ಬಿಡಿಎ ಅಧ್ಯಕ್ಷರು, ಆಯುಕ್ತರು ಇಬ್ಬರಿಗೂ ಸಂಕಷ್ಟ! ಏ.21ಕ್ಕೆ ಪಿಐಎಲ್ ವಿಚಾರಣೆ
ಬೆಂಗಳೂರು, ಏ.13. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ಮತ್ತು ಆಯುಕ್ತ ಎಂ.ಬಿ.ರಾಜೇಗೌಡ ಇಬ್ಬರಿಗೂ ಸಂಕಷ್ಟ ಎದುರಾಗಿದೆ.
ಅವರಿಬ್ಬರ ನೇಮಕ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಅಂತಿಮ ವಿಚಾರಣೆಯನ್ನು ಹೈಕೋರ್ಟ್ ಏ.21ಕ್ಕೆ ನಿಗದಿಪಡಿಸಿದೆ. ಅದರ ಜೊತೆ ಸುಪ್ರೀಂಕೋರ್ಟ್‌ನಲ್ಲಿ ಆಯುಕ್ತರ ಹುದ್ದೆ ಸೇರಿದಂತೆ ಅಧಿಕಾರಿಗಳ ವರ್ಗಾವಣೆಗೆ ತಡೆ ಇರುವ ವಿಚಾರ ಮುನ್ನೆಲೆಗೆ ಬಂದಿದೆ.
ಕೆಎಎಸ್ ಶ್ರೇಣಿಯಿಂದ ಐಎಎಸ್‌ಗೆ ಬಡ್ತಿ ಪಡೆದು ಬಿಡಿಎ ಆಯುಕ್ತರಾಗಿ ಎಂ.ಬಿ. ರಾಜೇಶ್ ಗೌಡ ನೇಮಕ ಪ್ರಶ್ನಿಸಿ ಪಿಐಎಲ್ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತು.
ಆಗ ಆಯುಕ್ತರ ಪರ ವಾದ ಮಂಡಿಸಿದ ಹಿರಿಯ ವಕೀಲರು, ವಿಭಾಗೀಯ ಆಯುಕ್ತ ದರ್ಜೆ ಈಗ ಅಸ್ತಿತ್ವದಲ್ಲಿಲ್ಲ. ಅಲ್ಲದೇ ಸದ್ಯಕ್ಕೆ ಬಿಡಿಎ ಅಧಿಕಾರಿಗಳನ್ನು ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಆಗ ಸಿಟ್ಟಿದ ಸಿಜೆ,''ಹುದ್ದೆಗೆ ಅರ್ಹತೆ ಇಲ್ಲದವರನ್ನು ಏಕೆ ಮುಂದುವರಿಸಬೇಕು? ಸುಪ್ರೀಂಕೋರ್ಟ್ ಅರ್ಹತೆ ಇಲ್ಲದವರ ನೇಮಕಕ್ಕೆ ಸೂಚಿಸಿಲ್ಲ. ಬಿಡಿಎ ಅಧ್ಯಕ್ಷ, ಆಯುಕ್ತ ಇಬ್ಬರ ವಿರುದ್ದವೂ ಪಿಐಎಲ್ ಸಲ್ಲಿಕೆಯಾಗಿದೆಯಲ್ಲಾ, ಏನು ಮಾಡುವುದು'' ಎಂದು ಪ್ರಶ್ನಿಸಿತು. ಕೊನೆಗೆ ನ್ಯಾಯಪೀಠ ವಿಚಾರಣೆ ಏ.21ಕ್ಕೆ ನಿಗದಿಪಡಿಸಿತು.
ಮೇಲ್ನೋಟಕ್ಕೆ ಸರಿಯಿಲ್ಲ: ಕಳೆದ ಏ.6ರಂದು ವಿಚಾರಣೆ ನಡೆಸಿದ್ದ ನ್ಯಾಯಪೀಠ, ಕೆಎಎಸ್ ಶ್ರೇಣಿಯಿಂದ ಐಎಎಸ್‌ಗೆ ಬಡ್ತಿ ಪಡೆದಿರುವ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಬಹುದೇ ಎಂದು,ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು.
ಅಲ್ಲದೆ, ಬಿಡಿಎ ಆಯುಕ್ತರ ನೇಮಕಾತಿಯಲ್ಲಿ ಮೇಲ್ನೋಟಕ್ಕೆ ಲೋಪವಾಗಿರುವಂತೆ ತೋಚುತ್ತಿದೆ, ಇಂತಹ ವಿಚಾರಗಳಲ್ಲಿ ನ್ಯಾಯಾಲಯ ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ ಹಾಗಾಗಿ ನೇಮಕವನ್ನು ರದ್ದು ಮಾಡಬಾರದೇಕೇ ಎಂಬ ಇಂಗಿತವನ್ನು ವ್ಯಕ್ತಪಡಿಸಿದರು.
