Tumkur-Bengaluru Railway Line: ₹3,500 ಕೊಟಿ ವೆಚ್ಚದಲ್ಲಿ 04 ಹಳಿಗೆ ಅಪ್‌ಗ್ರೇಡ್ ಯೋಜನೆ
ಬೆಂಗಳೂರು, ಜುಲೈ 29: ಕೇಂದ್ರ ಸರ್ಕಾರ ಇತ್ತೀಚೆಗೆ ಕರ್ನಾಟಕಕ್ಕೆ 25 ರೈಲ್ವೆ ಯೋಜನೆಗಳನ್ನು ಅನುಮೋದಿಸಿ ಸಾವಿರಾರು ಕೋಟಿ ರೂಪಾಯಿ ಒದಗಿಸುವ ಘೋಷಣೆ ಮಾಡಿದೆ. ರಾಜ್ಯದಲ್ಲಿ ಹೊಸ ರೈಲ್ವೆ ಮಾರ್ಗಗಳು, ದ್ವಿಪಥ ಕಾಮಗಾರಿ ನಡೆಯುತ್ತಿದೆ. ತುಮಕೂರಿನಿಂದ ನೇರ ರೈಲ್ವೆ ಮಾರ್ಗ ಯೋಜನೆ ಚಾಲ್ತಿಯಲ್ಲಿರುತವಾಗಲೇ ತುಮಕೂರಿನಿಂದ ಮತ್ತೊಂದು ರೈಲ್ವೆ ಯೋಜನೆ ಶೀಘ್ರವೇ ಆರಂಭವಾಗಲಿದೆ. ಈ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ.
ಬೆಂಗಳೂರು-ತುಮಕೂರು ರೈಲು ಮಾರ್ಗ ಈಗಾಗಲೇ ಇದೆ. ಉತ್ತರ ಕರ್ನಾಟಕದಿಂದ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ರೈಲುಗಳು ಬರುತ್ತವೆ. ಈ ತುಮಕೂರು-ಬೆಂಗಳೂರು ಮಧ್ಯ ಟ್ರ್ಯಾಕ್ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ ಇದೆ. ಅಷ್ಟೇ ಅಲ್ಲದೇ ಎರಡು ಹಳಿ ಮಾರ್ಗದ 70.5 ಕಿಲೋ ಮೀಟರ್ ಉದ್ದದ ತುಮಕೂರು-ಬೆಂಗಳೂರ ರೈಲ್ವೆ ಮಾರ್ಗವನ್ನು ನಾಲ್ಕು ಮಾರ್ಗಗಳಿಗೆ (ಚತುಷ್ಪಥ) ಹೆಚ್ಚಿಸಲು ಉದ್ದೇಶಿಸಲಾಗಿದೆ. ಸದ್ಯ ಯೋಜನೆಯು ಪ್ರಾಥಮಿಕ ಹಂತದಲ್ಲಿದೆ.

ರಾಜಧಾನಿಯಿಂದ ವಿವಿಧೆಡೆ ತೆರಳುವ ರೈಲುಗಳ ಸಂಖ್ಯೆ ಹೆಚ್ಚು. ಬೆಂಗಳೂರು ಬಿಟ್ಟರೆ ತುಮಕೂರು ವ್ಯಾಪಕವಾಗಿ ಅಭಿವೃದ್ಧಿಗೊಳ್ಳುತ್ತಿರುವ ಪ್ರಮುಖ ಜಿಲ್ಲೆಯಾಗಿದೆ. ಈಗಾಗಲೇ ತುಮಕೂರಿಗೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆಗೆ ಪ್ಲಾನ್ ಮಾಡಲಾಗಿದೆ. ಇದೀಗ ತುಮಕೂರು-ಬೆಂಗಳೂರು ಮಧ್ಯದ ರೈಲ್ವೆ ಲೈನ್ ಅನ್ನು ನಾಲ್ಕು ಹಳಿಗಳಿಗೆ ಮೇಲರ್ಜೆಗೆ ಏರಿಸಲು ತಿರ್ಮಾನಿಸಲಾಗಿದೆ. ಶೀಘ್ರವೇ ಕಾಮಗಾರಿ ಆರಂಭ ಸಂಬಂಧ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರು.
