Tumkuru New Railway Line: ಈ ಹೊಸ ರೈಲ್ವೆ ಮಾರ್ಗ 2027ಕ್ಕೆ ಪೂರ್ಣ
ಹುಬ್ಬಳ್ಳಿ, ಸೆಪ್ಟಂಬರ್ 25: ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಕರ್ನಾಟಕದಲ್ಲಿ ಸಹ ಜೋಡಿ ಹಳಿ ಆಗಿವೆ. ವಿದ್ಯುದೀಕರಣವು ಬಹುತೇಕ ಪೂರ್ಣಗೊಂಡಿದೆ. ಇದರಿಂದ ರೈಲ್ವೆ ಪ್ರಯಾಣ ಮತ್ತಷ್ಟು ಅನುಕೂಲವಾಗಿದೆ. ಹುಬ್ಬಳ್ಳಿ-ಬೆಂಗಳೂರು ಪ್ರಯಾಣದ ಸಮಯ ಮತ್ತಷ್ಟು ತಗ್ಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹೊಸ ಮಾರ್ಗದ ಅಂತ್ಯಕ್ಕೆ ಗಡುವು ನಿಗದಿ ಪಡಿಸಿ ಅಪ್ಡೇಟ್ ಕೊಟ್ಟಿದ್ದಾರೆ.
ಬುಧವಾರ ಹುಬ್ಬಳ್ಳಿಗೆ ಆಗಮಿಸಿದ್ದ ಅವರು ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ನಡೆದ ಇಂಜಿನಿಯರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತುಮಕೂರು-ಚಿತ್ರದುರ್ಗ-ದಾವಣಗೆರೆ ನೂತನ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ 2027ರ ಡಿಸೆಂಬರ್‌ವರೆಗೆ ಪೂರ್ಣಗೊಳಿಸುವಂತೆ ಅವರು ಗಡುವು ನೀಡಿದ್ದಾರೆ.

ಈ ನೂತನ ಮಾರ್ಗ ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಂಡರೆ ಅದರಿಂದ ಹುಬ್ಬಳ್ಳಿ-ಬೆಂಗಳೂರು ಪ್ರಯಾಣದ ಸಮಯ ಮತ್ತಷ್ಟು ತಗ್ಗಲಿದೆ. ಈ ಮಾರ್ಗದ ಲಕ್ಷಾಂತರ ಪ್ರಯಾಣಿಕರಿಗೆ ಸಾರಿಗೆ ವಿಚಾರದಲ್ಲಿ ಭಾರೀ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
ಬೆಳಗಾವಿ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ಕೋಚ್ ರೈಲು
ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಸಂಚಾರವನ್ನು ಶೀಘ್ರವೇ ಆರಂಭಿಸಲಾಗುವುದು ಎಂದರು. ಈ ಮೂಲಕ ವಿ.ಸೋಮಣ್ಣ ಅವರು, ಉತ್ತರ ಕರ್ನಾಟಕದವರ ಪ್ರಮುಖ ಬೇಡಿಕೆ ಈಡೇರಿಕೆಗೆ ಮುಂದಾಗಿದ್ದಾರೆ. ಅಲ್ಲದೇ ಗದಗ-ವಾಡಿ ಮಾರ್ಗ ಯೋಜನೆ ಕೈಗೆತ್ತಿಕೊಮಡಿದ್ದು, ಮುಂದಿನ ದಿನಗಳಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ಸಿಗಲಿದೆ ಎಂದು ಅವರು ಮಾಹಿತಿ ಕೊಟ್ಟಿದ್ದಾರೆ.

ಕರ್ನಾಟಕ ರೈಲ್ವೆ ನಿರ್ವಹಣೆಗೆ ಅಧಿಕ ಅನುದಾನ
ಕೇಂದ್ರ ಸರ್ಕಾರ 2014ರ ಮೊದಲು ಕರ್ನಾಟಕ ರಾಜ್ಯದಲ್ಲಿ ರೈಲು ನಿರ್ವಹಣೆಗೆಂದು ವಾರ್ಷಿಕವಾಗಿ ರೂ.835 ಕೋಟಿ ಅನುದಾನ ಒದಗಿಸುತ್ತಿತ್ತು. ಈ ಅನುದಾನದ ಪ್ರಮಾಣವು 2024ರ ಹೊತ್ತಿಗೆ 7,550 ಕೋಟಿ ರೂಪಾಯಿಗೆ ಹೆಚ್ಚಾಗಿದೆ ಎಂದು ತಮ್ಮ ಬಿಜೆಪಿ ಸರ್ಕಾರ ಸಾಧನೆ ಬಗ್ಗೆ ತಿಳಿಸಿದರು.
2014ರವರೆಗೆ ಕರ್ನಾಟಕದಲ್ಲಿ ರೈಲ್ವೆ ಜೋಡಿ (ದ್ವಿಪಥ) ಹಳಿಯು 7,559 ಕಿಮೀ ಮಾತ್ರವೇ ಇದ್ದದ್ದು, 2024ರ ವೇಳೆಗೆ 32 ಸಾವಿರ ಕಿಲೋ ಮೀಟರ್ ವರೆಗೆ ನಿರ್ಮಾಣ ಮಾಡಲಾಗಿದೆ. ಕರ್ನಾಟಕದಲ್ಲಿ ಶೇಕಡಾ 93.7ರಷ್ಟು ಇಲೆಕ್ಟಿಫಿಕೇಶನ್ ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಯಾವೆಲ್ಲ ರೈಲ್ವೆ ಯೋಜನೆಗಳು ಬಾಕಿ ಇವೆ, ಅವುಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ದೇಶದ 1,320 ರೈಲು ನಿಲ್ದಾಣಗಳನ್ನು 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ ಗೊಳಿಸಲಾಗುತ್ತಿದೆ. ರಾಜ್ಯದ 61 ನಿಲ್ದಾಣಗಳನ್ನು 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುತ್ತಿದೆ ಎಂದು ಹೇಳಿದರು.
ವಂದೇ ಭಾರತ್ ರೈಲು ವಿಸ್ತರಣೆ ದೂರವಿಲ್ಲ
ಬೆಂಗಳೂರಿನಿಂದ ಧಾರವಾಡದವರೆಗಿನ ಬೆಳಗಾವಿವರೆಗೆ ವಂದೇ ಭಾರತ್ ರೈಲು ವಿಸ್ತರಣೆ ಮಾಡಬೇಕೆಂಬ ಒತ್ತಾಯ ಇದೆ. ಈ ಸಂಬಂಧ ಸಂಸದ ಜಗದೀಶ್ ಶೆಟ್ಟರ್ ಅವರು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದರು. ಹುಬ್ಬಳ್ಳಿಯಲ್ಲಿ ಸಚಿವರ ಹೇಳಿಕೆ ನೋಡಿದರೆ, ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಓಡಾಡುವ ದಿನಗಳು ದೂರುವಿಲ್ಲ ಎಂದು ಗೊತ್ತಾಗುತ್ತದೆ.












Click it and Unblock the Notifications