ಬಿಡಿಎ ಆಯುಕ್ತರನ್ನಾಗಿ ಎಂ.ಬಿ. ರಾಜೇಶ್ ಗೌಡ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ವಕೀಲ ಜಿ.ಮೋಹನ್ ಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
ಅರ್ಜಿದಾರರ ಪರ ವಕೀಲರು, ಬಿಡಿಎ ಕಾಯ್ದೆಯಲ್ಲಿ ಆಯುಕ್ತರನ್ನು ನೇಮಿಸುವ ಸಂಬಂಧ ಅರ್ಹತೆಗಳನ್ನು ವಿವರಿಸಲಾಗಿದೆ. ಅದರ ಪ್ರಕಾರ, ಪ್ರಾದೇಶಿಕ ಆಯುಕ್ತರ ಶ್ರೇಣಿಗಿಂತ ಕೆಳಗಿನ ಶ್ರೇಣಿಯ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡುವಂತಿಲ್ಲ. ಹಾಲಿ ಬಿಡಿಎ ಆಯುಕ್ತ ರಾಜೇಶ್ ಗೌಡ ಕೆಎಎಸ್ ಅಧಿಕಾರಿಯಾಗಿದ್ದರು, 2018ರಲ್ಲಿ ಐಎಎಸ್ ಶ್ರೇಣಿಗೆ ಪದೋನ್ನತಿ ಹೊಂದಿದ್ದಾರ. ಪ್ರಾದೇಶಿಕ ಆಯುಕ್ತರಾಗಲು 14-15 ವರ್ಷ ಸೇವೆ ಸಲ್ಲಿಸಿರಬೇಕು ಎಂದರು.

ಅಲ್ಲದೆ ನ್ಯಾಯಪೀಠ, ಬಿಡಿಎ ಆಯುಕ್ತರ ನೇಮಕಾತಿಯಲ್ಲಿ ಮೇಲ್ನೋಟಕ್ಕೆಲೋಪ ಆಗಿರುವಂತೆ ತೋಚುತ್ತಿದೆ. ಆಕ್ಷೇಪಣೆ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಮೂರು ದಿನಗಳ ಬಳಿಕ ಮತ್ತೆ ಅರ್ಜಿ ವಿಚಾರಣೆಗೆ ನಿಗದಿಪಡಿಸುತ್ತೇವೆ. ಅಷ್ಟರೊಳಗೆ ಆಕ್ಷೇಪಣೆ ಸಲ್ಲಿಸಬೇಕು. ಮೇಲ್ನೋಟಕ್ಕೆ ಲೋಪ ಕಂಡು ಬಂದಾಗ ನಾವೇಕೆ ನಿಮಗೆ ಸಮಯ ನೀಡಬೇಕು ಎಂದು ಪ್ರಶ್ನಿಸಿತು.
Recommended Video
ಅರ್ಜಿದಾರರ ವಾದವೇನು?: ರಾಜೇಶ್ ಗೌಡ ಅವರ ನೇಮಕ ಆದೇಶ ಹಿಂಪಡೆಯಬೇಕು ಹಾಗೂ ಅರ್ಹ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಬೇಕೆಂದು ನ.30ರಂದು ಸಲ್ಲಿಸಿರುವ ಮನವಿ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿದಾರರು, ಪಿಐಎಲ್ ಇತ್ಯರ್ಥವಾಗುವರೆಗೂ ಬಿಡಿಎ ಆಯುಕ್ತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸದಂತೆ ರಾಜೇಶ್ ಗೌಡ ಅವರನ್ನು ನಿರ್ಬಂಧಿಸಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಕಾಯ್ದೆ- 1987ರ ಸೆಕ್ಷನ್ 12ರ ಪ್ರಕಾರ ವಿಭಾಗೀಯ ಆಯುಕ್ತರಿಗಿಂತ ಕಡಿಮೆ
ಇರದ ಶ್ರೇಣಿಯ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಬೇಕಿದೆ. ಆದರೆ, ಪ್ರಾದೇಶಿಕ ಆಯುಕ್ತರಿಗಿಂತ ಕಡಿಮೆ ಶ್ರೇಣಿಯ ಅಧಿಕಾರಿಯಾಗಿರುವ ಎಂ.ಬಿ. ರಾಜೇಶ್ ಗೌಡ ಅವರನ್ನು ಆಯುಕ್ತರಾಗಿ ನೇಮಿಸಿ ಸರ್ಕಾರ ಆದೇಶಿಸಿದೆ. ಅರ್ಹತೆ ಇಲ್ಲದವರನ್ನು ನೇಮಿಸುವುದರಿಂದ ಆ ಹುದ್ದೆಯ ಕರ್ತವ್ಯಗಳನ್ನು ಪರಿಣಾಮಕಾರಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.












Click it and Unblock the Notifications