ಚತುಷ್ಪಥ ಯೋಜನೆಗೆ ₹3,500 ಕೋಟಿ ಟೆಂಡರ್
ಮೊನ್ನೆಯಷ್ಟೇ ಪಾವಗಡದ ರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್ ಫೌಂಡೇಶನ್, ಎಂಎಸ್ ಟ್ರಸ್ಟ್ ಮತ್ತು ಎಸ್ ಆರ್ ಚಂದ್ರಶೇಖರ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಟ್ರಸ್ಟ್ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಯೋಜನೆ ಕುರಿತು ವಿ.ಸೋಮಣ್ಣ ಅವರು ಮಾನತಾಡಿದರು. ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರವು ಹೆಚ್ಚಿನ ಆದ್ಯತೆ ಒದಗಿಸುತ್ತಿದೆ. ತುಮಕೂರು-ಬೆಂಗಳೂರು ಮಾರ್ಗವನ್ನು ನಾಲ್ಕು ಹಳಿಗಳಿಗೆ ಮೇಲ್ದರ್ಜೆಗೇರಿಸುವ ಯೋಜನೆಗೆ ಬರೋಬ್ಬರಿ 3,500 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ ಎಂದು ತಿಳಿಸಿದರು.
ಸದ್ಯ ಈ ಯೋಜನೆಯ ವಿವರವಾದ ವರದಿ ಕೆಲವೇ ತಿಂಗಳಲ್ಲಿ ಸಲ್ಲಿಕೆ ಆಗಲಿದೆ. ಟೆಂಡರ್ ಪ್ರಕ್ರಿಯೆ ಆಗುತ್ತಿದ್ದಂತೆ ಕಾಮಗಾರಿ ಶುರವಾಗಲಿದೆ. ಮತ್ತೊಂದೆಡೆ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಹೊಸ ಮಾರ್ಗ ಸಿದ್ಧಪಡಿಸಲಾಗುತ್ತದೆ. ತುಮಕೂರು, ಕೊರಟಗೆರೆ ಇತರ ಭಾಗಗಳಲ್ಲಿ ಭೂಮಿ ಸ್ವಾಧೀನ ಪೂರ್ಣಗೊಂಡಿದೆ. ಈ ಸ್ವಾಧೀನ ಭೂಮಿ ಮೇಲೆ ಕಾಮಗಾರಿ ಆರಂಭಕ್ಕೆ ಸುಮಾರು 651 ಕೋಟಿ ರೂಪಾಯಿ ಟೆಂಡರ್ ಆಹ್ವಾನಿಸಲಾಗಿದೆ.
ಇಷ್ಟು ಮಾತ್ರವಲ್ಲದೇ ತುಮಕೂರು ಕಡೆಗೆ ಸಂಪರ್ಕ ಹೊಂದಿದೆ ಬೆಂಗಳೂರು ಉಪನಗರ ರೈಲ್ವೆ ಜಾಲವು ಈ ನಾಲ್ಕು ಮಾರ್ಗಗಳ ವ್ಯಾಪ್ತಿಗೆ ತರುವ ಚಿಂತನೆ ಇದೆ. 2025 ರ ಅಂತ್ಯಕ್ಕೆ ಪ್ರಾಥಮಿಕ ಕಾರ್ಯಗಳು ಪೂರ್ಣಗೊಂಡು ಯೋಜನೆ ಅನುಷ್ಠಾನಕ್ಕೆ ವೇಗ ನೀಡಲಾಗುತ್ತದೆ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ.












Click it and Unblock the Notifications