ಮಾಜಿ ಮೇಯರ್ ಸಂಪತ್ ರಾಜ್‌ಗೆ ಮತ್ತಷ್ಟು ಸಂಕಷ್ಟ!
ಬೆಂಗಳೂರು, ನವೆಂಬರ್ 04 : ಬೆಂಗಳೂರು ನಗರದ ಮಾಜಿ ಮೇಯರ್, ಕಾಂಗ್ರೆಸ್ ನಾಯಕ ಸಂಪತ್ ರಾಜ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಆಸ್ಪತ್ರೆಯಿಂದ ಪರಾರಿಯಾಗಿರುವ ಅವರಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಸಂಪತ್ ರಾಜ್ ಆರೋಪಿ. ಕೋವಿಡ್ ಕಾರಣದಿಂದಾಗಿ ಅವರನ್ನು ಪೊಲೀಸರು ಬಂಧಿಸಿರಲಿಲ್ಲ.
ಸಂಪತ್ ರಾಜ್ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಿದೆ.

ಕೋವಿಡ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಪತ್ ರಾಜ್ ಕಳೆದ ಗುರುವಾರ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಡಿಸ್ಚಾರ್ಜ್ ಮಾಡುವಾಗ ಪೊಲೀಸರಿಗೆ ತಿಳಿಸಬೇಕು ಎಂದು ಸೂಚನೆಯನ್ನು ಆಸ್ಪತ್ರೆ ಸಿಬ್ಬಂದಿ ಪಾಲನೆ ಮಾಡಿಲ್ಲ.
ಬೆಂಗಳೂರು ನಗರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿಯೂ ಸಂಪತ್ ರಾಜ್ ಹೆಸರು ಉಲ್ಲೇಖಿಸಿದ್ದಾರೆ. ಈಗ ಅವರು ಆಸ್ಪತ್ರೆಯಿಂದ ಪರಾರಿಯಾಗಿದ್ದು, ಪೊಲೀಸರು ಹುಡುಕಾಡ ನಡೆಸುತ್ತಿದ್ದಾರೆ.
ಗಲಭೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಎಸಿಪಿ ವೇಣುಗೋಪಾಲ್ ಅವರ ತಂಡ ಪುಲಿಕೇಶಿ ನಗರದಲ್ಲಿರುವ ಸಂಪತ್ ರಾಜ್ ಮನೆಗೆ ನೋಟಿಸ್ ಅಂಟಿಸಿ ಬಂದಿದೆ. ನೋಟಿಸ್ ನೋಡಿದ ತಕ್ಷಣ ಸಿಸಿಬಿ ಕಚೇರಿಗೆ ವಿಚಾರಣೆಗೆ ಬರಬೇಕು ಎಂದು ಸೂಚನೆ ನೀಡಲಾಗಿದೆ.
ಮತ್ತೊಂದು ಕಡೆ ಸಿಸಿಬಿ ಪೊಲೀಸರು ಆಸ್ಪತ್ರೆಗೆ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸಂಪತ್ ರಾಜ್ ಅಕ್ಕಪಕ್ಕದ ರಾಜ್ಯಗಳಲ್ಲಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿ ನವೆಂಬರ್ 15ಕ್ಕೆ ಮುಂದೂಡಲಾಗಿದೆ. ಆದ್ದರಿಂದ ಸಂಪತ್ ರಾಜ್‌ಗೆ ಸದ್ಯಕ್ಕೆ ಜಾಮೀನು ಸಿಗುವುದಿಲ್ಲ. ಅಷ್ಟರೊಳಗೆ ಪೊಲೀಸರಿಗೆ ಸಿಕ್ಕಿದರೆ ಬಂಧಿಸಲಾಗುತ್ತದೆ.












Click it and Unblock the Notifications