ಬೆಂಗಳೂರು ಟನಲ್ ರಸ್ತೆ ಯೋಜನೆ ಎಷ್ಟೇ ವಿರೋಧಿಸಿದರೂ ನಿರ್ಮಾಣ ಫಿಕ್ಸ್: ಡಿಕೆ ಶಿವಕುಮಾರ್
ಬೆಂಗಳೂರು, ಜನವರಿ 29: ಬೆಂಗಳೂರಿನಲ್ಲಿ ಸರ್ಕಾರ ಕೈಗೆತ್ತಿಕೊಂಡಿರುವ ಟನಲ್ ರಸ್ತೆ ಯೋಜನೆಯ ಚರ್ಚೆಗಳು ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಹೆಬ್ಬಾಳ-ಸಿಲ್ಕ್‌ಬೋರ್ಡ್‌ವರೆಗೆ ಟನಲ್ ರಸ್ತೆ ಯೋಜನೆಗೆ ಸರ್ಕಾರ ಈಗಾಗಲೇ 8000 ಕೋಟಿ ರೂ.ನಷ್ಟು ಹಣ ಮೀಸಲಿಟ್ಟಿದೆ. ಯೋಜನೆಗೆ ಸಮಗ್ರ ಯೋಜನಾ ವರದಿ (ಡಿಪಿಎಆರ್) ಸಿದ್ಧಪಡಿಸುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಟನಲ್ ಯೋಜನೆಯಿಂದ ನಗರಕ್ಕೆ ಅನುಕೂಲಕ್ಕಿಂತ ಹೆಚ್ಚಿನ ಅಪಾಯ ಎದುರಾಗಬಹುದೆಂಬ ಕಾರಣಕ್ಕೆ ಅನೇಕರು ಯೋಜನೆ ವಿರೋಧಿಸುತ್ತಿದ್ದಾರೆ. ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಎಷ್ಟೇ ವಿರೋಧವಿದ್ದರು ಟನಲ್ ರಸ್ತೆ ಮಾಡಿಯೇ ಸಿದ್ಧ ಎಂದು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಂಗಳವಾರ ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. ಟನಲ್ ರಸ್ತೆ ಯೋಜನೆಗೆ ವಿಪಕ್ಷ ನಾಯಕರ ವಿರೋಧ ಕುರಿತ ಪ್ರತಿಕ್ರಿಯಿಸಿ, ಟನಲ್ ರಸ್ತೆಯೋಜನೆಯಿಂದ ಯಾರ ಭೂಮಿಗೆ ತೊಂದರೆ ಆಗುವುದಿಲ್ಲ. ಯಾರ ಭೂಮಿಯನ್ನು ವಶಕ್ಕೆ ಪಡೆಯಲ್ಲ. ಇದು ಭೂಮಿಯ ಕೆಳಗೆ ಹೋಗುತ್ತದೆ. ಅರಮನೆ ಮೈದಾನದಲ್ಲಿ ಸುರಂಗ ರಸ್ತೆ ಬಂದರೂ ಅದು ಭೂಮಿಯ ಕೆಳಗೆ ಹೋಗುತ್ತದೆ, ಚಿಂತೆ ಬೇಡ ಎಂದರು.

ಈ ಟನಲ್ ರಸ್ತೆ ಯೋಜನೆಯಿಂದ ಬೆಂಗಳೂರಿಗೆ, ಇಲ್ಲಿನ ಜನರಿಗೆ ಉಪಯೋಗವಾಗಲಿದೆ. ಈ ಟನಲ್ ರಸ್ತೆ ಯೋಜನೆಗೆ ಯಾರು ಎಷ್ಟೇ ವಿರೋಧ ಮಾಡಿದರೂ ಸಹಿತ ಸರ್ಕಾರ ಮಾತ್ರ ಯೋಜನೆ ಸಾಕಾರ ಮಾಡಿಯೇ ತೀರುತ್ತದೆ. ಇದು ಶತಸಿದ್ಧ ಎಂದಿದ್ದಾರೆ.
ಹೆಬ್ಬಾಳ ಎಸ್ಟಿಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗಿನ 18 ಕಿಲೋ ಮೀಟರ್ ಸುರಂಗ ರಸ್ತೆ ನಿರ್ಮಾಣ ಮಾಡಲು ಈಗಾಗಲೇ ಸರ್ಕಾರ ಯೋಜಿಸಿದೆ. ಇದರ ಟೆಂಡರ್ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು, ಮುಂದಿನ ಫೆಬ್ರವರಿ ಅಂತ್ಯದೊಳಗೆ ಯೋಜನೆ ಸುರಂಗ ಕೊರೆಯಲು ರೂ. 17,780 ಕೋಟಿ ಮೊತ್ತದ ಟೆಂಡರ್ ಆಹ್ವಾನಿಸಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಎರಡು ಹಂತಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು, ಮುಂದಿನ ಮೂರುವರೆ ವರ್ಷದೊಳಗೆ ಟನರ್ ರಸ್ತೆ ನಿರ್ಮಿಸಲಾಗುವುದು. ಪಾಲಿಕೆಯಿಂದ ಹಾಗೂ ಸರ್ಕಾರದಿಂದ ಯೋಜನೆಗೆ ಹಣ ಒದಗಿಸಲಾಗುವುದು. ವಿವಿಧ ಬ್ಯಾಂಕ್‌ಗಳು ಸಾಲ ನೀಡಲು ಮುಂದೆ ಬಂದಿವೆ. ಹರಾಜಿನಲ್ಲಿ ಕಡಿಮೆ ಬಡ್ಡಿಗೆ ಹಣ ನೀಡುವ ಬ್ಯಾಂಕ್ ನಿಂದ ಸಾಲ ಪಡೆದು ಯೋಜನೆ ಆರಂಭಿಸಲಾಗುವುದು ಎಂದು ವಿವರಿಸಿದರು.
ಯೋಜನೆಗೆ ವಿರೋಧ ಏಕೆ? ವಿಪಕ್ಷಗಳ ನಾಯಕರು ಹೇಳುವುದೇನು?
ಹೆಬ್ಬಾಳ-ಸಿಲ್ಕ್‌ಬೋರ್ಡ್ ಟನಲ್ ರಸ್ತೆ ಚರ್ಚೆಯಲ್ಲಿರುವಾಗಲೇ ಸರ್ಕಾರ ಕೆ.ಆರ್.ಪುರಂ-ನಾಯಂಡಹಳ್ಳಿವರೆಗೆ ಮತ್ತೊಂದು ಟನಲ್ ರಸ್ತೆ ಯೋಜನೆಗೆ ಮುಂದಾಗಿದೆ. ಅದಕ್ಕಾಗಿ ಟೆಂಡರ್ ಆಹ್ವಾನಿದಿದೆ. ಇದನ್ನು ವಿಪಕ್ಷ ಸಂಸದರು ವಿರೋಧಿಸಿದ್ದಾರೆ. ಬೆಂಗಳೂರಿಗೆ ಟನಲ್ ರಸ್ತೆ ಅಗತ್ಯವಿಲ್ಲ. ಸರ್ಕಾರ ಯೋಜನೆ ಕೈ ಬಿಡಬೇಕು. ವಿನಾಕಾರಣ ಟನಲ್ ರಸ್ತೆ ಯೋಜನೆ ಹೆಸರಿನಲ್ಲಿ ಸಾರ್ವಜನಿಕ ಹಣ ವ್ಯರ್ಥ ಮಾಡಬಾರದು ಎಂದು ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿಸಿ ಮೋಹನ್ ಅವರು ಪ್ರತಿಕ್ರಿಯಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಪಿಸಿ ಮೋಹನ್ ಅವರು ಪತ್ರ ಮುಖೇನ ಸರ್ಕಾರಕ್ಕೆ ಯೋಜನೆ ಬೇಡ ಎಂದು ಆಗ್ರಹಿಸಿದ್ದಾರೆ. ಇದರ ಬದಲಾಗಿ ಹಾಲಿ ಸಮಸ್ಯೆಗಳತ್ತ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟನಲ್ ಯೋಜನೆಗೆ ಡಿಪಿಆರ್ ಸಿದ್ಧಪಡಿಸುವಾಗ ಹಳೆಯ ಪ್ಲಾನ್ ಅನ್ನೆ ಇಲ್ಲಿ ಕಾಪಿ ಪೇಸ್ಟ್ ಮಾಡಲಾಗಿದೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ವ್ಯಯಿಸಲಾಗಿದೆ. ಡಿಪಿಆರ್ ಸಿದ್ಧಪಡಿಸಿದ ಮೇಲೂ ಯೋಜನೆ ಕೈ ಬಿಟ್ಟ ಉದಾಹರಣೆಗಳು ನಮ್ಮ ಮುಂದಿವೆ ಎಂದಿದ್ದಾರೆ. ಇದಾಗಿ ಎರಡು ದಿನಗಳಲ್ಲಿ ಡಿಸಿಎಂ ಅವರು ಸರ್ಕಾರ ಟನಲ್ ರಸ್ತೆ ಮಾಡಿಯೇ ಸಿದ್ಧ ಎಂದು ಹೇಳಿರುವುದು ಮತ್ತಷ್ಟು ಚರ್ಚೆ ಹುಟ್ಟು ಹಾಕಿದೆ.
ಟನಲ್ ರಸ್ತೆಯಿಂದ ಅಪಾಯ: ತಜ್ಞರು ಏನಂತಾರೆ?
ಹೆಬ್ಬಾಳ-ಸಿಲ್ಕ್ ಬೋರ್ಡ್ ಟನಲ್ ಯೋಜನೆ ಪ್ರಕಟಿಸುತ್ತಿದ್ದಂತೆ ತಜ್ಞರು ಇದನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು. ಟನಲ್ ರಸ್ತೆಯಿಂದ ನಗರಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಮತ್ತಷ್ಟು ಸಮಸ್ಯೆ ತಂದಿಡುವ ಸಾಧ್ಯತೆ ಇದೆ ಎಂದಿದ್ದಾರೆ.
ಮತ್ತೊಂದೆಡೆ ಸಿಟಿಜನ್ ಫಾರ್ ಸಿಟಿಜನ್ ಫೌಂಡೇಶನ್ ಸಹ ಯೋಜನೆಗೆ ಸಹಮತ ವ್ಯಕ್ತಪಡಿಸಿಲ್ಲ. ಈ ಯೋಜನೆಯಿಂದ ಅನಾನುಕೂಲವಾಗಬಹುದು. ನಗರಕ್ಕೆ ಟನಲ್ ರಸ್ತೆ ಅಗತ್ಯವಿಲ್ಲ ಎಂದಿರುವ ಫೌಂಡೇಶನ್, ಸುರಂಗ ಕೊರೆಯುವಾಗ ಅಪಾಯ ಎದುರಾಗಬಹುದು. ಮೆಟ್ರೋ ಸುರಂಗ ಮಾರ್ಗ ಇದೆ. ಅದಕ್ಕೂ ಅಪಾಯ ಎದುರಾಗಬಹುದು. ಈ ಬಗ್ಗೆ ಸರ್ಕಾರ ಗಮನಿಸಬೇಕು ಎಂದಿದೆ. ಹಾಲಿ ಇರುವ ರಸ್ತೆ ಮೂಲ ಸೌಕರ್ಯ ಸುಧಾರಿಸಬೇಕು. ಬೇರೆ ಉಪಾಯ ಅನುಸರಿಸಿ ಟ್ರಾಫಿಕ್ ತಡೆಯುವ ಜೊತೆಗೆ ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡುವಂತೆ ಅನೇಕರು ಸರ್ಕಾರಕ್ಕೆ ತಿಳಿಸಿದ್ದಾರೆ. ವ್ಯಾಪಕ ವಿರೋಧದ ನಡುವೆಯು ಯೋಜನೆ ಆರಂಭವಾಗುತ್ತಾ ಎಂದು ಕಾದು ನೋಡಬೇಕಿದೆ.
ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದ ರಸ್ತೆ ಯೋಜನೆಗಳಿಗೆ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪತ್ರ ಬರೆದು ಮನವಿ ಮಾಡಿದ್ದರು. ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಮಂಡಿಸಲಿರುವ ಬಜೆಟ್‌ನಲ್ಲಿ ರಾಜ್ಯ ರಸ್ತೆ ಸುಧಾರಣೆಗೆ, ಯೋಜನೆಗೆ ಅನುದಾನ ನೀಡುವ ವಿಶ್ವಾಸ ಇದೆ.












Click it and Unblock the Notifications