆಯ ಕಾರ್ಯಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವಂತೆ ನಿರ್ವಹಣೆ ಮಾಡಲು ಅನುಕೂಲ ಮಾಡಿಕೊಟ್ಟಿತ್ತು.












Click it and Unblock the Notifications