ಆ.6ರಿಂದ ಎಎಪಿಯಿಂದ 'ತ್ರಿವರ್ಣ ಸಂಭ್ರಮ ಬೈಕ್ ರ‍್ಯಾಲಿ'
ಬೆಂಗಳೂರು ಆಗಸ್ಟ್ 02: ಭಾರತ ದೇಶ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಆಮ್ ಆದ್ಮಿ ಪಕ್ಷ (ಎಎಪಿ) ಬೆಂಗಳೂರಿನಲ್ಲಿ 10ದಿನ ತ್ರಿವರ್ಣ ಧ್ವಜದೊಂದಿಗೆ ಬೈಕ್ ರ‍್ಯಾಲಿ ಸಂಭ್ರಮ ನಡೆಸಲಿದೆ ಎಂದು ಎಎಪಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ನಾವು ಅಮೃತ ಮಹೋತ್ಸವದ ಸಂದರ್ಭದಲ್ಲಿದ್ದೇವೆ. ಹೀಗಾಗಿ ಭ್ರಷ್ಟಾಚಾರ ಮುಕ್ತ ಬೆಂಗಳೂರು ನಿರ್ಮಿಸುವ ಸಂಕಲ್ಪದೊಂದಿಗೆ ರಾಜಧಾನಿಯಲ್ಲಿ ಎಎಪಿ ಆಗಸ್ಟ್ 6ರಂದು ಶನಿವಾರದಿಂದ ಆಗಸ್ಟ್ 15ರವರೆಗೆ ತ್ರಿವರ್ಣ ಸಂಭ್ರಮ ಬೈಕ್ ರ‍್ಯಾಲಿ ನಡೆಸಲು ನಿರ್ಧರಿಸಿದೆ ಎಂದರು.
ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ತ್ರಿವರ್ಣ ಧ್ವಜ ಹೊತ್ತ ಬೈಕ್‌ಗಳ ರ‍್ಯಾಲಿ ಸಾಗಲಿದೆ. ಆಗಸ್ಟ್ 15ರಂದು ಧಜ್ವಾರೋಹಣ ಮೂಲಕ ರ‍್ಯಾಲಿ ಮುಕ್ತಾಯಗೊಳ್ಳಲಿದೆ. ಈ ವೇಳೆ ನವ ಬೆಂಗಳೂರು ನಿರ್ಮಾಣ ಕುರಿತು ಜನರಲ್ಲಿ ಎಎಪಿ ಕಾರ್ಯಕರ್ತರು ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು.

ಅವ್ಯವಸ್ಥೆಯ ಆಗರವಾದ ರಾಜಧಾನಿ
ಬಿಜೆಪಿಯ ಭ್ರಷ್ಟ ಆಡಳಿತದಿಂದಾಗಿ ಬೆಂಗಳೂರಿನ ಜನರು ಸಾಲು ಸಾಲು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಸಣ್ಣ ಸೇವೆ ಪಡೆಯಲು ಕೂಡ ಲಂಚ ನೀಡಬೇಕಾಗಿದೆ. ರಸ್ತೆಗಳಲ್ಲಿ ಗುಂಡಿಗಳು, ಅಸಮರ್ಪಕ ಪಾದಚಾರಿ ಮಾರ್ಗಗಳು, ಅವ್ಯವಸ್ಥಿತ ಕಸ ವಿಲೇವಾರಿ, ಅನಾರೋಗ್ಯದಿಂದ ಬಳಲುತ್ತಿರುವ ಆರೋಗ್ಯ ಕೇಂದ್ರಗಳು, ಮೂಲ ಸೌಕರ್ಯಗಳಿಲ್ಲದ ಸರ್ಕಾರಿ ಶಾಲೆಗಳು, ರಾಜಕಾಲುವೆ ಒತ್ತುವರಿ ಮುಂತಾದ ಅನೇಕ ಸಮಸ್ಯೆಗಳು ಬೆಂಗಳೂರಿಗರನ್ನು ಕಾಡುತ್ತಿವೆ. ಆದರೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯು ಈ ಕುರಿತು ತೀವ್ರ ನಿರ್ಲಕ್ಷ್ಯ ತೋರುತ್ತಿದೆ ಎಂದು ಮೋಹನ್ ದಾಸರಿ ಆರೋಪಿಸಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಮಾತನಾಡಿ, 'ಬೆಂಗಳೂರಿನ ಸಮಸ್ಯೆಗಳು ಬಗೆಹರಿಯಬೇಕಾದರೆ ಆಮ್ ಆದ್ಮಿ ಪಾರ್ಟಿಯು ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಬೇಕು. ಬೇರೆ ಪಕ್ಷಗಳ ಭ್ರಷ್ಟ ಆಡಳಿತವನ್ನು ಈಗಾಗಲೇ ಜನರು ನೋಡಿದ್ದಾರೆ. ಅವುಗಳ ಬಳಿ ನಗರದ ಸಮಸ್ಯೆಗಳಿಗೆ ಪರಿಹಾರವಿಲ್ಲವೆಂದು ಜನರಿಗೆ ಮನವರಿಕೆಯಾಗಿದೆ. ಭ್ರಷ್ಟಾಚಾರ ಮುಕ್ತ ಬೆಂಗಳೂರು ನಿರ್ಮಿಸುವ ನಮ್ಮ ಸಂಕಲ್ಪವನ್ನು ಪೂರೈಸಲು ಜನತೆ ಬೆಂಬಲ ನೀಡುವ ದೃಢ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ಈ ವೇಳೆ ಎಎಪಿ ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ ಗೌಡ, ವಕ್ತಾರೆ ಉಷಾ ಮೋಹನ್, ವಕೀಲರಾದ ಲೋಹಿತ್, ಮಿಷೆಲ್ ನರೋನಾ ಹಾಗೂ ದೀಪಿಕಾ ಶಯನ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications