ಆಗಸ್ಟ್‌ನಲ್ಲಿ ಓಡಲಿದೆ ಈ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು
ಬೆಂಗಳೂರು, ಮೇ 17; ನಮ್ಮ ಮೆಟ್ರೋ ಬೆಂಗಳೂರು ನಗರದ ಜೀವನಾಡಿಯಾಗಿ ಬದಲಾಗುತ್ತಿದೆ. ನಗರದ ಸಂಚಾರ ದಟ್ಟಣೆ ಬಗೆಹರಿಸಲು ಮೆಟ್ರೋ ಪ್ರಮುಖ ಪಾತ್ರ ವಹಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಈ ವರ್ಷದಲ್ಲಿ 3 ಮೆಟ್ರೋ ಮಾರ್ಗವನ್ನು ಲೋಕಾರ್ಪಣೆ ಮಾಡಲು ಬಿಎಂಆರ್‌ಸಿಎಲ್ ಘೋಷಣೆ ಮಾಡಿತ್ತು. ಜುಲೈ ಅಥವ ಆಗಸ್ಟ್‌ನಲ್ಲಿ ಎರಡು ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.
ಕೆ. ಆರ್. ಪುರ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಓಡಿಸಲು ಅಂತಿಮ ಹಂತದ ಕಾಮಗಾರಿ ಕೈಗೊಳ್ಳಲಾಗಿದೆ. ಈ ಎರಡೂ ಮಾರ್ಗಗಳು ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕೆ ಸೇರಿವೆ. ಪ್ರಾಯೋಗಿಕ ಸಂಚಾರ ಪೂರ್ಣಗೊಂಡು ಜುಲೈ ಅಂತ್ಯ ಅಥವ ಆಗಸ್ಟ್ ಮಧ್ಯದಲ್ಲಿ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25ರಂದು ವೈಟ್‌ಫೀಲ್ಡ್-ಕೆ. ಆರ್. ಪುರ ನಡುವಿನ 13 ಕಿ. ಮೀ. ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. ಆದರೆ ಕೆ. ಆರ್. ಪುರ-ಬೈಯಪ್ಪನಳ್ಳಿ (2.5 ಕಿ. ಮೀ.) ಮಾರ್ಗ ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ.
ಎರಡು ಮಾರ್ಗದಲ್ಲಿ ಸಂಚಾರ; ಕೆ. ಆರ್. ಪುರ-ಬೈಯಪ್ಪನಳ್ಳಿ ನಡುವೆ ನಮ್ಮ ಮೆಟ್ರೋ ಸಂಚಾರಕ್ಕೆ ಬೆನ್ನಿಗಾನಹಳ್ಳಿ ಬಳಿ ಹಾದು ಹೋಗಿರುವ ಬೆಂಗಳೂರು-ಸೇಲಂ ರೈಲ್ವೆ ಮಾರ್ಗದ ಮೇಲ್ಭಾಗದಲ್ಲಿನ ತೆರೆದ ವೆಬ್ ಗರ್ಡರ್ ಅಳವಡಿಕೆ ತಡೆಯಾಗಿತ್ತು. ಈಗ ಈ ಕಾಮಗಾರಿ ಮುಗಿದು ವಯಡಕ್ಟ್ ಕಾಮಗಾಡಿ ಅಳವಡಿಕೆ ಕಾರ್ಯವೂ ಪೂರ್ಣಗೊಂಡಿದೆ.

ಈಗ ಮೆಟ್ರೋ ರೈಲು ಓಡಲು ಹಳಿ ಅಳವಡಿಕೆ, ಸಿಗ್ನಲ್ ಕೇಬಲ್ ಅಳವಡಿಕೆ ಮುಂತಾದ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿ ಪೂರ್ಣಗೊಂಡ ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಹಳಿಗಳ ಸುರಕ್ಷತಾ ಪರೀಕ್ಷೆ ಕೈಗೊಳ್ಳಲಿದ್ದಾರೆ. ಈ ಕಾಮಗಾರಿ ಜುಲೈ ಮೊದಲ ವಾರದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಇದ್ದಾರೆ. ಆದ್ದರಿಂದ ಜುಲೈ ಅಂತ್ಯ ಅಥವ ಆಗಸ್ಟ್ ಮಧ್ಯದಲ್ಲಿ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಮಾರ್ಗ ರೈಲು ಸಂಚಾರಕ್ಕೆ ಮುಕ್ತಗೊಂಡಿದೆ. ಆದರೆ ಕೆಂಗೇರಿ-ಚಲ್ಲಘಟ್ಟ ನಡುವಿನ ಮಾರ್ಗ 1.5 ಕಿ. ಮೀ. ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಂಡಿಲ್ಲ. ಕೆ. ಆರ್. ಪುರಂ-ಬೈಯಪ್ಪನಹಳ್ಳಿ ಮಾರ್ಗದ ಜೊತೆಗೆ ಈ ಮಾರ್ಗವೂ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.
