ಕರ್ನಾಟಕದ ಪ್ರಮುಖರ ಹತ್ಯೆ ಸಂಚಿನಲ್ಲಿ ಬೆಂಗಳೂರಿನ ವೈದ್ಯರು!
ಬೆಂಗಳೂರು, ಡಿಸೆಂಬರ್ 22 : ಕರ್ನಾಟಕದಲ್ಲಿನ ಪತ್ರಕರ್ತರು ಮತ್ತು ಕೆಲವು ರಾಜಕೀಯ ಮುಖಂಡರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಬೆಂಗಳೂರಿನ ಇಬ್ಬರು ವೈದ್ಯರು ಭಾಗಿಯಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ರಾಷ್ಟ್ರೀಯ ತನಿಖಾ ದಳ ಈ ಕೊಲೆ ಸಂಚಿನ ಪ್ರಕರಣದ ತನಿಖೆ ನಡೆಸುತ್ತಿದೆ.
ಈ ಕೊಲೆ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಲಷ್ಕರ್ ಉಗ್ರ ಅಸಾದುಲ್ಲಾ ಖಾನ್‌ನನ್ನು ವಿಚಾರಣೆ ನಡೆಸುತ್ತಿದ್ದು, ಸಂಚಿನಲ್ಲಿ ಭಾಗಿಯಾದ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಣೆ ಮಾಡುತ್ತಿದ್ದಾರೆ. [ಉಗ್ರ ಅಸಾದುಲ್ಲಾನನ್ನು ಬೆಂಗಳೂರಿಗೆ]

ಬೆಂಗಳೂರಿನ ಸಿಸಿಬಿ ಪೊಲೀಸರು 12 ಆರೋಪಿಗಳನ್ನು ಬಂಧಿಸುವ ಮೂಲಕ ಕೊಲೆ ಸಂಚನ್ನು ಮೊದಲು ಬಹಿರಂಗಪಡಿಸಿದ್ದರು. ನಂತರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣದ ಕೆಲವು ವ್ಯಕ್ತಿಗಳು ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಎನ್‌ಐಎ ಶಂಕೆ ವ್ಯಕ್ತಪಡಿಸಿದೆ. [ಖಾನ್ ಬಂಧನದಿಂದ ಕೊಲೆ ಸಂಚಿನ ಪ್ರಕರಣಕ್ಕೆ ಮಿಂಚಿನ ವೇಗ]
ಡಿಸೆಂಬರ್ 9ರಂದು ಅಸಾದುಲ್ಲಾ ಖಾನ್‌ನನ್ನು ಬೆಂಗಳೂರಿಗೆ ಕರೆತಂದ ಎನ್‌ಐಎ ಅಧಿಕಾರಿಗಳು ಆತನ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಖಾನ್ ಬೆಂಗಳೂರಿನ ಇಬ್ಬರು ವೈದ್ಯರು, ಒಬ್ಬರು ಇಂಜಿನಿಯರ್ ಈ ಸಂಚಿನಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಬೆಂಗಳೂರಿನ ಕೆಲವು ಯುವಕರ ಮೇಲೆಯೂ ಎನ್‌ಐಎ ಕಣ್ಣಿಟ್ಟಿದೆ.
ದ್ವೇಷಕ್ಕಾಗಿ ಕೊಲೆ ಮಾಡಲು ಸಂಚು : ಬೆಂಗಳೂರಿನ ಇಬ್ಬರು ವೈದ್ಯರು ಕೊಲೆ ಸಂಚಿನ ಬಗ್ಗೆ 2012ರಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಸಾದುಲ್ಲಾ ಖಾನ್ ವಿಚಾರಣೆ ವೇಳೆ ಹೇಳಿದ್ದಾನೆ. ಕೊಲೆ ಮಾಡಬೇಕಾದ ಹಿಂದೂ ಸಂಘಟನೆಗಳ ನಾಯಕರ ಮತ್ತು ಪತ್ರಕರ್ತರ ಬಗ್ಗೆ ವೈದ್ಯರು ಸಭೆಯಲ್ಲಿ ಮಾಹಿತಿ ನೀಡಿದ್ದರು.
ಮುಸ್ಲಿಂಮರ ವಿರುದ್ಧ ಮಾತನಾಡುವ ಮತ್ತು ಬರೆಯುವ ಹಿಂದೂ ನಾಯಕರು ಹಾಗೂ ಪತ್ರಕರ್ತರನ್ನು ದ್ವೇಷದ ಉದ್ದೇಶಕ್ಕಾಗಿ ಕೊಲ್ಲಲು ಸಂಚು ರೂಪಿಸಲಾಗಿತ್ತು. ಮೊಹಮದ್ ಫೈಸಲ್ ಎಂಬ ಇಂಜಿನಿಯರ್ ಸಹ ಸೌದಿಗೆ ಆಗಮಿಸಿದ್ದ ಎಂದು ಖಾನ್ ವಿಚಾರಣೆ ವೇಳೆ ಹೇಳಿದ್ದಾನೆ. ಎನ್‌ಐಎ ತನಿಖೆ ಮುಂದುವರೆದಿದೆ.











Click it and Unblock the Notifications