Tragedy love story: ಕಾಲೇಜಿನಲ್ಲಿ ಟಿಸಿಲೊಡೆದ ಪ್ರೀತಿ ಬೆಂಗಳೂರಿನಲ್ಲಿ ಬೆಂಕಿಗಾಹುತಿ !
ಬೆಂಗಳೂರು, ಮಾ.18: ನಿಮ್ಮ ಪ್ರೀತಿಯ ಹುಡುಗನ ಆಯ್ಕೆ ಮುನ್ನ ಸಾವಿರ ಸಲ ಆಲೋಚಿಸಿ. ಪ್ರೀತಿಯ ಮೋಡಿ ಮಾತುಗಳು ಎಲ್ಲವೂ ಸತ್ಯ ಆಗಿರಲ್ಲ! ಪ್ರೀತಿಯ ಸಂಬಂಧ ಅಮ್ಮ - ಅಮ್ಮ ನ ಪ್ರೀತಿಗಿಂತಲೂ ಶ್ರೇಷ್ಠವಾಗಿರುತ್ತದೆ ಎಂದು ಭಾವಿಸಿ ಹೂವಿನಂತ ಮಾತುಗಳಿಗೆ ಮರುಳಾದರೆ ಒಮ್ಮೆ ಬದುಕನ್ನೇ ಕಳೆದುಕೊಳ್ಳಬೇಕಾದೀತು. ಅಂತಹ ದುರಂತ ಘಟನೆಯೊಂದು ಬೆಂಗಳೂರಿನಲ್ಲಿ ಸಂಭವಿಸಿದೆ.
ಆಕೆ ಇಂಜಿನಿಯರಿಂಗ್ ಪದವಿ ಮಾಡಿದ್ದ ಯುವತಿ. ಮೂಲತಃ ಉತ್ತರ ಕರ್ನಾಟಕದ ತಾಳಿಕೋಟೆಯವಳು. ದಾನೇಶ್ವರಿ ತಂದೆ ತಹಶೀಲ್ದಾರ್ ಎಂದು ಹೇಳಲಾಗುತ್ತಿದೆ. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಆಕೆಗೆ ಒಬ್ಬ ಪರಿಚಯವಾಗಿದ್ದ. ನೋಡಲು ತುಂಬಾ ಸುಂದರವಾಗಿದ್ದ. ಇಬ್ಬರ ಪರಿಚಯ ಪರಸ್ಪರ ಪ್ರೀತಿಯಾಗಿ ಮಾರ್ಪಟ್ಟಿತ್ತು. ಐದು ವರ್ಷ ಎಂಜಾಯ್ ಮಾಡಿದ್ದರು. ಇನ್ನೇನು ಸಪ್ತಪದಿ ತುಳಿದು ಸಂಸಾರ ಮಾಡಬೇಕಿತ್ತು. ಮದುವೆ ಪ್ರಸ್ತಾಪವೂ ಮುಂದೆ ಬಂದಿತ್ತು. ಆಮೇಲೆ ಅಗಿದ್ದೇ ಬೇರೆ. ಪ್ರೀತಿಸಿದ ಹುಡುಗಿ ಈಗ ಮಸಣ ಸೇರಿದ್ದಾಳೆ. ಅತ ಜೈಲು ಪಾಲಾಗಿದ್ದಾನೆ. ಐದು ವರ್ಷದ ಪ್ರೀತಿ ಪ್ರೇಮ ಕಹಾನಿ ಸ್ಟೋರಿ ಇಲ್ಲಿದೆ ನೋಡಿ.
ತಾಳಿಕೋಟೆ ಎಂದರೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯ ಮತ್ತು ಸುಲ್ತಾನರ ನಡುವೆ ನಡೆದ ತಾಳಿಕೋಟೆ ಕದನ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ವಿಜಯನಗರ ಸಂಸ್ಥಾನ ಅಸ್ತಿತ್ವ ಕಳೆದುಕೊಂಡ ಯುದ್ಧ. ಸುಲ್ತಾನರು ಹಾಗೂ ವಿಜಯನಗರ ಸಾಮ್ರಾಜ್ಯದ ನಡುವೆ ಘೋರ ಯುದ್ಧ ನಡೆದಿದ್ದು ತಾಳಿಕೋಟೆಯಲ್ಲಿ. ಈ ಐತಿಹಾಸಿಕ ಊರಿನವನಳು ದಾನೇಶ್ವರಿ. ಇಂಜಿನಿಯರಿಂಗ್ ಪದವಿ ಮುಗಿಸಿದ್ದಳು.