ಈ ಎರಡೂ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಗೊಂಡರೆ ಬೆನ್ನಿಗಾನಹಳ್ಳಿಯಿಂದ ಚಲ್ಲಘಟ್ಟ ತನಕ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಜನರು ಸಂಚಾರ ನಡೆಸಬಹುದು. ಇದು ನಗರದ ಸಂಚಾರ ದಟ್ಟಣೆಯಲ್ಲಿ ಸಿಲುಕುವ ಜನರಿಗೆ ಸಹಾಯಕವಾಗಲಿದೆ.
ವೈಟ್‌ಫೀಲ್ಡ್-ಬೆನ್ನಿಗಾನಹಳ್ಳಿ ಮಾರ್ಗವನ್ನು ಎರಡು ಹಂತದಲ್ಲಿ ಲೋಕಾರ್ಪಣೆ ಮಾಡಲು ಅಧಿಕಾರಿಗಳು ಮೊದಲೇ ಅಂದಾಜಿಸಿದ್ದರು. ಅದರಂತೆ ವೈಟ್‌ಫೀಲ್ಡ್-ಕೆ. ಆರ್. ಪುರ ಮಾರ್ಗ ಮಾರ್ಚ್‌ನಲ್ಲಿ ಉದ್ಘಾಟನೆಗೊಂಡಿತ್ತು. ಎರಡನೇ ಹಂತದಲ್ಲಿ ಕೆ. ಆರ್. ಪುರ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ. ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ವಿಸ್ತರಿತ ಮಾರ್ಗ ಇದಾಗಿದೆ.
ಈ ವರ್ಷ ಲೋಕಾರ್ಪಣೆಯಾಗಲಿರುವ ಮಾರ್ಗಗಳು; ಕೆ. ಆರ್. ಪುರ-ಬೈಯಪ್ಪನಹಳ್ಳಿ, ಕೆಂಗೇರಿ-ಚಲ್ಲಘಟ್ಟ ಮಾರ್ಗದ ಜೊತೆಗೆ ಉಳಿದ ಎರಡು ಮಾರ್ಗಗಳು ಈ ವರ್ಷದಲ್ಲಿ ಲೋಕಾರ್ಪಣೆಗೊಳ್ಳಲಿವೆ. ಇದರಿಂದಾಗಿ ನಮ್ಮ ಮೆಟ್ರೋ ಸಂಪರ್ಕ ಜಾಲ 94.09 ಕಿ. ಮೀ.ಗೆ ವಿಸ್ತರಣೆಯಾಗಲಿದೆ.
ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗ ಈ ವರ್ಷ ಲೋಕಾರ್ಪಣೆಯಾಗಲಿದೆ. 16 ನಿಲ್ದಾಣಗಳು ಈ ಮಾರ್ಗದಲ್ಲಿವೆ. ಮಾರ್ಗದಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ತನಕ ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್ ಇದೆ. ಮೆಟ್ರೋ ರೈಲಿನ ಜೊತೆ ಬಸ್‌ಗಳ ಸಂಚಾರಕ್ಕೂ ಸಹ ಅನುಕೂವಾಗುವಂತೆ ಮಾರ್ಗ ನಿರ್ಮಾಣ ಮಾಡಲಾಗಿದೆ.
ಇದರ ಜೊತೆಗೆ ನಾಗಸಂದ್ರ-ಬಿಐಇಸಿ (ರೀಚ್-3 ವಿಸ್ತರಣೆ) ಮಾರ್ಗ 3.14 ಕಿ. ಮೀ. ಮಾರ್ಗವೂ ಇದೇ ವರ್ಷ ಲೋಕಾರ್ಪಣೆಯಾಗಲಿದೆ. ಹಸಿರು ಮಾರ್ಗದಲ್ಲಿ ಮಂಜುನಾಥ ನಗರ, ಜಿಂದಾಲ್, ಬಿಐಇಸಿ ನಿಲ್ದಾಣಗಳಿವೆ.












Click it and Unblock the Notifications