ಬೆಂಗಳೂರಿನಲ್ಲಿ ನಾಟಿ ಕೋಳಿ ಸಾರು, ಮುದ್ದೆ ತಿನ್ನೋ ಸ್ಪರ್ಧೆ: ಗೆದ್ದವರಿಗೆ ಈ ಬಹುಮಾನ
ಬೆಂಗಳೂರು ಮಾರ್ಚ್ 23: ಯುಗಾದಿ ಹಬ್ಬ ಇನ್ನೇನು ದೂರವಿಲ್ಲ. ಇದಕ್ಕಾಗಿ ತಯಾರಿ ನಡೆಸಿರುವ ಜನ ಹಬ್ಬದ ಆಗಮನಕ್ಕೆ ಎದುರು ನೋಡುತ್ತಿದ್ದಾರೆ. ಈ ಬಾರಿ ಯುಗಾದಿ ಹಬ್ಬವನ್ನು ಕೊಂಚ ವಿಭಿನ್ನವಾಗಿಸಲು ಹಲವೆಡೆ ಕೆಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೆ ಕೆಲ ಸ್ಪರ್ಧಿಗಳು ಇವೆ. ಇದರಲ್ಲಿ ಭಾಗವಹಿಸಿ ವಿಜೇತರಾದರೆ ಆಕರ್ಷಕ ಬಹುಮಾನ ನೀಡಲಾಗುತ್ತಿದೆ. ಇದು ಹಬ್ಬದ ಸಂತೋಷವನ್ನು ಮತ್ತಷ್ಟು ಹೆಚ್ಚಿಸಲಿದೆ.
ಹೌದು.. ಬೆಂಗಳೂರಿನಲ್ಲಿ ಯುಗಾದಿ ಹಬ್ಬಕ್ಕೆ ವಿಶೇಷವಾಗಿ ನಾಟಿ ಕೋಳಿ ಸಾಂಬರ್ ಹಾಗೂ ಮುದ್ದೆ ತಿನ್ನೋ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಯಾರು ಹೆಚ್ಚು ಮುದ್ದೆಯನ್ನು ತಿನ್ನುತ್ತಾರೋ ಅಂಥವರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುತ್ತದೆ. ನೀವು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹಾಗಾದರೆ ಈ ಸ್ಪರ್ಧೆ ನಡೆಯುತ್ತಿರುವುದು ಎಲ್ಲಿ? ಯಾವಾಗ? ಎಲ್ಲದರ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಬೆಂಗಳೂರು ಸೇರಿದಂತೆ ಹಲವೆಡೆ ಯುಗಾದಿ ನಂತರ ಹೊಸತೊಡಕು ಆಚರಿಸಲಾಗುತ್ತದೆ. ಹೀಗೆಂದರೆ ಮಾಂಸದ ಊಟ. ಈ ಹೊಸತೊಡಗಿನ ಭಾಗವಾಗಿ ಬೆಂಗಳೂರಿನಲ್ಲಿ ಮುದ್ದೆ ನಾಟಿ ಕೋಳಿ ಸಾಂಬರ್ ತಿನ್ನೋ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸಾಮಾನ್ಯವಾಗಿ ಹಾಡು, ನೃತ್ಯ, ಕಾಮಿಡಿ ಸ್ಪರ್ಧೆಗಳನ್ನು ಯುಗಾದಿ ಹಬ್ಬದಂದು ನಡೆಸಲಾಗುತ್ತದೆ. ಆದರೆ ಒಂದಿಷ್ಟು ವಿಭಿನ್ನವಾಗಿಸಲು ಯುಗಾದಿಗೂ ಮುನ್ನ ಮಾಂಸಾಹಾರ ತಿನ್ನೋ ಸ್ಪರ್ಧೆಯನ್ನು ಇಂದು ನಡೆಸಲಾಗುತ್ತಿದೆ.
ಬೆಂಗಳೂರಿನ ನಂದಿನ ಲೇಔಟ್‌ನ ಜೈಮಾರುತಿ ನಗರದ ಬಯಲು ರಂಗ ಮಂದಿರ ಮೈದಾನದಲ್ಲಿ ಈ ಸ್ಪರ್ಧೆ ನಡೆಯಲಿದೆ. ಕೆಂಪೇಗೌಡ ಚಾರಿಟೆಬಲ್ ಟ್ರಸ್ಟ್ ಈ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಗೆದ್ದವರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ. ಈ ಸ್ಪರ್ಧೆಯನ್ನು ಕಳೆದ ಮೂರು ವರ್ಷದಿಂದ ಆಚರಿಸಿಕೊಂಡು ಬರಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.
ಮೊದಲ ಬಹುಮಾನವಾಗಿ ಪುರುಷರಿಗೆ 25 ಕೆಜಿ ಹೋತ, ದ್ವಿತೀಯ ಬಹುಮಾನ ಪಡೆದವರಿಗೆ 20 ಕೆಜಿ ಟಗರು, 5ಕೆಜಿ ನಾಟಿ ಹುಂಜ ಕೊಡಲಾಗುತ್ತದೆ. ಮೊದಲ ಸ್ಥಾನ ಪಡೆದ ಮಹಿಳೆಯರಿಗೆ 15 ಕೆಜಿ ಕುರಿ, ದ್ವಿತೀಯ ಸ್ಥಾನಕ್ಕೆ 6ಕೆಜಿ ನಾಟಿ ಕೋಳಿ, ತೃತೀಯ ಬಹುಮಾನವಾಗಿ 3 ಕೆಜಿ ನಾಟಿಕೋಳಿ ವಿತರಿಸಲಾಗುತ್ತದೆ. ಇದಕ್ಕೆ ಪ್ರವೇಶ ಶುಲಕ್ವೂ ಇರುತ್ತದೆ. ಪುರುಷರು ಈ ಸ್ಪರ್ಧೆಯಲ್ಲಿ ಭಾಗವಹಿಸಲು 150 ರೂಪಾಯಿ ಹಾಗೂ ಮಹಿಳೆಯರು 100 ರೂಪಾಯಿ ಪ್ರವೆಶ ಶುಲ್ಕ ನೀಡಬೇಕಾಗುತ್ತದೆ.












Click it and Unblock the Notifications