ಪ್ರೀತಿಸಿದವನನ್ನು ನಂಬಿ ಬೆಂಗಳೂರಿಗೆ ಬಂದಿದ್ದಳು
ದಾನೇಶ್ವರಿಗೆ ಶಿವಕುಮಾರ್ ಎಂಬಾತ ಐದು ವರ್ಷದ ಹಿಂದೆ ಪರಿಚಯವಾಗಿದ್ದ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವೀರಸಂದ್ರ ಗೇಟ್ ಬಳಿ ಇರುವ ಕಂಪನಿಯಲ್ಲಿ ಶಿವಕುಮಾರ್ ಕೆಲಸ ಮಾಡುತ್ತಿದ್ದ. ಇಬ್ಬರು ಪರಸ್ಪರ ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಬೇಕಾದ ಕಡೆ ಸುತ್ತಾಡಿದ್ದಳು. ಮನೆಯಲ್ಲಿ ಇಷ್ಟವಿಲ್ಲದಿದ್ದರೂ ಪ್ರೇಮಿಯನ್ನೇ ನಂಬಿ ಬಂದಿದ್ದಳು ದಾನೇಶ್ವರಿ. ಇನ್ನೇನು ಇಬ್ಬರೂ ಒಪ್ಪಿ ಮದುವೆಯಾಗಬೇಕಿತ್ತು. ಶಿವಕುಮಾರ್ ಮದುವೆಯಾಗಲು ನಿರಾಕರಿಸಿದ್ದ. ದಾನೇಶ್ವರಿಗೆ ದಿಕ್ಕು ತೋಚದಂತಾಗಿತ್ತು. ಹೆತ್ತವರ ವಿರೋಧದ ನಡುವೆ ಪ್ರೀತಿಸಿದ ಹುಡುಗ ಕೈ ಕೊಟ್ಟರೆ ಜೀವನ ಬೀದಿ ಪಾಲಾಗುತ್ತದೆ ಎಂಬ ಆತಂಕ ಆಕೆಯಲ್ಲಿ ಮನೆ ಮಾಡಿತ್ತು. ತನ್ನನ್ನು ಮದುವೆಯಾಗುವಂತೆ ಶಿವಕುಮಾರ್ ನನ್ನು ಪೀಡಿಸಿತೊಡಗಿದಳು. ಇದಕ್ಕೆ ಶಿವಕುಮಾರ್ ನಿರಾಕರಿಸುತ್ತಿದ್ದ. ಒಮ್ಮೆ ಆತ ಕೆಲಸ ಮಾಡುವ ಕಾರ್ಖಾನೆ ಸಮೀಪವೇ ಹೋಗಿ ಕತ್ತು ಪಟ್ಟಿ ಹಿಡಿದು ಮದುವೆಯಾಗು ಎಂದು ಕೇಳಿದ್ದಳು. ನಿನ್ನ ನಂಬಿ ಬಂದಿದ್ದೇನೆ. ಐದು ವರ್ಷ ನನ್ನ ಜತೆ ಇದ್ದು ಈಗ ಮದುವೆ ಬೇಡ ಎಂದರೆ ನನ್ನ ಜೀವನ ಏನಾಗಬೇಕು. ನನ್ನ ಬದುಕು ಹಾಳು ಮಾಡಬೇಡ ಎಂದು ಪರಿ ಪರಿ ಕೇಳಿಕೊಂಡಿದ್ದಳು.

ಐದು ವರ್ಷ ಪ್ರೀತಿ ಹೆಸರಲ್ಲಿ ದಾನೇಶ್ವರಿ ಮಾಡಿದ್ದ ತ್ಯಾಗ ಶಿವಕುಮಾರ್‌ಗೆ ನೆನಪಿಗೆ ಬರಲಿಲ್ಲ. ದಾನೇಶ್ವರಿಯಿಂದ ದೂರವಾಗುವ ದೃಢ ತೀರ್ಮಾನ ತೆಗೆದುಕೊಂಡು ಬಿಟ್ಟಿದ್ದ.
ಹೀಗಿರುವಾಗಲೇ ಎರಡು ದಿನದ ಹಿಂದೆ ತನ್ನ ಪ್ರಿಯತಮೆ ಮೇಲೆ ಪೆಟ್ರೋಲ್ ಸುರಿದು ಶಿವಕುಮಾರ್ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಇದರಿಂದ ಸುಟ್ಟು ಕರಕಲಾದ ದಾನೇಶ್ವರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ. ಐದು ವರ್ಷದ ಪ್ರೀತಿ ಬೆಂಕಿಯಲ್ಲಿ ದಹನವಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಶಿವಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ.

2018 ರಲ್ಲಿ ಬಿಜಾಪುರದ ಕಾಲೇಜಿನಲ್ಲಿ ಓದುವಾಗ ಇಬ್ಬರು ಪರಿಚಯವಾಗಿದ್ದರು. ವೀರಸಂದ್ರದ ಕಂಪನಿಯಲ್ಲಿ ಶಿವಕುಮಾರ್‌ಗೆ ಕೆಲಸ ಸಿಕ್ಕಿತ್ತು. ಪ್ರೀತಿಸುವ ವೇಳೆ ಕೆಲಸಕ್ಕೆ ಸೇರಿ ಸೆಟ್ಲಾದ ಬಳಿಕ ಮದುವೆಯಾಗ್ತೀನಿ ಎಂದು ಕೆನ್ನೆ ಸವರಿದ್ದ ಶಿವಕುಮಾರ್ ಇದೀಗ ಕೊಳ್ಳಿ ಇಟ್ಟಿದ್ದಾನೆ. ದಾನೇಶ್ವರಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹೊತ್ತಿಕೊಂಡ ಪರಿಣಾಮ ಪ್ರಾಣ ಪಕ್ಷಿ ಹಾರಿ ಹೋಗಿದೆ. ಪ್ರೇಮಿ ಬೆಂಕಿ ಇಟ್ಟನೇ ಇಲ್ಲವೇ ಪ್ರೀತಿ ಸಿಗದೇ ಆಕೆಯೇ ಬೆಂಕಿ ಇಟ್ಟುಕೊಂಡಳಾ ಎಂಬ ಅನುಮಾನ ಮೂಡಿದೆ. ಶಿಕಕುಮಾರ್ ಹತ್ಯೆ ಮಾಡಿರುವ ಸಂಶಯದ ಮೇಲೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡಿದ್ದಾರೆ. ಐದು ವರ್ಷದ ಪ್ರೀತಿ ಕೊನೆಗೂ ಬೆಂಕಿಯಲ್ಲಿ ದಹನವಾಗಿದೆ.












Click it and Unblock the Notifications